ಜಾತಿ ಗಣತಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಗುರುತಿಸುವುದಕ್ಕೆ ಬಿಜೆಪಿ ಲಿಂಗಾಯತ ನಾಯಕರ ವಿರೋಧ

ಜಾತಿಗಣತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕ್ರಿಶ್ಚನ್ ಜೊತೆ ಹಿಂದೂ ಜಾತಿಗಳ ಹೆಸರು ಇರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಇದರ ಮಧ್ಯೆ ಲಿಂಗಾಯತ ಲಡಾಯಿಯೂ ಶುರುವಾಗಿದೆ. ಲಿಂಗಾಯತರಲ್ಲಿ ಪ್ರತ್ಯೇಕ ಧರ್ಮದ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಯಾವ ಕಾಲಂನಲ್ಲಿ ಏನು ಬರೆಸಬೇಕು ಎಂಬುದು ಜಿಜ್ಞಾಸೆಯಾಗಿದೆ.

ಜಾತಿ ಗಣತಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಗುರುತಿಸುವುದಕ್ಕೆ ಬಿಜೆಪಿ ಲಿಂಗಾಯತ ನಾಯಕರ ವಿರೋಧ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Sep 17, 2025 | 8:10 AM

ಬೆಂಗಳೂರು, ಸೆಪ್ಟೆಂಬರ್ 17: ಸೋಮವಾರದಿಂದ ರಾಜ್ಯದಾದ್ಯಂತ ಜಾತಿಗಣತಿ (Caste Census) ಆರಂಭವಾಗುತ್ತಿದೆ. ಈಮಧ್ಯೆ, ಲಿಂಗಾಯತ ಸಮುದಾಯದವರಲ್ಲಿ ತಾವು ಏನೆಂದು ಬರೆಸಬೇಕು, ಧರ್ಮದ ಕಾಲಂನಲ್ಲಿ ಬರೆಸಬೇಕಾ? ಜಾತಿಯ ಕಾಲಂನಲ್ಲಿ ಬರೆಸಬೇಕಾ ಎಂಬ ಗೊಂದಲ ಸೃಷ್ಟಿಯಾಗಿದೆ. ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ ಮಹಾಸಭಾ ಸೂಚನೆ ನೀಡಿದೆ. ಆದರೆ ಈಗ ಮಹಾಸಭಾದ ಈ ನಿಲುವಿಗೆ ಬಿಜೆಪಿಯ ಲಿಂಗಾಯತ ನಾಯಕರು ಬಿನ್ನ ನಿಲುವು ತಾಳಿದ್ದಾರೆ.

ಜಾತಿಗಣತಿಯಲ್ಲಿ ಧರ್ಮದ ಕಾಲಂ ನಂಬರ್ 8ರಲ್ಲಿ 11 ಧರ್ಮಗಳನ್ನು ಗುರುತಿಸಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ್, ಸಿಖ್ ಎಂದು ನಮೂದಿಸಲಾಗಿದೆ. ಇದರಲ್ಲಿ ಕೊನೆಯ ಕಾಲಂನಲ್ಲಿ ‘ಇತರೆ’ ಎಂದೂ ಉಲ್ಲೇಖಿಸಲಾಗಿದೆ. ಇತರೆ ಕಾಲಂನಲ್ಲಿ ಧರ್ಮದ ಹೆಸರನ್ನು ಬರೆಸಬಹುದು. ಈ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸುವಂತೆ ವೀರಶೈವ ಮಹಾಸಭಾ ಸೂಚನೆ ನೀಡಿದೆ. ಆದರೆ, ಈ ನಿರ್ಧಾರವನ್ನು ಬಿಜೆಪಿ ಲಿಂಗಾಯತ ನಾಯಕರು ವಿರೋಧಿಸಿದ್ದಾರೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಲಿಂಗಾಯತ ನಾಯಕರ ಸಭೆಯಲ್ಲಿ ವಿರೋಧ

ಬೆಂಗಳೂರಿನಲ್ಲಿ ಮಂಗಳವಾರ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯತ ಲಿಂಗಾಯ ನಾಯಕರ ಸಭೆ ನಡೆಸಲಾಗಿದ್ದು, ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮದಲ್ಲಿ ಗುರುತಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಹಿಂದೂ ಧರ್ಮದ ಕಾಲಂನ ಅಡಿಯಲ್ಲೇ ಲಿಂಗಾಯತ ಎಂದು ಬರೆಸಬೇಕು. ಈ ಬಗ್ಗೆ ಲಿಂಗಾಯತರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಮಠಾಧೀಶರನ್ನು ಮನವೊಲಿಸಬೇಕು ಎಂದು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಬಿಜೆಪಿ ನಾಯಕರು ಸಚಿವ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಈಶ್ವರ್ ಖಂಡ್ರೆಯವರನ್ನು ಭೇಟಿಯಾಗಿದ್ದಾರೆ. ಗೊಂದಲ ನಿವಾರಿಸುವ ಬಗ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ, ನಮ್ಮ ಸರ್ಕಾರ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ ಎಂದರು. ಅಷ್ಟೇ ಅಲ್ಲ, ಈಗಾಗೇ ಗೊಂದಲ ಇದೆ, ಮತ್ತಷ್ಟು ಗೊಂದಲ ಸೃಷ್ಟಿಸುವುದು ಬೇಡ ಎಂದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮೂವರು ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ

ಪಂಚಮಸಾಲಿ ಲಿಂಗಾಯತರಲ್ಲೂ ಏನು ಬರೆಸಬೇಕೆಂಬ ಗೊಂದಲವಿದೆ. ಹೀಗಾಗಿ ಮೂವರು ಪಂಚಮಸಾಲಿ ಪೀಠದ ಸ್ವಾಮೀಜಿಗಳು ಬೆಂಗಳೂರಲ್ಲಿ ಇಂದು ಸಭೆ ನಡೆಸಲಿದ್ದಾರೆ. ಮಂಗಳವಾರ ಚಿತ್ರದುರ್ಗದಲ್ಲಿ ಮಾತನಾಡಿದ ಹರಿಹರ ಪೀಠದ ವಚನಾನಂದ ಶ್ರೀಗಳು, ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು ಎಂದಿದ್ದರು. ಇದಾದ ಬಳಿಕ ದಾವಣಗೆರೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ದಾಖಲಿಸಿ ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಬರೆಯುವ ಬಗ್ಗೆ ಚರ್ಚಿಸಲಾಗಿದೆ.

ಸೆಪ್ಟೆಂಬರ್ 19ಕ್ಕೆ ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ

ಇದೆಲ್ಲದರ ಮಧ್ಯೆ ಶುಕ್ರವಾರ ಅಂದ್ರೆ ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲೂ ಇದೇ ವಿಚಾರವಾಗಿ ಚರ್ಚೆ ಆಗಲಿದೆ.

ಸದ್ಯ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಜಾತಿಗಣತಿ ವೇಳೆ ಏನು ಬರೆಸಬೇಕು. ಯಾವ ಕಾಲಂನಲ್ಲಿ ಏನು ಬರೆಸಬೇಕು ಎಂಬುದರ ಕುರಿತು ಸ್ಪಷ್ಟವಾದ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತಿಲ್ಲ. ಇಂದು ನಡೆಯುವ ಪಂಚಮಸಾಲಿ ಶ್ರೀಗಳ ಸಭೆ ಮತ್ತು ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದ ಬಳಿಕ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಕ್ರಿಶ್ಚನ್ ಜೊತೆ ಹಿಂದೂ ಜಾತಿ; ರಾಜ್ಯಪಾಲರ ಅಂಗಳ ತಲುಪಿದ ಜಟಾಪಟಿ

ಈ ಮಧ್ಯೆ, ಹೊಸ ಜಾತಿಗಣತಿಗೆ ಸರ್ಕಾರ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಕ್ರಿಶ್ಚನ್ ಕಾಲಂನಲ್ಲಿ ಹಿಂದೂ ಜಾತಿಗಳ ಹೆಸರುಗಳನ್ನು ಸೇರಿಸಿರೋದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ನಿಯೋಗ ನಿನ್ನೆ ರಾಜ್ಯಪಾಲರಿಗೆ ದೂರು ನೀಡಿದೆ. ದೂರು ಕೊಡುವುದಕ್ಕೂ ಮುಂಚೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ನಾಯಕರು ಸಭೆ ಸೇರಿದ್ದರು. ದುಂಡು ಮೇಜಿನ ಸಭೆಯಲ್ಲಿ 6 ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹಿಂದೂಗಳ ಜಾತಿಯ ಪಟ್ಟಿಯಲ್ಲಿ ಕ್ರಿಶ್ಚನ್ ಹೆಸರು ಸೇರಿಸಿರೋದನ್ನು ತೆಗೆಯಬೇಕು. ಹೊಸದಾಗಿ ಸೇರಿಸಿದ47 ಹೆಸರುಗಳನ್ನ ಕೈಬಿಡಬೇಕು. ಸೇರಿದಂತೆ 6 ನಿರ್ಣಯ ಕೈಗೊಳ್ಳಲಾಗಿದೆ.

ಕ್ರಿಶ್ಚನ್ ಧರ್ಮದ ಜೊತೆ ಹಿಂದೂ ಜಾತಿಗಳ ಹೆಸರು ಇರುವ ಬಗ್ಗೆ ಸ್ಪಷ್ಟನೆ ನೀಡಿರುವ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಮಧುಸೂಧನ್, ಇದರಿಂದ ಯಾರಿಗೂ ಏನೂ ತೊಂದರೆಯಾಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಹೊತ್ತಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮದ ಜಗಳ: ಲಿಂಗಾಯತ ಸ್ವಾಮೀಜಿಗಳ ಮಧ್ಯೆ ತೀವ್ರ ಮುಸುಕಿನ ಗುದ್ದಾಟ

ಮತ್ತೊಂದೆಡೆ, ಕುರುಬ ಸಮುದಾಯವನ್ನು ಎಸ್​ಟಿ ಕೆಟಗರಿಗೆ ಸೇರಿಸುವ ಕುರಿತು ಮಂಗಳವಾರ ನಿಗದಿಯಾಗಿದ್ದ ಸಭೆ ಮುಂದೂಡಿಕೆಯಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಿಯೋಜನೆಯಾಗಿತ್ತು. ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಸಭೆ ಕರೆಯಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಭೆ ಮುಂದೂಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 am, Wed, 17 September 25