ಮುಡಾ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಮಾಜಿ ಆಯುಕ್ತ ಇಡಿ ವಶಕ್ಕೆ
ಮುಡಾ ಎಂದೇ ಕರೆಯಲ್ಪಡುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಸದ್ದು ಮಾಡುತ್ತಿದ್ದು, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಇದರ ಬೆನ್ನಲ್ಲೇ ಈ ಮುಡಾ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಬೆಂಗಳೂರು/ಮೈಸೂರು, (ಸೆಪ್ಟೆಂಬರ್ 16): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) (Muda Scam Case) ಹಗರಣ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಚುರುಕುಗೊಳಿಸಿದ್ದು, ವಿಚಾರಣೆ ಆಗಮಿಸಿದ್ದ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು.. ಮುಡಾ ಕೇಸ್‌ನಲ್ಲಿ ವಿಚಾರಣೆಗೆ ಕರೆದಿದ್ದರಿಂದ ಇಂದು(ಸೆಪ್ಟೆಂಬರ್ 16) ಬೆಂಗಳೂರಿನ ಶಾಂತಿನಗರದಲ್ಲಿ ಇಡಿ ಕಚೇರಿಗೆ ದಿನೇಶ್ ಕುಮಾರ್ ಆಗಮಿಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ವಿಚಾರಣೆ ಮಾಡಿ ಇದೀಗ ದಿನೇಶ್ ಅವರನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿದ್ದಾರೆ.
ಮುಡಾ ಅಕ್ರಮ ಪ್ರಕರಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮುಡಾದ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಮತ್ತು ದಿನೇಶ್‌ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಆದರೆ, ದಿನೇಶ್‌ಕುಮಾರ್ ವಿರುದ್ಧ ಮಾತ್ರ ತನಿಖೆ ನಡೆಸಲು ಸರ್ಕಾರ ಅನುಮತಿ ಕೊಟ್ಟಿದೆ. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ದಿನೇಶ್ ಅವರನ್ನು ವಿಚಾರಣೆಗೆ ಕರೆದು ವಶಕ್ಕೆ ಪಡೆದುಕೊಂಡಿದೆ.
ದಿನೇಶ್ ಕುಮಾರ್ ವಿರುದ್ಧ ಆರೋಪವೇನು?
ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ. 2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿನೇಶ್ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಪ್ರಕರಣ ತನಿಖೆ ತಡವಾಗಿದ್ದಕ್ಕೆ ಕೋರ್ಟ್ ಅಸಮಾಧಾನ ಹೊರಹಾಕಿದೆ. ಆರು ತಿಂಗಳಿಂದ ಯಾವುದೇ ಪ್ರಗತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ತಡವಾಗುತ್ತಿದೆ ಎಂದು ಹೇಳಲಾಗಿದೆ. ಈ ನಡುವೆ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಪೊಲೀಸರ ನಡೆಯಿಂದ ಸಮಾಜದಲ್ಲಿ ನಾನು ಅವಮಾನ ಎದುರಿಸುತ್ತಿದ್ದೇನೆ, ಮಾನಸಿಕವಾಗಿಯೂ ಕುಗ್ಗಿದ್ದೇನೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಆಗ್ರಹಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.



