ಬೆಂಗಳೂರು: ಸಿಇಟಿ ಅರ್ಜಿ ಸಲ್ಲಿಕೆಗೆ ಜುಲೈ 16ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಈವರೆಗೆ ಜುಲೈ 10ರವರೆಗೆ ಎಂದು ಇದ್ದ ಗಡುವನ್ನು ವಿಸ್ತರಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪರೀಕ್ಷಾರ್ಥಿಗಳಿಗೆ ಇನ್ನೂ ಒಂದು ವಾರದ ಕಾಲ ಅವಕಾಶ ನೀಡಿದೆ. ಕೊರೊನಾ, ಲಾಕ್ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತೊಡಕಾದ ಕಾರಣ ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಈ ಕುರಿತು ಟಿವಿ9ಗೆ ಬೋರ್ಡ್ ನಿರ್ದೇಶಕಿ ಎಸ್.ರಮ್ಯಾ ಅಧಿಕೃತ ಮಾಹಿತಿ ನೀಡಿದ್ದಾರೆ. ಜತೆಗೆ ಆಗಸ್ಟ್ 20 ರಿಂದ 30ರವರೆಗೆ ನಡೆಯಲಿರುವ ಸಿಇಟಿ ಪರೀಕ್ಷೆಗೆ ಸಜ್ಜಾಗಲು ಅವರು ವಿನಂತಿಸಿಕೊಂಡಿದ್ದಾರೆ.
SSLC Exam 2021: ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಗಮಿಸಲು ಅಗತ್ಯ ವ್ಯವಸ್ಥೆ, ಜುಲೈ 15, 17ರಂದು ಎಸ್ಎಸ್ಎಲ್ಸಿ ಅಣಕು ಪರೀಕ್ಷೆ
ಎಸ್ಎಸ್ಎಲ್ಸಿ ಪರೀಕ್ಷೆ ಮಳೆಗಾಲದ ಸಮಯದಲ್ಲಿ ನಡೆಯುತ್ತಿರುವುದರಿಂದ ಹೆಚ್ಚು ಮಳೆ ಬೀಳುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ದೋಣಿಯಲ್ಲಿ ಬರಬೇಕಾದ ಮಕ್ಕಳ ಕುರಿತಂತೆ ಕೈಗೊಳ್ಳಲಾದ ಕ್ರಮದ ಕುರಿತು ಸಲಹೆ ನೀಡಿದರು. ಹೋಗಿ ಬರಲು ತೊಂದರೆಯಾಗುವಂತಹ ಕಡೆಗಳಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸ್ಥಳೀಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಯಾವೊಬ್ಬ ವಿದ್ಯಾರ್ಥಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು. ಉತ್ತಮ ಮನಸ್ಥಿತಿಯಲ್ಲಿ ಹಾಜರಾಗಿ ಉತ್ತಮ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಹ ಪರಿಸರವಿರುವಂತೆ ಮತ್ತು ಮಳೆಯ ಇರುಚಲಿನಿಂದಲು ಪರೀಕ್ಷಾರ್ಥಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು.
ಯಾವುದೇ ಕಾರಣದಿಂದಲೂ ಯಾವುದೇ ಒಂದು ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಕ್ರಮ ವಹಿಸುವುದೂ ಸೇರಿದಂತೆ ರಾಜ್ಯ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನ ಕುರಿತು ಚರ್ಚಿಸಿ, ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದರು. ಕಳೆದ ವರ್ಷ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗದೇ ಇರುವುದು ಮತ್ತು ಒಬ್ಬನೇ ಒಬ್ಬ ಕೊನೆಯ ಕುಗ್ರಾಮದ ವಿದ್ಯಾರ್ಥಿಯೊಬ್ಬನಿಗಾಗಿ ಒಂದು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದನ್ನು ಅವರು ಸ್ಮರಿಸಿದರು.
ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಕುರಿತಂತೆ ಮಕ್ಕಳು ಮತ್ತು ಪೋಷಕರಲ್ಲಿ ಆತ್ಮ ವಿಶ್ವಾಸ ಮೂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:
2nd PUC Results 2021: ದ್ವಿತೀಯ ಪಿಯುಸಿ ಅಂಕ ನಿಗದಿ ಹೇಗೆ? ವಿದ್ಯಾರ್ಥಿಗಳೇ, ತಪ್ಪದೇ ಈ ಸುದ್ದಿ ಓದಿ
(Karnataka CET 2021 Postponed the deadline for filing Application can be made until July 16th)