ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಲ್ಲ ಗುತ್ತಿಗೆಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೇ. 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದಿದ್ದರು. ಈ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದು, ಜನರಲ್ ಆಗಿ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಯಾರದೇ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖ ಮಾಡಿಲ್ಲ. ಆದರೂ ನಾವು ಈ ಬಗ್ಗೆ ತನಿಖೆಯನ್ನು ಮಾಡುತ್ತೇವೆ. ಟೆಂಡರ್ ಪ್ರಕ್ರಿಯೆಯಲ್ಲಿ ದೋಷವಾಗಿದ್ದರೆ ಪರಿಷ್ಕರಣೆ ಮಾಡುತ್ತೇವೆ. ಏನಾದರೂ ದೋಷ ಆಗಿದ್ದರೂ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಾರೆ.
ನನ್ನ ಅವಧಿ ಅಥವಾ ಅದಕ್ಕಿಂತ ಮೊದಲು ಗುತ್ತಿಗೆದಾರರ ಬಳಿ ಕಮಿಷನ್ ತೆಗೆದುಕೊಂಡಿರುವ ಬಗ್ಗೆಯೂ ಪರಿಷ್ಕರಣೆ ಮಾಡುತ್ತೇವೆ. ನಮ್ಮದು ಪಾರದರ್ಶಕ ಸರ್ಕಾರ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂತಹದ್ದೇನೂ ನಡೆದಿಲ್ಲ. ಆದರೂ ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಟೆಂಡರ್ ಪರಿಶೀಲನೆಗೆ ಎರಡು ಕಮಿಟಿಗಳನ್ನು ರಚಿಸಿದ್ದೇವೆ. ಆಟೋಮ್ಯಾಟಿಕ್ ಬಿಲ್ ರೈಸ್ ಆಗುವ ಕುರಿತು ವ್ಯವಸ್ಥೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕಾಮಗಾರಿ ಆಗಬೇಕು. ಇಲ್ಲದಿದ್ದರೆ ಬೇರೆ ಬೇರೆ ರೀತಿಯ ಸಂದೇಶ ಹೋಗಲಿದೆ. ಹಾಗಾಗಿ ನಾವು ಆದೇಶವನ್ನು ಹೊರಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಟೆಂಡರ್ ಅಕ್ರಮ ಕಂಡರೆ ಕೂಡಲೇ ಕ್ರಮ ಕೈಗೊಳ್ತೇವೆ. ಟೆಂಡರ್ ಪರಿಶೀಲನೆ ಆದರೆ ಎಲ್ಲ ಅಕ್ರಮ ಹೊರಬರುತ್ತದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಗುತ್ತಿಗೆಗಳಿಗೆ ಅಧಿಕಾರಿಗಳು ಶೇ. 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ಕಮಿಷನ್ ಹೋಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಕಮಿಷನ್ ಕೊಟ್ಟು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದು ಬಹಳ ಚರ್ಚೆಗೆ ಕಾರಣವಾಗಿತ್ತು.
ರಾಜ್ಯದಲ್ಲಿ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿದೆ. ಮೊದಲು ಸರ್ವೆ ಆಗಿ ಮಾಹಿತಿ ಪರಿಹಾರ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಾಗುವುದು. ಆ್ಯಪ್‌ನಲ್ಲಿ ಅಪ್ಲೋಡ್ ಆದ ತಕ್ಷಣ ಹಣ ಹಾಕಲು ಇಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಣದ ಕೊರತೆ ಆದರೆ ಬಿಡುಗಡೆಗೆ ಮಾಡುವುದಾಗಿ ಹೇಳಿದ್ದೇನೆ ಎಂದುವಿಧಾನಸೌಧದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ನೂತನ ಕಚೇರಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ವೇತನ ನೀಡದೆ ತಾತ್ಸಾರ: ಬಿಬಿಎಂಪಿ ಪೌರಕಾರ್ಮಿಕರಿಂದ ಗುತ್ತಿಗೆದಾರರ ಮನೆ ಮುಂದೆ ಧರಣಿ