Karnataka Crime Update: ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ, ಹಾವೇರಿ-ಯಾದಗಿರಿಯಲ್ಲಿ ಕಬ್ಬು ಬೆಳೆ ಭಸ್ಮ, ಫೋರೆನ್ಸಿಕ್ ಲ್ಯಾಬ್ಗೆ ಉಪಕರಣ
ಕೋಲಾರ ಮತ್ತು ಕೆಜಿಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಸುಮಾರು ₹ 4.50 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಗಿದೆ
ಬೆಂಗಳೂರು: ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿದ್ದ ಕಾರು ನೆಲಮಂಗಲ ತಾಲ್ಲೂಕು ಕುಲುವನಹಳ್ಳಿ ಸಮೀಪ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಳೆಕೆರೆ ಗ್ರಾಮದ ಕೃಷ್ಣಮೂರ್ತಿ ಬೈಕ್ ಸವಾರ. ಅಪಘಾತದ ನಂತರ ಗಾಯಾಳುವನ್ನು ಆಂಬುಲೆನ್ಸ್‌ನಲ್ಲಿ ಕಳುಹಿಸಿ ಸಚಿವರು ತಾವೂ ಆಸ್ಪತ್ರೆಗೆ ಭೇಟಿ ನೀಡಿದರು. ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಹರೀಶ್ ಅವರಿಗೆ ಸೂಚನೆ ನೀಡಿದರು.
ವಾರಸುದಾರರಿಗೆ ನಗ-ನಗದು ವಿತರಣೆ ಕೋಲಾರ ಮತ್ತು ಕೆಜಿಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಸುಮಾರು ₹ 4.50 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಗಿದೆ. 76 ದ್ವಿಚಕ್ರ ವಾಹನ, 4 ಕಾರು, ಜೆಸಿಬಿ, ಆಟೊ, ಟ್ರ್ಯಾಕ್ಟರ್, ಬಂಗಾರ, ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಒಟ್ಟು ₹ 3.58 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಜಿಎಫ್ ಪೊಲೀಸರು 45 ದ್ವಿಚಕ್ರ ವಾಹನ, 4 ಕಾರು, ಬಂಗಾರ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹ 77.53 ಲಕ್ಷ ಎಂದು ಅಂದಾಜಿಸಲಾಗಿದೆ. ಕೋಲಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಸಮ್ಮುಖದಲ್ಲಿ ಮೂಲವಾರಸುದಾರರಿಗೆ ವಿತರಿಸಲಾಯಿತು. ಕೋಲಾರ ಎಸ್ಪಿ ಕಿಶೋರ ಬಾಬು ಮತ್ತಿತರರು ಉಪಸ್ಥಿತರಿದ್ದರು.
ಹಾವೇರಿ: ಕಬ್ಬು ಬೆಳೆ ಭಸ್ಮ ಹಾವೇರಿ: ಅಗ್ನಿ ಅವಘಡದಿಂದಾಗಿ 3 ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಸಂಭವಿಸಿದೆ. ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡು ಮಲ್ಲಿಕಾರ್ಜುನ ಕೆಂಗೊಂಡ ಅವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿದ್ದ ಕಬ್ಬು ಬೆಳೆ ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಹಾವೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
ಯಾದಗಿರಿ: ಪರಸ್ಪರ ವಿದ್ಯುತ್ ತಂತಿ ಸ್ಪರ್ಶದಿಂದ ಬಿದ್ದ ಕಿಡಿಗಳಿಂದ 10 ಎಕರೆ ಕಬ್ಬು ಬೆಳೆ ಭಸ್ಮವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಹನುಮೇಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆದಿದ್ದ ರೈತ ಈ ಬಾರಿ ₹ 18 ಲಕ್ಷ ಗಳಿಸುವ ನಿರೀಕ್ಷೆಯಲ್ಲಿದ್ದರು. ಗಾಳಿಗೆ ಸರ್ವಿಸ್ ತಂತಿಗಳು ಪರಸ್ಪರ ಸ್ಪರ್ಶಿಸಿ ಕಿಡಿ ಉದ್ಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಫೊರೆನ್ಸಿಕ್ ಲ್ಯಾಬ್ಗಳಿಗೆ ಉಪಕರಣ ಬಳ್ಳಾರಿ-ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ನೂತನ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ (ಫೋರೆನ್ಸಿಕ್ ಲ್ಯಾಬ್) ₹ 11 ಕೋಟಿ ವೆಚ್ಚದದಲ್ಲಿ ಅಗತ್ಯ ಉಪಕರಣಗಳನ್ನು ಒದಗಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯದ ಫೊರೆನ್ಸಿಕ್ ವಿಭಾಗಕ್ಕೆ ಈ ಮೂಲಕ ಶೀಘ್ರದಲ್ಲಿ ಅಗತ್ಯ ಉಪಕರಣಗಳು ಲಭ್ಯವಾಗಲಿವೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಒಂದೂವರೆ ವರ್ಷದೊಳಗೆ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣ: ಗೋವಿಂದ ಕಾರಜೋಳ ಇದನ್ನೂ ಓದಿ: Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪ್ರೇಮಿ!