ಚಿಕ್ಕೋಡಿ, ಡಿ.2: ಖಜಾನೆ ತುಂಬಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನರ ಜೊತೆ ಚೆಲ್ಲಾಟವಾಡಲು ಆರಂಭಿಸಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಹಣಹೊಂದಿಸಲು ಮದ್ಯದ ಅಂಗಡಿಗಳಿಗೆ (Liquor Shops) ಟಾರ್ಗೆಟ್ ಫಿಕ್ಸ್ ಮಾಡಿದೆ. ಈ ಬಗ್ಗೆ ಅಬಕಾರಿ ಇಲಾಖೆಯ (Excise Department) ಉಪ ಆಯುಕ್ತರ ಮೂಲಕ ರಾಜ್ಯದ ಎಲ್ಲಾ ವಲಯಗಳ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದರೆ ರಾಜ್ಯದಲ್ಲಿ ಇಷ್ಟು ಮದ್ಯ ಮಾರಾಟ ಮಾಡಲೇಬೇಕು ಅಂತಾ ಸರ್ಕಾರದಿಂದಲೇ ಟಾರ್ಗೆಟ್ ನೀಡುತ್ತಿರುವುದು ಎಷ್ಟು ಸರಿ ಎಂಬ ಆಕ್ರೋಶ ಕೇಳಿಬರುತ್ತಿದೆ. ಹೌದು, ಅಬಕಾರಿ ಇಲಾಖೆಯು ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಟಾರ್ಗೆಟ್ ನಿಗದಿ ಮಾಡಿದ್ದು, ಅಂಗಡಿಗಳ ಮೂರು ವರ್ಷಗಳ ಮಾರಾಟದ ಸರಾಸರಿ ತಗೆದು ಈ ಟಾರ್ಗೆಟ್ ನಿಗದಿ ಮಾಡಲಾಗಿದೆ.
ಕಡ್ಡಾಯವಾಗಿ ಇಂತಿಷ್ಟೇ ಬಾಕ್ಸ್ ಮದ್ಯ ಮಾರಾಟ ಮಾಡಲೇಬೇಕು ಎಂದು ಮೂರು ತಿಂಗಳಿನಿಂದ ಮದ್ಯದಂಗಡಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ವಲಯಗಳ ವಲಯ ನಿರೀಕ್ಷಕರಿಗೆ ಅಬಕಾರಿ ಇಲಾಖೆ ಉಪ ಆಯುಕ್ತರ ಮೂಲಕ ಸೂಚನೆ ನೀಡಲಾಗುತ್ತಿದೆ.
ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವಿಭಾಗದ ಉಪ ಆಯುಕ್ತರು ಹೊರಡಿಸಿದ ಜ್ಞಾಪನಾ ಪತ್ರ ಟಿವಿ9ಗೆ ಲಭ್ಯವಾಗಿದೆ. ಅಬಕಾರಿ ಇಲಾಖೆಯು ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ 80 ಸಾವಿರ 876 ಬಾಕ್ಸ್ ಮದ್ಯ ಮಾರಾಟ ಮಾಡಲು ಟಾರ್ಗೆಟ್ ನೀಡಿದೆ. ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವಲಯದ ಐದು ತಾಲೂಕುಗಳಿಗೆ ಟಾರ್ಗೆಟ್ ನಿಗದಿ ಮಾಡಿದೆ.
ಇದನ್ನೂ ಓದಿ: ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ
ಅಥಣಿ – 37,486, ಚಿಕ್ಕೋಡಿ – 37,594, ಗೋಕಾಕ್ – 50,795, ಹುಕ್ಕೇರಿ 28,000, ರಾಯಬಾಗ ತಾಲೂಕಿಗೆ 27,000 ಮದ್ಯದ ಬಾಕ್ಸ್ ಮಾರಾಟಕ್ಕೆ ಟಾರ್ಗೆಟ್ ನಿಗದಿ ಮಾಡಲಾಗಿದೆ. ಇಲಾಖೆ ಆದೇಶದಂತೆ ವಲಯ ನಿರೀಕ್ಷಕರು ಪ್ರತಿ ಮದ್ಯದಂಗಡಿಗಳಿಗೆ ಟಾರ್ಗೆಟ್ ನಿಗದಿ ಮಾಡುತ್ತಿದ್ದಾರೆ.
ಮೊದಲೇ ರಾಜ್ಯದಲ್ಲಿ ಮದ್ಯದ ಮೇಲೆ ಸುಂಕ ಹೆಚ್ಚಳದಿಂದ ಕಂಗಾಲಾಗಿರುವ ಮದ್ಯದಂಗಡಿಗಳ ಮಾಲೀಕರು, ಅಬಕಾರಿ ಇಲಾಖೆಯ ಈ ನಡೆಯಿಂದ ಬೇಸತ್ತಿದ್ದಾರೆ. ಗಡಿಜಿಲ್ಲೆ ಬೆಳಗಾವಿಯಲ್ಲಂತೂ ಬಹುತೇಕ ಮದ್ಯಪ್ರಿಯರು ಗೋವಾ, ಮಹಾರಾಷ್ಟ್ರದಿಂದ ಮದ್ಯ ಖರೀದಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಮದ್ಯದಂಗಡಿಗಳ ಲೈಸೆನ್ಸ್ ನವೀಕರಣಕ್ಕೂ ಹೆಚ್ಚುವರಿ ಹಣ ಬೇಡಿಕೆ ಇಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಮದ್ಯದಂಗಡಿಗಳ ಮಾಲೀಕರು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ