ಬೆಂಗಳೂರು, ಮೇ 9: ಕಾಲೇಜು ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಪದವಿ ಆನರ್ಸ್ (Four-Year Degree Programme) ಅಧ್ಯಯನಕ್ಕೆ 2024-25ನೇ ಶೈಕ್ಷಣಿಕ ವರ್ಷದಿಂದ ನೀಡಲಾಗಿದ್ದ ಅವಕಾಶವನ್ನು ಹಿಂಪಡೆದು ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Government) ಬುಧವಾರ ಆದೇಶ ಹೊರಡಿಸಿದೆ. ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಇದರೊಂದಿಗೆ, ರಾಜ್ಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಅಳವಡಿಸಿಕೊಳ್ಳುವುದಕ್ಕಿಂತಲೂ ಮೊದಲು, ಅಂದರೆ 2021-22 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಮೂರು ವರ್ಷಗಳ ಪದವಿ ಕಾರ್ಯಕ್ರಮಕ್ಕೆ ಕರ್ನಾಟಕ ಮರಳಿದಂತಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿತ್ತು. ಆದರೆ, ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ಅದನ್ನು ರದ್ದುಗೊಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು.
ಇದೀಗ ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಉನ್ನತ ಶಿಕ್ಷಣ ಇಲಾಖೆ, ಎಸ್ಇಪಿ ಆಯೋಗದ ವಿಸ್ತೃತ ಸಮಾಲೋಚನೆಯನ್ನು ಆಧರಿಸಿದೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಐತಿಹಾಸಿಕ ಅನುಭವ, ವಿದ್ಯಾರ್ಥಿಗಳ ಒಟ್ಟಾರೆ ಹಿತಾಸಕ್ತಿ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ನೀಡುವುದನ್ನು ಗಮನದಲ್ಲಿಟ್ಟುಕೊಂಡು ಎಸ್ಇಪಿ ಆಯೋಗ ಶಿಫಾರಸುಗಳ್ನು ಮಾಡಿದೆ ಎಂದು ಇಲಾಖೆ ಹೇಳಿದೆ.
ಜಾಗತಿಕ ಶಿಕ್ಷಣ ವ್ಯವಸ್ಥೆಗಳೊಂದಿಗೆ ಸಮಾನತೆಯನ್ನು ತರುವ ಉದ್ದೇಶದಲ್ಲಿ ಪದವಿ ಶಿಕ್ಷಣದ ಅವಧಿಯನ್ನು ನಾಲ್ಕು ವರ್ಷಗಳವರೆಗೆ ಬದಲಾಯಿಸಲು ಮುಂದಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಅಮೆರಿಕದ ವ್ಯವಸ್ಥೆಗೆ ಪೂರಕವಾಗಿ ಇದನ್ನು ಮಾಡಲು ಮುಂದಾಗಲಾಗಿತ್ತು. ಇದರಿಂದ ಭಾರತದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಸುಲಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನಾಲ್ಕು ವರ್ಷಗಳ ಪದವಿ ಇಟ್ಟುಕೊಳ್ಳುವುದರಿಂದ ಬಡವರು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳಾದ ಎಸ್‌ಸಿಗಳು, ಎಸ್‌ಟಿಗಳು, ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದ ಪ್ರವೇಶ ಕಡಿಮೆಯಾಗಲಿದೆ ಎಂದು ಸರ್ಕಾರ ವಾದಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ, ರಿಸಲ್ಟ್ ನೋಡಲು ಈ ವೆಬ್ ಸೈಟ್ಗಳಿಗೆ ಭೇಟಿ ನೀಡಿ
ಇಷ್ಟೇ ಅಲ್ಲದೆ, ಮೂಲಸೌಕರ್ಯಗಳ ಕೊರತೆ ಮತ್ತು ಸೌಲಭ್ಯಗಳು, ಪ್ರಾಧ್ಯಾಪಕರ ಲಭ್ಯತೆಯಿಲ್ಲದಿರುವುದು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಕಾಲೇಜುಗಳು ಮುಂದಾಗದಿರುವುದಕ್ಕೆ ಒಂದು ಕಾರಣವೆಂದು ಉಲ್ಲೇಖಿಸಲಾಗಿದೆ.
ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ತಕ್ಷಣವೇ ಪ್ರವೇಶವನ್ನು ಪ್ರಾರಂಭಿಸಲು ಕೇಳಿಕೊಂಡಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ