ಬೆಂಗಳೂರು: ನೀರಿಗಾಗಿ ನಮ್ಮ ನಡಿಗೆ.. ಜಲಕ್ಕಾಗಿ ನಮ್ಮ ಹೋರಾಟ.. ಮೇಕೆದಾಟು ಅನುಷ್ಠಾನಕ್ಕಾಗಿ ನಮ್ಮ ಪಾದಯಾತ್ರೆ.. ಮುಂದಿಟ್ಟ ಹೆಜ್ಜೆಯನ್ನ ಯಾವುದೇ ಕಾರಣಕ್ಕೂ ಹಿಂದಿಡಲ್ಲ ಅಂತಾ ಕೈ ನಾಯಕರು ಕಿಲೋಮೀಟರ್ಗಟ್ಟಲೇ ಸುನಾಮಿಯಂತೆ ಸಾಗಿ ಬರ್ತಿದ್ರೆ, ಕಾರ್ಯಕರ್ತರು ಹೂಮಳೆ ಸುರಿಸಿ ಸ್ವಾಗತಿಸಿದ್ರು.
ದೊಡ್ಡಆಲಹಳ್ಳಿ ತಲುಪಿದ ಕಾಂಗ್ರೆಸ್ ಪಾದಯಾತ್ರೆ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ರಣಕಹಳೆ ಮೊಳಗಿಸಿದ್ದಾರೆ. ನಿನ್ನೆ ಮೇಕೆದಾಟು ಸಂಗಮದಿಂದ ಕಾಂಗ್ರೆಸ್ ನಾಯಕರ ಪಾದಯಾತ್ರೆ ಆರಂಭವಾಗಿತ್ತು. ಮೊದಲ ದಿನವಾದ ನಿನ್ನೆ ಪಾದಯಾತ್ರೆ 15 ಕಿಲೋ ಮೀಟರ್ ಸಾಗಿ ಬಂದಿದೆ. ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಊರು ದೊಡ್ಡಆಲಹಳ್ಳಿಗೆ ಪಾದಯಾತ್ರೆ ತಲುಪಿದೆ. ಅದ್ರಲ್ಲೂ ಡಿಕೆಶಿ ಬರ್ತಿದ್ದಂತೆ ಕಾರ್ಯಕರ್ತರು, ಹೂಮಳೆಸುರಿಸಿ, ಪಟಾಕಿ ಸಿಡಿಸಿ, ಗ್ರ್ಯಾಂಡ್ ವೆಲ್ಕಮ್ ಮಾಡ್ಕೊಂಡ್ರು. ರಾತ್ರಿ ಪಾದಯಾತ್ರಿಗಳೆಲ್ಲಾ ದೊಡ್ಡಆಲಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ಪಾದಯಾತ್ರೆ ಮೊದಲ ದಿನವೇ ಜ್ವರದಿಂದ ಬಳಲಿದ ಸಿದ್ದು
ಪಾದಯಾತ್ರೆಯ ಮೊದಲ ದಿನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಜ್ವರದಿಂದ ಬಳಲಿದ್ರು. ಮೇಕೆದಾಟು ಸಂಗಮದಿಂದ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಹೀಗಾಗಿ, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಬಂದ್ರು. ಸದ್ಯ ಇಂದಿನ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಾಲ್ನಡಿಗೆ ವೇಳೆ ‘ಕನಕಪುರ ಬಂಡೆ’ ಸುಸ್ತು!
ಮತ್ತೊಂದ್ಕಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೊದಲ ದಿನವೇ ನಡೆದು ನಡೆದು ಸುಸ್ತಾಗಿದ್ರು. 15 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಸಾಗಿ ಬಂದಿದ್ರಿಂದ ಸಂಜೆ ವೇಳೆಗೆ ತೀರಾ ನರ್ವಸ್ ಆದಂತಿತ್ತು. ಒಂದೊಂದು ಹೆಜ್ಜೆ ಇಡೋಕೂ ಪರದಾಡ್ತಿರುವಂತೆ ಕಂಡು ಬಂತು.
ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಡಿಹೆಚ್ಒಗೆ ಡಿಕೆಶಿ ಕ್ಲಾಸ್
ಮತ್ತೊಂದ್ಕಡೆ, ದೊಡ್ಡಆಲಹಳ್ಳಿಯಲ್ಲಿ ಡಿಹೆಚ್ಒ ನಿರಂಜನ್, ಡಿಕೆಶಿಯನ್ನ ಭೇಟಿಯಾದ್ರು. ಈ ವೇಳೆ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ರು. ಇದ್ರಿಂದ ರೊಚ್ಚಿಗೆದ್ದ ಡಿಕೆಶಿ, ಎಡಿಸಿ ಜವರೇಗೌಡ, ಡಿಹೆಚ್ಒ ನಿರಂಜನ್ಗೆ ಕ್ಲಾಸ್ ತೆಗೆದುಕೊಂಡ್ರು. ಐ ಆ್ಯಮ್ ಫಿಟ್ ಆ್ಯಂಡ್ ಫೈನ್. ನನಗೇ ಸಲಹೆ ಕೊಡಲು ಬಂದಿದ್ದೀರಾ? ನಾನೊಬ್ಬ ಜನಪ್ರತಿನಿಧಿ. ನನಗೇ ಬ್ಲ್ಯಾಕ್ಮೇಲ್ ಮಾಡ್ತಿದ್ದೀರಾ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ.. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ಹೇಳಿ ಅಂತಾ ಗರಂ ಆದ್ರು.
ಕಾಂಗ್ರೆಸ್ ಪಾದಯಾತ್ರೆಗಿಂದು ಎರಡನೇ ದಿನ
ಇದೆಲ್ಲದರ ಮಧ್ಯೆ ಕಾಂಗ್ರೆಸ್ ಪಾದಯಾತ್ರೆ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ದೊಡ್ಡಆಲಹಳ್ಳಿಯಿಂದ ಕನಕಪುರವರೆಗೂ ಅಂದ್ರೆ 16 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಆದ್ರೆ, ನಿನ್ನೆ ಜ್ವರದಿಂದ ಬಳಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡನೇ ದಿನದ ಕಾಲ್ನಡಿಗೆಯಲ್ಲಿ ಭಾಗಿಯಾಗ್ತಾರಾ? ಇಲ್ವಾ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ, ಕಾಂಗ್ರೆಸ್ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ 15 ಕಿಲೋ ಮೀಟರ್ ಸಾಗಿರುವ ಪಾದಯಾತ್ರೆ ಇಂದು 16 ಕಿಲೋ ಮೀಟರ್ ಕಾಲ್ನಡಿಗೆ ಸಾಗಲಿದೆ. ದೊಡ್ಡಆಲಹಳ್ಳಿಯಿಂದ ಬಂದು ಕನಕಪುರದಲ್ಲಿ ಕೇಕೆ ಹಾಕಲು ಡಿಕೆಶಿ ಪಡೆ ತುದಿಗಾಲಲ್ಲಿ ನಿಂತಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ: ಎಸ್ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ಮೇಲ್ ಪ್ರಕರಣ; ತನಿಖೆಯನ್ನು ಸಿಸಿಬಿಗೆ ವಹಿಸಿ ಕಮಲ್ ಪಂತ್ ಆದೇಶ
Published On - 7:15 am, Mon, 10 January 22