ಬೆಂಗಳೂರು, ಡಿ.21: ನೆರೆಯ ರಾಜ್ಯ ಕೇರಳ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ (Covid) ಪ್ರಕರಣಗಳು ಹೆಚ್ಚುತ್ತಿದ್ದು, ಕರ್ನಾಟಕದಲ್ಲಿ ಈವರೆಗೆ 92 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಚರ್ಚೆ ನಡೆಸಲಿದ್ದಾರೆ.
ನೆರೆಯ ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇಂದಿನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, TAC ಸಮಿತಿ ಸದಸ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಭೀತಿ ಹಿನ್ನೆಲೆ ಜನರ ತಪಾಸಣೆಯನ್ನು ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ. ಪ್ರತಿನಿತ್ಯ 1500 ಕೊರೊನಾ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, 1050 ಆರ್‌ಟಿಪಿಸಿಆರ್ ಹಾಗೂ 450 ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲು ಪ್ಲಾನ್ ಮಾಡಲಾಗಿದೆ.
ಬಿಬಿಎಂಪಿಯ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದ್ದು, ನಾಳೆ ಖಾಸಗಿ ಆಸ್ಪತ್ರೆಗಳೊಂದಿಗೆ ಪಾಲಿಕೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆ ಸಂಖ್ಯೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ವೈರಸ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆಗೆ ಪ್ಲಾನ್ ಮಾಡಲಾಗುತ್ತದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳಿಂದ Tv9ಗೆ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ JN.1 ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ನಗರದ ಶಾಲೆಗಳ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ರಾಜಧಾನಿಯಲ್ಲಿ ಕೋವಿಡ್ಗೆ ಈಗಾಗಲೇ ಮೂವರು ಸೋಂಕಿತರು ಸಾವನ್ನಪ್ಪಿದೆ. ಹೀಗಾಗಿ ಮಕ್ಕಳಿಗೆ ಕೊರೋನಾ ವಕ್ಕರಿಸಿದಂತೆ ನೋಡಿಕೊಳ್ಳಲು ಖಾಸಗಿ ಶಾಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಈ ಹಿಂದಿನ ಕೊರೊನಾ ಅಲೆಯಲ್ಲಿ ಆರ್ಥಿಕ ಹೊಡೆತ ತಿಂದಿದ್ದ ಖಾಸಗಿ ಶಾಲೆಗಳಿಗೆ ಇದೀಗ ಮತ್ತೊಮ್ಮೆ ಭೀತಿ ಎದುರಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೋಷಕರಿಗೆ ಶಾಲೆ ಆಡಳಿತ ಮಂಡಳಿಗಳು ಸಂದೇಶ ರವಾನಿಸಿದ್ದಾರೆ.
JN.1 ವೈರಸ್ ರಾಕೆಟ್ ವೇಗದಲ್ಲಿ ಹರಡುವ ಹಿನ್ನೆಲೆ ಮಕ್ಕಳ ಬಗ್ಗೆ ಜಾಗೃತಿಗೆ ಕೆಲ ಖಾಸಗಿ ಶಾಲೆಗಳು ನಿರ್ಧಾರ ಮಾಡಿದ್ದು, ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಿ, ತಮ್ಮ ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದ್ದಾರೆ.
ರೂಪಾಂತರಿಯ ಉಪಟಳ ಹಿನ್ನೆಲೆ ಕ್ಯಾಮ್ಸ್ ಶಾಲಾ ಒಕ್ಕೂಟ ಹೈ ಅಲರ್ಟ್ ಆಗಿದ್ದು, ತನ್ನ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಿದೆ. ಹಾಗಾದರೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಟ್ಟ ಸೂಚನೆ ಏನು? ಇಲ್ಲಿದೆ ಮಾಹಿತಿ.
ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ವರಿಗೆ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಜಿಲ್ಲೆಯ ಇರುವ 103 ಸರ್ಕಾರಿ ಆಸ್ಪತ್ರೆ ಹಾಗೂ 6 ಖಾಸಗಿ ಆಸ್ಪತ್ರೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 490 ಬೆಡ್, ಖಾಸಗಿಯಲ್ಲಿ 202 ಬೆಡ್, 87 ವೆಂಟಿಲೇಟರ್, ಜಂಬೋ ಆಕ್ಸಿಜನ್ ಸಿಲಿಂಡರ್ 907, 10 ಲೀಟರ್ ಆಕ್ಸಿಜನ್ ಸಿಲಿಂಡರ್, 260 ಸ್ಟಾಕ್ ಇದ್ದು, ಒಟ್ಟು 21 ಆಂಬುಲೆನ್ಸ್ಗಳು ಸನ್ನದ್ಧವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ