ಶಾಲೆ ಪುನಾರಂಭದಲ್ಲೇಕೊರೊನಾ ಕಂಟಕ: ಆರೋಗ್ಯ ಇಲಾಖೆ ಅಲರ್ಟ್

Karnataka Covid Case: ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಮೇ 29 ರಿಂದ ಶಾಲಾ-ಕಾಲೇಜುಗಳು ಮರು ಆರಂಭವಾಗುತ್ತಿವೆ. ಪರೀಕ್ಷಾ ಕಿಟ್‌ಗಳ ಕೊರತೆಯಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಮಕ್ಕಳು ಮತ್ತು ವಯಸ್ಸಾದವರಲ್ಲಿ ಲಕ್ಷಣಗಳು ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಶಾಲೆ ಪುನಾರಂಭದಲ್ಲೇಕೊರೊನಾ ಕಂಟಕ: ಆರೋಗ್ಯ ಇಲಾಖೆ ಅಲರ್ಟ್
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: May 25, 2025 | 3:51 PM

ಬೆಂಗಳೂರು, ಮೇ 25: ರಾಜ್ಯದಲ್ಲಿ ಕೊರೊನಾ (Karnataka Covid) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೊನಾ (Coronavirus) ಸೋಂಕಿತ ವೃದ್ಧರೊಬ್ಬರು ಶನಿವಾರ (ಮೇ.24) ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಮತ್ತು ರಾಜಾಜಿನಗರದಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಮುಂದಿನ ವಾರ ಮೇ.29ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪುನಾರಂಭವಾಗುತ್ತವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಅಂತ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳಿಗೆ ಮಾಸ್ಕ್ ಧರಿಸಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಶಾಲೆಗಳ ಆಡಳಿತ ಮಂಡಳಿ ಸೂಚನೆ ನೀಡುತ್ತಿವೆ. ಶಾಲಾ-ಕಾಲೇಜು ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಬೇಡಿ: ಸಿಎಂ

ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೂ ಹಿಂದೇಟು ಹಾಕಬೇಡಿ. ಏನೇ ಕ್ರಮ ತೆಗೆದುಕೊಳ್ಳಬೇಕೆಂದರೂ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಓರ್ವ ಬಲಿ, ಆ್ಯಕ್ಟಿವ್​ ಕೇಸ್​​ 38
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ದೆಹಲಿಯಲ್ಲಿ ಕೊವಿಡ್ ಹೆಚ್ಚಳ; ಆಸ್ಪತ್ರೆಯಲ್ಲಿ ಸಜ್ಜಾಗಿರಲು ಸರ್ಕಾರ ಆದೇಶ
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್ ಸೋಂಕು

2 ದಿನದಲ್ಲಿ ಟೆಸ್ಟ್ ಕಿಟ್ ಆಸ್ಪತ್ರೆಗಳಿಗೆ ತಲುಪುತ್ತವೆ: ಗುಂಡೂರಾವ್​

ಇಂದಿನಿಂದಲೇ ಕೊರೊನಾ ಟೆಸ್ಟ್ ಶುರುವಾಗುತ್ತೆ ಅಂತ ಹೇಳಲಾಗಿತ್ತು. ಆದರೆ, ಬೆಂಗಳೂರಿನ ಆಸ್ಪತ್ರಗೆಳಲ್ಲಿ ಟೆಸ್ಟ್ ಕಿಟ್‌ ಕೊರತೆ ಇದೆ. ಬಿಬಿಎಂಪಿ, ಸರ್ಕಾರಿ ಆಸ್ಪತ್ರಗೆಳಲ್ಲಿ ಟೆಸ್ಟ್ ಕಿಟ್‌ಗಳಿಲ್ಲ. ಕಿಟ್ ಬಂದ ಬಳಿಕ ಪರೀಕ್ಷೆ ಆರಂಭಿಸುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಪ್ರತಿಕ್ರಿಯಿಸಿದ್ದು, ನಾಳೆ, ನಾಡಿದ್ದು ಆಸ್ಪತ್ರೆಗಳಿಗೆ ಕೊರೊನಾ ಟೆಸ್ಟಿಂಗ್ ಕಿಟ್​ಗಳು ತಲುಪಲಿವೆ. ವಿಶೇಷವಾಗಿ ತೀವ್ರ ಉಸಿರಾಟ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ವಯೋವೃದ್ಧರಿಗೆ ಮತ್ತು ಮಕ್ಕಳಲ್ಲಿ ಮೈಕೈ ನೋವು, ನೆಗಡಿ, ಜ್ವರದಂತಹ ಲಕ್ಷಣಗಳು ಕಂಡುಬಂದರೇ ಕೊರೊನಾ ಟೆಸ್ಟ್ ಮಾಡಿಸಿ ಎಂದು ಹೇಳಿದರು.

ಪರಿಸ್ಥಿತಿ ಅವಲೋಕಿಸಿ ಮುಂದಿನ 4-5 ದಿನಗಳ ನಂತರ ಹೇಳುತ್ತೇವೆ. ವಾರಕ್ಕೆ ಒಮ್ಮೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸುತ್ತೇವೆ. ಕೊರೊನಾ ಬಗ್ಗೆ ನಾವು ಯಾವುದೇ ನಿರ್ಲಕ್ಷ್ಯ ಮಾಡುತ್ತಿಲ್ಲ. ವಸ್ತು ಸ್ಥಿತಿ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಜನರು ಆತಂಕಪಡುವ ಅವಶ್ಯಕತೆ ಇಲ್ಲ: ಶರಣಪ್ರಕಾಶ್​ ಪಾಟೀಲ್​

ಆರೋಗ್ಯ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕೊರೊನಾ ಲಕ್ಷಣ ಇದ್ದವರು ಟೆಸ್ಟಿಂಗ್ ಮಾಡಿಸಿಕೊಳ್ಳಿ. ಜನನಿಬಿಡ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಚಿಕ್ಕಮಕ್ಕಳು, ಗರ್ಭಿಣಿಯರಿಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಹೇಳಿದರು.

ಈವರೆಗೂ ಆರ್‌ಟಿಪಿಸಿಆರ್ ಟೆಸ್ಟ್ ಶುರುವಾಗದಿದ್ದರೂ, ಗರ್ಭಿಣಿಯರು ಮತ್ತು ಬಾಣಂತಿಯರ ಮೇಲೆ ನಿಗಾ ಇಡಲಾಗಿದೆ. ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಟೆಸ್ಟ್ ಮಾಡಲಾಗುತ್ತಿದೆ. ಮಾಸ್ಕ್​ ಧರಿಸಬೇಕು ಹಾಗೂ ಜನಸಂದಣಿ ಸ್ಥಳಗಳಲ್ಲಿ ಓಡಾಡಬಾರದು. ಮಕ್ಕಳ ಮೇಲೂ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮೈಸೂರಲ್ಲಿ ಮೂವರಿಗೆ ಕೊರೊನಾ ಪಾಸಿಟೀವ್​

ಮೈಸೂರಿನಲ್ಲಿ ಕೊರೊನಾ ನಿಧಾನವಾಗಿ ಹಬ್ಬುತ್ತಿದೆ. 60 ವರ್ಷ ಮೇಲ್ಪಟ್ಟ ಇಬ್ಬರಿಗೆ, 25 ವರ್ಷದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರನ್ನೂ ಆಸ್ಪತ್ರೆಗೆ ದಾಖಲಾಗಿದೆ. ಸೋಂಕಿತ ಸಂಪರ್ಕಿತರ ಮೇಲೆ ನಿಗಾ ಇಡಲಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಧಿಕಾರಿ ಡಾ.ಪಿ.ಸಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 50 ಪ್ರತ್ಯೇಕ ಬೆಡ್ ವ್ಯವಸ್ಥೆ

ಮೂರು ಕೇಸ್ ಪತ್ತೆಯಾಗುತ್ತಿದ್ದಂತೆ ಮೈಸೂರಿನಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 15 ಬೆಡ್, ಜಿಲ್ಲಾ ಆಸ್ಪತ್ರೆಯಲ್ಲಿ 25ರಿಂದ 50 ಪ್ರತ್ಯೇಕ್ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈಸೂರು ಜಿಲ್ಲೆ ಕೇರಳ ಗಡಿಗೆ ಹೊಂದಿಕೊಂಡಿದ್ದು, ಕೇರಳಕ್ಕೆ ಹೋಗಿ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Sun, 25 May 25