Crime News: ಬಿಸಿ ನೀರಿಗೆ ಬಿದ್ದು 4 ವರ್ಷದ ಮಗುವಿಗೆ ಗಂಭೀರ ಗಾಯ, ಕೆಜಿಎಫ್ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಟ

ಕೋಲ್ಕತ್ತಾ ಮೂಲದ ರವೀಂದ್ರ, ಗೊಂದಾಲಿ ದಂಪತಿ ಪುತ್ರಿ ರಿಕ್ಯಾ ಬಿಸಿ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು 4 ದಿನಗಳಿಂದ ಕೆಜಿಎಫ್ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ರಿಕ್ಯಾ(4) ಪರದಾಡುತ್ತಿದ್ದಾಳೆ.

Crime News: ಬಿಸಿ ನೀರಿಗೆ ಬಿದ್ದು 4 ವರ್ಷದ ಮಗುವಿಗೆ ಗಂಭೀರ ಗಾಯ, ಕೆಜಿಎಫ್ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಟ
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: May 11, 2022 | 7:46 PM

ಕೋಲಾರ: ಬಿಸಿ ನೀರಿಗೆ ಬಿದ್ದು 4 ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ಪಟ್ಟಣದ ರಾಬರ್ಟ್‌ಸನ್ ಪೇಟೆಯಲ್ಲಿ ನಡೆದಿದೆ. ಕೋಲ್ಕತ್ತಾ ಮೂಲದ ರವೀಂದ್ರ, ಗೊಂದಾಲಿ ದಂಪತಿ ಪುತ್ರಿ ರಿಕ್ಯಾ ಬಿಸಿ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು 4 ದಿನಗಳಿಂದ ಕೆಜಿಎಫ್ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ರಿಕ್ಯಾ(4) ಪರದಾಡುತ್ತಿದ್ದಾಳೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ರಿಕ್ಯಾಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ದಂಪತಿ ಸಾವು
ತುಮಕೂರು ತಾಲೂಕಿನ ಮಲ್ಲಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಗಂಡ ಹೆಂಡತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಶ್ವರಪ್ಪ (52), ಕಲ್ಪನ (48) ಮೃತ ದುರ್ದೈವಿಗಳು‌. ತುಮಕೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗುವಾಗ ಘಟನೆ ನಡೆದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ವಿಚಾರಕ್ಕೆ ನಾಲ್ವರು ಆಟೋ ಚಾಲಕರ ಮಧ್ಯೆ ಜಗಳ
ಧಾರವಾಡದ ರೈಲ್ವೆ ಸ್ಟೇಷನ್ ಬಳಿ ಬಾಡಿಗೆ ವಿಚಾರಕ್ಕೆ ನಾಲ್ವರು ಆಟೋ ಚಾಲಕರ ಮಧ್ಯೆ ಜಗಳವಾಗಿದೆ. ಘಟನೆಯಲ್ಲಿ ಅಜರುದ್ದೀನ್ & ಆಸೀಫ್ ಎಂಬುವವರು ಇಮ್ರಾನ್ & ವಾಸೀಂ ಹಾಶಂವಾಲೆ ಸೋದರರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಸ್ಪರ ಹೊಡೆದಾಡಿಕೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೇ 5ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಮ್ರಾನ್ & ವಾಸೀಂ ವಿದ್ಯಾಗಿರಿ ಠಾಣೆಗೆ ದೂರು ನೀಡಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿ ಸಾವು
ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಹೊರಬರಲಾಗದೇ ಒದ್ದಾಡಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ. ದೊಡ್ಡಸೋಮಣ್ಣರ ಜಯ್ಯಪ್ಪ(45) ಸಾವನ್ನಪ್ಪಿದ ವ್ಯಕ್ತಿ. ಮೇವು ಕಟಾವ್ ಮಾಡಿ ತರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಕೊನೆಗೆ ಗ್ರಾಮಸ್ಥರು ಜೆಸಿಬಿಯಿಂದ ಟ್ರ್ಯಾಕ್ಟರ್ ಮೇಲೆತ್ತಿ ಶವ ಹೊರಕ್ಕೆ ತೆಗೆದಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೀವಂತ ಉಡಗಳ ಮಾರಾಟ ಯತ್ನ ಮೂವರು ಅರೆಸ್ಟ್
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಟೌನ್‌ನ ಶಾಫಿಯಾ ಹೋಟಲ್‌ನಲ್ಲಿ ಏಳು ಜೀವಂತ ಉಡಗಳ ಮಾರಾಟ ಯತ್ನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಕ್ರಮವಾಗಿ ಕಬ್ಬಿಣದ ಪಂಜರದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು. ಎಸ್.ಇಸ್ಮಾಯಿಲ್ ಜಬೀವುಲ್ಲಾ, ರಿಜ್ವಾನ್, ಬಾವಜಾನ್ ಬಂಧಿತರು. ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಕಲಂಗಳಡಿ ಅರಣ್ಯ ಅಪರಾಧ ಮೊಕದ್ದಮೆ ದಾಖಲಾಗಿದೆ.

ಜೀವಂತ ಉಡಗಳ ಮಾರಾಟ ಯತ್ನ ಮೂವರು ಅರೆಸ್ಟ್

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದಲಿತ ಮಹಿಳೆಯನ್ನ ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ
ಗೃಹಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಅಮಾನುಷ ಘಟನೆ ನಡೆದಿದೆ. ದಲಿತ ಮಹಿಳೆಯನ್ನ ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಇನ್ನು ಈ ಸಂಬಂಧ ಶಿವಮೊಗ್ಗ ಎಸ್ಪಿ ಬಿಎಂ ಲಕ್ಷ್ಮಿ ಪ್ರಸಾದ್ ಮಾತನಾಡಿದ್ದು, ಮಹಿಳೆ ಮೇಲೆ ಹಲ್ಲೆ ಮತ್ತು ಮಾನಭಂಗಕ್ಕೆ ಯತ್ನ ನಡೆದಿರುವ ಕುರಿತು ಸಂತ್ರಸ್ತೆ ಮಹಿಳೆಯಿಂದ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆದರ್ಶ ಮತ್ತು ಸಂಪತ್ತು ಇತರೆ ಇಬ್ಬರ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಶೀಘ್ರದಲ್ಲಿ ಆರೋಪಿಗಳ ಪತ್ತೆ ಮಾಡಲಾಗುವುದು ಎಂದರು.

ಈಜಲು ಹೋಗಿ ಅಕ್ಕ, ತಂಗಿ ನೀರುಪಾಲು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅಗರದಳ್ಳಿ ಬಳಿಯ ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಅಕ್ಕ, ತಂಗಿ ನೀರುಪಾಲು ಆಗಿದ್ದಾರೆ. ಅಕ್ಕ ಚಂದು(15), ತಂಗಿ ಹರ್ಷಾ(11) ಮೃತರು. ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಳೆ ನೀರಿನಿಂದ ತುಂಬಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು
ಕೊಪ್ಪಳ‌ ನಗರದ ಕೆ.ಎಸ್.ಆಸ್ಪತ್ರೆಯ ಮುಂಭಾಗ ಮಳೆ ನೀರಿನಿಂದ ತುಂಬಿದ್ದ ಗುಂಡಿಗೆ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಕೊಪ್ಪಳ ತಾಲೂಕಿನ ಮೈನಳ್ಳಿ ನಿವಾಸಿ ಶ್ರೀದೇವಿ(15) ಮೃತ ಬಾಲಕಿ. ನಿನ್ನೆ K.S.ಆಸ್ಪತ್ರೆಗೆ ಊಟ ಕೊಡಲು ಬಂದಿದ್ದಾಗ ದುರಂತ ಸಂಭವಿಸಿದೆ. ಕಾಮಗಾರಿಗಾಗಿ ಅಗೆದಿದ್ದ ಗುಂಡಿಯಲ್ಲಿ ಮಳೆ ನೀರು ತುಂಬಿತ್ತು. ನಿನ್ನೆ ಸಂಜೆ ಮಳೆ ನೀರು ತುಂಬಿದ್ದ ಗುಂಡಿಗೆ ಬಾಲಕಿ ಬಿದ್ದಿದ್ದಾಳೆ. ನಿನ್ನೆ ಬಾಲಕಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಸದ್ಯ ಗುಂಡಿಯಲ್ಲಿ ಶ್ರೀದೇವಿ ಶವ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅನಾಥ ಶವಕ್ಕೆ ಸಂಸ್ಕಾರ ನೆರವೇರಿಸಿದ ಪೊಲೀಸ್​ ಸಿಬ್ಬಂದಿ
ಅಮೃತಹಳ್ಳಿ ಠಾಣಾ ಸಿಬ್ಬಂದಿ ಮಾನವೀಯ ಕಾರ್ಯ ಮಾಡಿದ್ದಾರೆ. ಅನಾಥ ಶವಕ್ಕೆ ಶವ ಸಂಸ್ಕಾರ ನೆರವೇರಿಸಿದ್ದಾರೆ. ಮೇ 4ರಂದು ಅಮೃತಹಳ್ಳಿ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ 55 ವರ್ಷದ ವ್ಯಕ್ತಿ ಪತ್ತೆಯಾಗಿದ್ದರು. ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ಖಚಿತವಾಗಿತ್ತು.‌‌ ಕುಟುಂಬದ ಬಗ್ಗೆ ವಿಚಾರಿಸಿದಾಗ ಮೃತ ವ್ಯಕ್ತಿ ಅನಾಥ ಎಂದು ತಿಳಿದುಬಂದಿತ್ತು. ನಂತರ ಮರಣೋತ್ತರ ಪರೀಕ್ಷೆ ಮಾಡಿಸಿ ಕಲ್ಲಪಲ್ಲಿ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅಮೃತಹಳ್ಳಿ ಠಾಣಾ ಸಿಬ್ಬಂದಿ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಿಸಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸಿದ ಸಿಬ್ಬಂದಿಗಳಾದ ಸಿದ್ದನಗೌಡ, ಭೀಮಾಶಂಕರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Published On - 6:39 pm, Wed, 11 May 22