ಭ್ರಷ್ಟ ಅಬಕಾರಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಮದ್ಯದಂಗಡಿ ಮಾಲೀಕರು! ಅಬಕಾರಿ ಡಿಸಿ ನಾಗಶಯನ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕೆಂದು ಆಗ್ರಹ
ಅನೇಕ ಕಡೆ ಇಂಥ ಅಧಿಕಾರಿಗಳಿಂದ ಮದ್ಯದಂಗಡಿ ಮಾಲೀಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಭ್ರಷ್ಟ ಅಧಿಕಾರಿಯ ಗಳಿಕೆ ಮತ್ತು ಅಕ್ರಮ ಆಸ್ತಿ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯಬೇಕು. ಆ ಮೂಲಕ ಮದ್ಯದಂಗಡಿ ಮಾಲೀಕರಿಂದ ಕೊಳ್ಳೆ ಹೊಡೆದಿರುವ ಅಕ್ರಮ ಬಯಲಿಗೆ ಬರಬೇಕು ಎಂದು ಮದ್ಯದಂಗಡಿ ಮಾಲೀಕರ ಸಂಘದ ಅದ್ಯಕ್ಷ ಬಾಬುರೆಡ್ಡಿ ಆಗ್ರಹಿಸಿದ್ದಾರೆ.
ಚಿತ್ರದುರ್ಗ: ಮದ್ಯದಂಗಡಿ ಪರವಾನಿಗೆ ನವೀಕರಣಕ್ಕಾಗಿ ಅಬಕಾರಿ ಇಲಾಖೆಯ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಇಲಾಖೆ ಉಪ ಆಯುಕ್ತ (ಅಬಕಾರಿ ಇಲಾಖೆ ಡಿಸಿ) ನಾಗಶಯನ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದಿದ್ದಾರೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಮದ್ಯದಂಗಡಿ ಸಂಘದ ಜಿಲ್ಲಾ ಅದ್ಯಕ್ಷರಾದ ಉದ್ಯಮಿ ಜಿ.ಟಿ.ಬಾಬುರೆಡ್ಡಿ ಅವರಿಂದ ಲಂಚ ರೂಪದಲ್ಲಿ ಪಡೆಯುತ್ತಿದ್ದ 2.28ಲಕ್ಷ ರೂಪಾಯಿಯನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಬಕಾರಿ ಇಲಾಖೆ ಡಿಸಿ ನಾಗಶಯನ ಹಾಗೂ ಅವರ ಕಾರು ಚಾಲಕ ಮೋಹಿಸಿನ್ ಅವರನ್ನೂ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಉದ್ಯಮಿ ಬಾಬುರೆಡ್ಡಿ ಅವರಿಗೆ ಸೇರಿದ 15 ಮದ್ಯದ ಅಂಗಡಿಗಳಿವೆ. ಮದ್ಯದಂಗಡಿಗಳ ವಾರ್ಷಿಕ ನವೀಕರಣಕ್ಕಾಗಿ ತಲಾ 36ಸಾವಿರ ರೂಪಾಯಿಯಂತೆ ಒಟ್ಟು 5ಲಕ್ಷ 40ಸಾವಿರ ರೂಪಾಯಿ ನೀಡಬೇಕು. ಅಂತೆಯೇ ಪ್ರತಿ ಅಂಗಡಿಯಿಂದ ತಿಂಗಳಿಗೆ 3ಸಾವಿರದಂತೆ 15ಅಂಗಡಿಯಿಂದ ತಿಂಗಳಿಗೆ ಒಟ್ಟು 45ಸಾವಿರ ರೂಪಾಯಿ ಲಂಚ ನೀಡಬೇಕೆಂದು ಅಬಕಾರಿ ಡಿಸಿ ನಾಗಶಯನ ಬೇಡಿಕೆಯಿಟ್ಟಿದ್ದರು. ಅಂಗಡಿಗಳ ನವೀಕರಣಕ್ಕಾಗಿ ಬಾಬುರೆಡ್ಡಿ 3ಲಕ್ಷ 92ಸಾವಿರ ರೂಪಾಯಿಯನ್ನು ನೀಡಿದ್ದರು. ಉಳಿದ 1ಲಕ್ಷ 48 ಸಾವಿರ ರೂಪಾಯಿ ಬಾಕಿ ಉಳಿದಿತ್ತು. ಅಂತೆಯೇ ಪ್ರತಿ ತಿಂಗಳು 15 ಮದ್ಯದಂಗಡಿಯಿಂದ 45ಸಾವಿರ ರೂಪಾಯಿ ಬದಲು 30ಸಾವಿರ ಮಾತ್ರ ನೀಡಿದ್ದರು. ಹೀಗಾಗಿ, ಅದರ ಬಾಕಿ ಮೊತ್ತ 1ಲಕ್ಷ 80ಸಾವಿರ ಸೇರಿ ಒಟ್ಟು ರೂಪಾಯಿ ಸೇರಿ ಒಟ್ಟು 3ಲಕ್ಷ 28ಸಾವಿರ ರೂಪಾಯಿ ನೀಡುವಂತೆ ನಾಗಶಯನ ಒತ್ತಡ ಹೇರಿದ್ದರು.
ಉದ್ಯಮಿ ಬಾಬುರೆಡ್ಡಿ ಅನೇಕ ಸಲ ಲಂಚದ ಹಣಕ್ಕೆ ಒತ್ತಡ ಹೇರದಂತೆ ಅಬಕಾರಿ ಡಿಸಿ ಬಳಿ ಮನವಿ ಮಾಡಿದ್ದರು. ಮಾತ್ರವಲ್ಲದೆ ಅಬಕಾರಿ ಡಿಸಿ ಪತ್ನಿ ಮೈಸೂರಿನಲ್ಲಿರುವ ಐಪಿಎಸ್ ಅಧಿಕಾರಿ ಕವಿತಾ ಅವರನ್ನೂ ಭೇಟಿಯಾಗಿ ಈ ಬಗ್ಗೆ ಮಾಹಿತಿ ನೀಡಿದ್ದರಂತೆ. ಆದ್ರೆ, ನಾಗಶಯನ ಅವರು ಮಾತ್ರ ಹಣದ ಬೆನ್ನು ಬಿದ್ದಿದ್ದು ಯಾವುದೇ ಕಾರಣಕ್ಕೂ ನಯಾ ಪೈಸೆಯೂ ಲಂಚದ ಹಣ ಪಡೆಯುವಲ್ಲಿ ರಾಜಿ ಆಗದವರಂತೆ ಅಹಂಕಾರದಿಂದ ವರ್ತಿಸಿದ್ದರಂತೆ. ಮದ್ಯ ಮಾರಾಟಗಾರರ ಸಂಘದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆದಿದೆ. ಬಳಿಕ ರಾಜ್ಯ ಮಟ್ಟದ ಸಂಘದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಮದ್ಯ ಮಾರಾಟಗಾರರಿಗೆ ಭ್ರಷ್ಟ ಅಧಿಕಾರಿಗಳಿಂದ ಯಮಹಿಂಸೆ ತಾಳದ ಸ್ಥಿತಿ ನಿರ್ಮಾಣ ಆಗಿದ್ದರಿಂದ ಮದ್ಯ ಮಾರಾಟಗಾರರು ಭ್ರಷ್ಟ ಅಧಿಕಾರಿಯನ್ನು ಎಸಿಬಿ ಬಲೆಗೆ ಬೀಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಭ್ರಷ್ಟ ಅಬಕಾರಿ ಅಧಿಕಾರಿಯ ಹಣ ದಾಹ ಬಯಲು ಮಾಡಿದ ಬಾಬುರೆಡ್ಡಿ ಉದ್ಯಮಿ ಬಾಬುರೆಡ್ಡಿ ಅವರೇ ಖುದ್ದಾಗಿ ಬೆಂಗಳೂರಿಗೆ ತೆರಳಿ ಉನ್ನತ ಮಟ್ಟದ ಎಸಿಬಿ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸ್ ಅಧೀಕ್ಷಕರಾದ ಕಲಾ ಕೃಷ್ಣಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಡಿ.ಎಸ್.ಪಿ ಆರ್.ಮಂಜುನಾಥ್, ಪಿಐ ಮಧುಸೂಧನ್, ಪಿಐ ಉಮೇಶ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆದಿದೆ. ಒಟ್ಟು 3ಲಕ್ಷ 28 ಸಾವಿರ ರೂಪಾಯಿ ಲಂಚದ ಹಣದ ಪೈಕಿ 1ಲಕ್ಷ ರೂಪಾಯಿ ಈ ಮೊದಲೇ ಸ್ವೀಕರಿಸುತ್ತಿದ್ದು ನಿನ್ನೆ ಮಧ್ಯಾಹ್ನದ ವೇಳೆ ಉಳಿದ 2ಲಕ್ಷ 28ಸಾವಿರ ರೂಪಾಯಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಅಬಕಾರಿ ಡಿಸಿ ನಾಗಶಯನ ಹಾಗೂ ಕಾರು ಚಾಲಕ ಮೋಹಿಸಿನ್ ನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿ ನಾಗಶಯನ ಹಾಗೂ ಚಾಲಕನನ್ನು ಬಂಧಿಸಿ ಕರೆದೊಯ್ಯುವ ವೇಳೆ ಮದ್ಯದಂಗಡಿ ಮಾಲೀಕರು ಅಬಕಾರಿ ಕಚೇರಿ ಬಳಿ ಜಮಾಯಿಸಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ, ಭ್ರಷ್ಟರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು. ನಾಗಶಯನ ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ವೇಳೆಯೂ ಭ್ರಷ್ಟಾಚಾರದ ಮೂಲಕ ಅನೇಕರಿಗೆ ಕಿರುಕುಳ ನೀಡಿದ್ದಾನೆ. ಆದ್ರೆ, ರಾಜಕೀಯ ಪ್ರಭಾವ ಹೊಂದಿದ್ದು ಅನೇಕ ಸಲ ಕಾನೂನು ಕ್ರಮದಿಂದ ಬಚಾವಾಗಿದ್ದಾನೆ. ಸದ್ಯ ಈಗ ಎಸಿಬಿ ಬಲೆಗೆ ಬಿದ್ದಿದ್ದು ಕಠಿಣ ಕ್ರಮ ಕೈಗೊಳ್ಳಲಿ ಎಂದು ಮದ್ಯದಂಗಡಿ ಮಾಲೀಕರು ಆಗ್ರಹಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಮದ್ಯದಂಗಡಿ ಮಾಲೀಕರ ಸಂಘದಿಂದ ಸುದ್ದಿಗೋಷ್ಠಿ ಇಂದು ನಗರದ ಪತ್ರಿಕಾ ಭವನದಲ್ಲಿ ಮದ್ಯದಂಗಡಿ ಮಾಲೀಕರ ಸಂಘದಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಭ್ರಷ್ಟ ಅಧಿಕಾರಿ ನಾಗಶಯನ ಇಲ್ಲದ ನೆಪ ಹೇಳಿ ಮದ್ಯದಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದರು. ಲಂಚದ ಹಣ ನೀಡದಿದ್ದರೆ ಯಾವುದಾದರೂ ಕಾರಣ ನೀಡಿ ನೋಟಿಸ್ ನೀಡುತ್ತಿದ್ದರು. ಅಂಗಡಿ ಲೈಸನ್ಸ್ ರದ್ದು ಪಡಿಸುವ ಬೆದರಿಕೆಯೊಡ್ಡಿ ಹಣ ಪೀಕುತ್ತಿದ್ದರು. ಮದ್ಯದಂಗಡಿ ಮಾಲೀಕರ ಮೇಲೆ ಹಲ್ಲೆಯನ್ನೂ ನಡೆಸಿದ ಘಟನೆ ನಡೆದಿದೆ. ಅಧಿಕಾರಿಯ ದಬ್ಬಾಳಿಕೆ ಮಿತಿ ಮೀರಿದ್ದರೂ ಅನೇಕರು ಜೀವನೋಪಾಯಕ್ಕಿರುವ ಮದ್ಯದಂಗಡಿ ಲೈಸನ್ಸ್ ರದ್ದಾಗುವ ಭೀತಿಯಿಂದ ಸುಮ್ಮನಿದ್ದರು. ಮದ್ಯದಂಗಡಿ ಮಾಲೀಕರು ನಾಗಶಯನ ಉಪಟಳದ ಕಾಲದಲ್ಲಿ ಉಸಿರಾಡುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣ ಆಗಿತ್ತು.
ದುಡಿದ ಹಣವೆಲ್ಲ ಭ್ರಷ್ಟ ಅಧಿಕಾರಿಯ ಜೇಬು ಸೇರುವ ಸ್ಥಿತಿ ನಿರ್ಮಾಣ ಆಗಿತ್ತು. ಬ್ಯಾಂಕ್ ಅಕೌಂಟಿನಲ್ಲಿ ಮಾತ್ರ ನಮ್ಮ ಅಕೌಂಟಿಗೆ ಲಾಭ ಜಮೆ ಆಗಿರುವುದು ಕಾಣಿಸುತ್ತಿತ್ತು. ಆದ್ರೆ, ಭ್ರಷ್ಟ ಅಧಿಕಾರಿ ಲಂಚದ ಹಣದಲ್ಲಿ ನಮ್ಮ ಬಳಿ ಅಷ್ಟೂ ಹಣ ಕೀಳುತ್ತಿದ್ದರು. ನಾವು ಮಾತ್ರ ಐಟಿ ಇಲಾಖೆಗೆ ಲಾಭದ ಹಣ ತೋರಿಸುವುದು, ತೆರಿಗೆ ಕಟ್ಟುವು ದೊಡ್ಡ ಹೊರೆ ಆಗುವಂತಾಗಿತ್ತು. ಹೀಗಾಗಿ, ಅನಿವಾರ್ಯವಾಗಿ ಅಬಕಾರಿ ಇಲಾಖೆಯ ಡಿಸಿ ವಿರುದ್ಧ ಎಸಿಬಿಗೆ ದೂರು ನೀಡಬೇಕಾಯಿತು. ಇಂಥ ನಾಲ್ಕಾರು ಅಧಿಕಾರಿಗಳು ಇನ್ನೂ ಇದ್ದಾರೆ. ಅನೇಕ ಕಡೆ ಇಂಥ ಅಧಿಕಾರಿಗಳಿಂದ ಮದ್ಯದಂಗಡಿ ಮಾಲೀಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಭ್ರಷ್ಟ ಅಧಿಕಾರಿಯ ಗಳಿಕೆ ಮತ್ತು ಅಕ್ರಮ ಆಸ್ತಿ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯಬೇಕು. ಆ ಮೂಲಕ ಮದ್ಯದಂಗಡಿ ಮಾಲೀಕರಿಂದ ಕೊಳ್ಳೆ ಹೊಡೆದಿರುವ ಅಕ್ರಮ ಬಯಲಿಗೆ ಬರಬೇಕು ಎಂದು ಮದ್ಯದಂಗಡಿ ಮಾಲೀಕರ ಸಂಘದ ಅದ್ಯಕ್ಷ ಬಾಬುರೆಡ್ಡಿ ಆಗ್ರಹಿಸಿದ್ದಾರೆ.
ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ
ಚಿತ್ರದುರ್ಗದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:12 pm, Wed, 11 May 22