ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟದಲ್ಲಿ ಅರ್ಧಕ್ಕರ್ಧ ಇಳಿಕೆ: ಪ್ರತಿದಿನ ಸರಾಸರಿ 3.38 ಟಿಎಂಸಿ ಅಡಿ ನೀರು ಹೊರಹರಿವು
ಕರ್ನಾಟಕದ 13 ಪ್ರಮುಖ ಜಲಾಶಯಗಳಿಂದ ಅಕ್ಟೋಬರ್ 1ರಿಂದ ಪ್ರತಿದಿನ ಸರಾಸರಿ 3.38 ಟಿಎಂಸಿ ಅಡಿ ನೀರು ಹೊರಹರಿಯುತ್ತಿದೆ. ಸದ್ಯ ಒಟ್ಟು 533.84 ಟಿಎಂಸಿ ಅಡಿ ನೀರಿದ್ದರೂ, ಲೈವ್ ಸ್ಟೋರೇಜ್ 274 ಟಿಎಂಸಿ ಅಡಿಯಷ್ಟಿದೆ. ಕೃಷ್ಣಾ ಜಲಾನಯನದಲ್ಲಿ 241 ಟಿಎಂಸಿ ಅಡಿ ಹಾಗೂ ಕಾವೇರಿ ಜಲಾನಯನದಲ್ಲಿ 32.29 ಟಿಎಂಸಿ ಅಡಿ ನೀರಿದೆ. ನೀರಿನ ಮಟ್ಟ ಗಣನೀಯ ಕುಸಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು
- ರಾಜ್ಯದ ಜಲಾಶಯಗಳಿಂದ ಪ್ರತಿದಿನ 3.38 ಟಿಎಂಸಿ ನೀರು ಹೊರಹರಿವು
- ಜೀವಂತ ನೀರಿನ ಸಂಗ್ರಹ ಕೇವಲ 274 ಟಿಎಂಸಿ ಅಡಿ
- ಕೃಷ್ಣಾ ಜಲಾನಯನದಲ್ಲಿ 241 ಟಿಎಂಸಿ ಅಡಿ ನೀರು
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದ ಪ್ರಮುಖ ಜಲಾಶಯಗಳಿಂದ ಪ್ರತಿದಿನ ಸರಾಸರಿ 3.38 ಟಿಎಂಸಿ ಅಡಿ ನೀರು ಹೊರಹರಿಯುತ್ತಿದೆ. ಅಕ್ಟೋಬರ್ 1ರಿಂದ ರಾಜ್ಯದ 13 ಪ್ರಮುಖ ಜಲಾಶಯಗಳ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸದ್ಯ ಒಟ್ಟು 533.84 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಆದರೆ, ಇದರಲ್ಲಿ ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗೆ ಸುಲಭವಾಗಿ ಬಳಸಬಹುದಾದ ಲೈವ್ ಸ್ಟೋರೇಜ್ ಕೇವಲ 274 ಟಿಎಂಸಿ ಅಡಿಯಷ್ಟಿದೆ. ಕಳೆದ ವರ್ಷ ಇದೇ ದಿನ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 444 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇತ್ತು. ಈ ಬಾರಿ ಲಭ್ಯವಿರುವ ಲೈವ್ ಸ್ಟೋರೇಜ್ ಪ್ರಮಾಣ ಅದಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೇನು ಮಳೆಗಾಲ ಮುಗಿಯುವ ಹೊತ್ತಿನಲ್ಲೇ ಜಲಾಶಯಗಳ ನೀರಿನ ಮಟ್ಟ ಈ ಮಟ್ಟದಲ್ಲಿ ಇಳಿಯುತ್ತಿರುವುದು ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ ಬಗ್ಗೆ ಆತಂಕ ಮೂಡಿಸಿದೆ.
ಕೃಷ್ಣಾ ಜಲಾನಯನದಲ್ಲಿ 241 ಟಿಎಂಸಿ ಅಡಿ ನೀರು
ಸೋಮವಾರದ ಅಂಕಿಅಂಶಗಳ ಪ್ರಕಾರ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ 241 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಪ್ರಮಾಣ ಕೇವಲ 32.29 ಟಿಎಂಸಿ ಅಡಿಯಷ್ಟಿದೆ.
ರಾಜ್ಯದ ಐದು ಜಲಾಶಯಗಳಿಗೆ ಸದ್ಯ ಯಾವುದೇ ಒಳಹರಿವು ಇಲ್ಲ. ಆದರೂ, ಕೆಳಗಿನ ಭಾಗದ ರಾಜ್ಯಗಳಿಗೆ ನೀರು ಬಿಡುವ ಬದ್ಧತೆ, ನದಿಗಳ ಪರಿಸರ ಹರಿವು ಕಾಪಾಡುವುದು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅಗತ್ಯಕ್ಕಾಗಿ ಬಹುತೇಕ ಜಲಾಶಯಗಳಿಂದ ನೀರು ಹೊರಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯದಲ್ಲಿ ಅತಿ ಹೆಚ್ಚು ಲೈವ್ ಸ್ಟೋರೇಜ್
ರಾಜ್ಯದ ಜಲಾಶಯಗಳ ಪೈಕಿ ಆಲಮಟ್ಟಿಯಲ್ಲಿ ಅತಿ ಹೆಚ್ಚು 72 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇದೆ. ನಂತರದ ಸ್ಥಾನಗಳಲ್ಲಿ ಹಿಡಕಲ್‌ನಲ್ಲಿ 46 ಟಿಎಂಸಿ ಅಡಿ, ತುಂಗಭದ್ರಾದಲ್ಲಿ 43 ಟಿಎಂಸಿ ಅಡಿ ಹಾಗೂ ಭದ್ರಾದಲ್ಲಿ 42 ಟಿಎಂಸಿ ಅಡಿ ನೀರಿದೆ.
ಇತರ ಪ್ರಮುಖ ಜಲಾಶಯಗಳ ಲೈವ್ ಸ್ಟೋರೇಜ್
- ವಾಣಿವಿಲಾಸ ಸಾಗರ: 17 ಟಿಎಂಸಿ ಅಡಿ
- ಕೃಷ್ಣರಾಜ ಸಾಗರ (ಕೆಆರ್‌ಎಸ್): 15 ಟಿಎಂಸಿ ಅಡಿ
- ಮಲಪ್ರಭಾ: 14 ಟಿಎಂಸಿ ಅಡಿ
- ಹೇಮಾವತಿ: 11.5 ಟಿಎಂಸಿ ಅಡಿ
- ಹಾರಂಗಿ: 4 ಟಿಎಂಸಿ ಅಡಿ
- ನಾರಾಯಣಪುರ ಸಮತೋಲನ ಜಲಾಶಯ: 4 ಟಿಎಂಸಿ ಅಡಿ
- ಕಬಿನಿ: 1.3 ಟಿಎಂಸಿ ಅಡಿ
ಒಟ್ಟಾರೆ, ರಾಜ್ಯದ ಜಲಾಶಯಗಳಲ್ಲಿ ಒಟ್ಟು ನೀರಿನ ಪ್ರಮಾಣ 533.84 ಟಿಎಂಸಿ ಅಡಿ ಇದ್ದರೂ, ಬಳಕೆಗೆ ಸುಲಭವಾಗಿ ಲಭ್ಯವಿರುವ ಲೈವ್ ಸ್ಟೋರೇಜ್ 274 ಟಿಎಂಸಿ ಅಡಿಯಷ್ಟಿದೆ. ಒಳಹರಿವು ಇಲ್ಲದ ಜಲಾಶಯಗಳು ಮತ್ತು ವಿವಿಧ ಉದ್ದೇಶಗಳಿಗೆ ಮುಂದುವರಿದಿರುವ ನೀರಿನ ಹೊರಹರಿವಿನ ಹಿನ್ನೆಲೆಯಲ್ಲಿ, ಲಭ್ಯ ನೀರಿನ ಸಮರ್ಪಕ ನಿರ್ವಹಣೆ ಮುಖ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




