ಬೆಂಗಳೂರು, ಸೆಪ್ಟೆಂಬರ್ 6: ಮದ್ಯಪಾನ ಮಾಡಿ ಮೃತಪಟ್ಟಿದ್ದರೂ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಯ ವಿವಾದದ ಕಿಡಿ ಆರುವ ಮುನ್ನವೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಹ ಅದೇ ರೀತಿಯ ಹೇಳಿಕೆ ನೀಡಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸ್ವಂತಕ್ಕೆ ಆತ್ಮಹತ್ಯೆ (ಅನ್ಯ ಕಾರಣಗಳಿಂದ ಎಂಬರ್ಥದಲ್ಲಿ) ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ ಎಂದು ಡಿಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ? ಎಲ್ಲ ಸುಳ್ಳು’ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆಯ ವಿಡಿಯೋ ತುಣುಕನ್ನು ‘ಇಂಡಿಯಾ ಟುಡೆ’ ಹಂಚಿಕೊಂಡಿದ್ದು, ಇದನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಮಾಜಾಜಿ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ಸಚಿವರೊಬ್ಬರ ಹೇಳಿಕೆಯ ನಂತರ ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೈತರ ಆತ್ಮಹತ್ಯೆಯನ್ನು ‘ನಕಲಿ’ ಎಂದು ಆರೋಪಿಸಿದ್ದಾರೆ! ನಕಲಿ ಆತ್ಮಹತ್ಯೆಯ ನಂತರ ಪರಿಹಾರ ಪಡೆಯಲು ಬದುಕುವುದು ಹೇಗೆ? ಇದು ಕೇವಲ ವಿಲಕ್ಷಣವಾದ ಕಾಮೆಂಟ್ ಅಲ್ಲ, ರೈತರ ಬಗ್ಗೆ ಭಾರೀ ಅವಹೇಳನಕಾರಿ ಕಾಮೆಂಟ್ ಆಗಿದೆ. ಗ್ರಾಮೀಣ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಯನ್ನು ಕಾಂಗ್ರೆಸ್ ನಿರಾಕರಿಸುವಂತಿಲ್ಲ ಎಂದು ಅಮಿತ್ ಮಾಳವೀಯ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕುಡಿದು ಸತ್ತಿದ್ದರೂ ಪರಿಹಾರದ ಆಸೆಗೆ ಆತ್ಮಹತ್ಯೆ ಅಂತಾರೆ: ಅನ್ನದಾತನ ಬಗ್ಗೆ ಶಿವಾನಂದ ಪಾಟೀಲ್ ಅವಹೇಳನ ಹೇಳಿಕೆ
ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯಿಸಿ, ಒಬ್ಬರು ಕುಡಿದು ಕುಡಿದು ಸತ್ತಿದ್ದರು, ಹೃದಯಾಘಾತದಿಂದ ಸತ್ತವರೂ ಇದ್ದಾರೆ. ಆತ್ಮಹತ್ಯೆ ಅಂತ ದೂರು ಕೊಟ್ಟರೆ ಪರಿಹಾರ ಸಿಗುತ್ತೆ ಎಂಬ ದುರಾಸೆ ಸಂಬಂಧಿಕರದ್ದು ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ