ಮಂಗಳೂರು ಡಿ.02: ರಾಜ್ಯಾದ್ಯಂತ ಡಯಾಲಿಸಿಸ್ (Dialysis) ಕೇಂದ್ರಗಳ ಸಿಬ್ಬಂದಿಗಳು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಬಗ್ಗೆ ನಮಗೆ ಕಾಳಜಿ ಇದೆ. ಸಿಬ್ಬಂದಿಗೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ (Government) ನೋಡಿಕೊಳ್ಳುತ್ತೆ. ಹಿಂದಿನಿಂದಲೂ ಡಯಾಲಿಸಿಸ್ ವ್ಯವಸ್ಥೆಯಲ್ಲಿ ಗೊಂದಲಗಳಿವೆ. ಹಿಂದಿನ ಬಿಜೆಪಿ (BJP) ಸರ್ಕಾರ ಎರಡು ಏಜೆನ್ಸಿಗಳಿಗೆ ಗುತ್ತಿಗೆ ನೀಡಿತ್ತು. ಅದರಲ್ಲಿ ಒಬ್ಬರು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಏಜೆನ್ಸಿ ನಿರ್ವಹಣೆ ಸರಿಯಿರಲಿಲ್ಲ, ಸಿಬ್ಬಂದಿಗೆ ಸರಿಯಾದ ಸಂಬಳ ನೀಡಲಿಲ್ಲ. ಸಿಬ್ಬಂದಿಯ ಇಎಸ್ಐ, ಪಿಎಫ್ಐ ಕಟ್ಟಿರಲಿಲ್ಲ, ಇದನ್ನು ಸರ್ಕಾರ ನಿವಾರಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ (Dinesh Gundurao) ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆದರೆ ಅದಕ್ಕೆ ಮೊದಲು ಆ ಏಜೆನ್ಸಿ ಬ್ಯ್ಲಾಕ್ ಲೀಸ್ಟ್ ಮಾಡುವ ಕೆಲಸ ಆಗುತ್ತಿದೆ. ಇದರ ಜೊತೆಗೆ ನಾಲ್ಕು ವಿಭಾಗದಲ್ಲಿ ಹೊಸ ಏಜೆನ್ಸಿಗಳಿಗೆ ಟೆಂಡರ್ ನೀಡುವ ಪ್ರಕ್ರಿಯೆ ನಡೀತಾ ಇದೆ. ಏಜೆನ್ಸಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಬೇಕು. ಡಯಾಲಿಸ್ ಮೆಷಿನ್ ಕೆಟ್ಟು ಹೋದ ಕಡೆ ಅದನ್ನು ಬದಲಾಯಿಸಲು ಆಗುತ್ತಿಲ್ಲ. ಈಗಿರುವ ಏಜೆನ್ಸಿ ಮಾಡಬೇಕು, ಅಥವಾ ಹೊಸ ಏಜೆನ್ಸಿ ಬಂದ ಬಳಿಕ ಮಾಡಬೇಕು. ಯಾವುದೂ ಆಗದೇ ಇದ್ದಲ್ಲಿ ಸರ್ಕಾರವೇ ನಿರ್ವಹಣೆ ಮಾಡುವ ಬಗ್ಗೆ ಚಿಂತನೆ ಇದೆ ಎಂದರು.
ಭ್ರೂಣ ಹತ್ಯೆ ಕೇಸ್ ಆರೋಪವಿದ್ದ ವೈದ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಸತೀಶ್ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸತೀಶ್ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಅಂತ ಮಾಹಿತಿ ಬಂದಿತ್ತು. ಈ ಕೇಸ್ಗೂ ಸತೀಶ್ ಆತ್ಮಹತ್ಯೆಗೂ ಲಿಂಕ್ ಇದೆಯಾ ನೋಡಬೇಕು. ಸತೀಶ್ ಕೂಡ ನಮ್ಮ ಆಯುಷ್ ಅಧಿಕಾರಿ, ಅವರ ಮೇಲೆ ಆರೋಪ ಇದೆ. ಆಯುಷ್ ಅಧಿಕಾರಿ ಆಗಿದ್ದರೂ ಅಲೋಪತಿ ಪ್ರಾಕ್ಟಿಸ್ ಮಾಡುತ್ತಿದ್ದರಂತೆ. ಭ್ರೂಣ ಹತ್ಯೆ ಸಂಬಂಧ ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸಾರ್ವಜನಿಕರು ಸೇರಿ ಹಲವರ ಬಳಿ ನಾನು ಮಾಹಿತಿ ಪಡೆದಿದ್ದೇನೆ. ಆ ಬಳಿಕ ಸಿಐಡಿ ತನಿಖೆ ಆಗಬೇಕು ಅಂತಾ ಸಿಎಂ ಆದೇಶ ಮಾಡಿದರು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಉಡುಪಿ: ರಾಜ್ಯಾದ್ಯಂತ ಸರ್ಕಾರಿ ಡಯಾಲಿಸಿಸ್ ಯಂತ್ರಗಳು ಸ್ಥಗಿತ; ಸಮಸ್ಯೆ ವಿರುದ್ಧ ಬೂಟ್ ಪಾಲಿಶ್ ಮಾಡಿ ಪ್ರತಿಭಟನೆ
ಲೋಪ ಕಂಡು ಬಂದ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇವರ ಮೇಲೆ ಸಾಕಷ್ಟು ಆರೋಪವಿದೆ, ಮೈಸೂರಲ್ಲೂ ದೂರುಗಳಿದ್ದವು. ನಮ್ಮ ಇಲಾಖೆಯ ಅನೇಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಪೊಲೀಸ್ ಇಲಾಖೆ ಮತ್ತು ಸಿಐಡಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ. ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕಿದೆ. ಈ ಭ್ರೂಣ ಹತ್ಯೆ ತಡೆಯಲು ಕಠಿಣ ಕಾನೂನಿನ ಅವಶ್ಯಕತೆ ಇದೆ. ಕಾನೂನಿನಲ್ಲಿ ಬದಲಾವಣೆ ಆಗಬೇಕಾ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸ್ಕ್ಯಾನಿಂಗ್ ಸೆಂಟರ್ ಸೇರಿ ಹಲವು ಕಡೆ ಪರಿಶೀಲನೆ ಆಗಬೇಕಿದೆ. ಅದರ ಜೊತೆಗೆ ಕೆಲವು ಗುಪ್ತಚರ ಮಾಹಿತಿ ಕಲೆ ಹಾಕಬೇಕಿದೆ. ಇದರಲ್ಲಿ ಯಾರಿದ್ದಾರೆ, ಯಾರು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಆರೋಗ್ಯ ಇಲಾಖೆ ಕೂಡ ಭಾಗಿಯಾಗಬೇಕಿದೆ. ಅವರಿಗೆ ಸಹಕಾರ ಕೊಟ್ಟು ನಿಜಾಂಶ ತಿಳಿಯುವ ಕೆಲಸ ಆಗಬೇಕಿದೆ ಎಂದರು.
ಬಿಜೆಪಿಗೆ ಜಗದೀಶ್ ಶೆಟ್ಟರ್ ವಾಪಸಾಗುವ ಬಗ್ಗೆ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಪಕ್ಷ ಬಿಡಲು ಇವರೇ ಕಾರಣ ಅಂತಾ ಶೆಟ್ಟರ್ ಅವತ್ತೇ ಹೇಳಿದ್ದಾರೆ. ಅವರಿಗೆ ತನ್ನ ತಪ್ಪು ಅರ್ಥವಾಗುತ್ತಿದೆ, ಅದಕ್ಕೆ ಹೀಗೆ ಹೇಳುತ್ತಿದ್ದಾರೆ. ಬಿಜೆಪಿಯವರು 2 ದೋಣಿಯಲ್ಲಿ ಕಾಲಿಡುವ ಕೆಲಸ ಮಾಡುತ್ತಿದ್ದಾರೆ. ಪಂಚ ರಾಜ್ಯ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ. ಸದ್ಯ ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತ ಆಗಿದೆ. ಇವರು ಮುಕ್ತ ಅನ್ನೋ ಮಾತು ಬಿಡಲಿ, ಬಿಜೆಪಿಯೇ ಮುಕ್ತ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ