ಉಡುಪಿ: ರಾಜ್ಯಾದ್ಯಂತ ಸರ್ಕಾರಿ ಡಯಾಲಿಸಿಸ್ ಯಂತ್ರಗಳು ಸ್ಥಗಿತ; ಸಮಸ್ಯೆ ವಿರುದ್ಧ ಬೂಟ್ ಪಾಲಿಶ್ ಮಾಡಿ ಪ್ರತಿಭಟನೆ
ಜಿಲ್ಲಾ ಸರಕಾರಿ ಆಸ್ಪತ್ರೆ ಆವರಣದಲ್ಲಿ ಬೂಟ್ ಪಾಲಿಶ್, ಚಪ್ಪಲಿಗಳನ್ನು ಶುಚಿಗೊಳಿಸಿ ಪ್ರತಿಭಟನಾಕಾರರು ಧನ ಸಂಗ್ರಹ ಮಾಡುತ್ತಿದ್ದಾರೆ. ಅಲ್ಲದೇ ಸಂಗ್ರಹಿಸಿದ ಹಣವನ್ನು ರಾಜ್ಯ ಸರಕಾರಕ್ಕೆ ಜಮಾ ಮಾಡಲು ನಿರ್ಧಾರ ಮಾಡಲಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಯುತ್ತಿದ್ದು, ಎರಡು ದಿನಗಳಿಂದ ಅಹೋರಾತ್ರಿ ಸತ್ಯಾಗ್ರಹ ನಡೆಯುತ್ತಿದೆ.
ಉಡುಪಿ: ತಾಂತ್ರಿಕ ಸಮಸ್ಯೆಯಿಂದ ಡಯಾಲಿಸಿಸ್ (Dialysis) ಯಂತ್ರಗಳು ಸ್ಥಗಿತಗೊಂಡಿದೆ. 23 ಜಿಲ್ಲೆಯ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಈ ಸಮಸ್ಯೆ ಎದುರಾಗಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಡಯಾಲಿಸಿಸ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಬಿಆರ್ಎಸ್ ಸಂಸ್ಥೆ ಸಂಬಳ ನೀಡುತ್ತಿಲ್ಲ. ಹೀಗಾಗಿ ಉಡುಪಿಯಲ್ಲಿ ಶೂ ಪಾಲಿಶ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಶೂ ಪಾಲಿಶ್‌ನಿಂದ ಬಂದ ಹಣ ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಸ್ಯೆ ಬಗೆಹರಿಸಲಿ ಎಂದು ಉಡುಪಿಯಲ್ಲಿ ಕರವೇ ಮುಖಂಡ ಅಹ್ಮದ್ ಅನ್ಸಾರ್ ಹೇಳಿಕೆ ನೀಡಿದ್ದಾರೆ.
ಜಿಲ್ಲಾ ಸರಕಾರಿ ಆಸ್ಪತ್ರೆ ಆವರಣದಲ್ಲಿ ಬೂಟ್ ಪಾಲಿಶ್, ಚಪ್ಪಲಿಗಳನ್ನು ಶುಚಿಗೊಳಿಸಿ ಪ್ರತಿಭಟನಾಕಾರರು ಧನ ಸಂಗ್ರಹ ಮಾಡುತ್ತಿದ್ದಾರೆ. ಅಲ್ಲದೇ ಸಂಗ್ರಹಿಸಿದ ಹಣವನ್ನು ರಾಜ್ಯ ಸರಕಾರಕ್ಕೆ ಜಮಾ ಮಾಡಲು ನಿರ್ಧಾರ ಮಾಡಲಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಯುತ್ತಿದ್ದು, ಎರಡು ದಿನಗಳಿಂದ ಅಹೋರಾತ್ರಿ ಸತ್ಯಾಗ್ರಹ ನಡೆಯುತ್ತಿದೆ.
ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ಡಯಾಲಿಸಿಸ್ ಯಂತ್ರಗಳು ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಂಪೂರ್ಣ ಬಂದ್ ಆಗಿದ್ದು, ಇದನ್ನೇ ನಂಬಿಕೊಂಡ ರೋಗಿಗಳು ಪರದಾಡುವಂತ ಸ್ಥಿತಿ ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 6 ಡಯಾಲಿಸಿಸ್ ಯಂತ್ರಗಳಿವೆ. ರಾಮನಗರ ಜಿಲ್ಲೆಯ ವಿವಿಧ ಕಡೆಗಳಿಂದ ನಿರಂತರವಾಗಿ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಬಡ ರೋಗಿಗಳಿಗೆ ಈ ಯಂತ್ರಗಳೇ ಆರೋಗ್ಯ ಸಂಜೀವಿನಿಯಂತೆ ಕೆಲಸ ಮಾಡುತ್ತಿವೆ. ಹೀಗಿರುವಾಗ ಈ ಯಂತ್ರಗಳೆಲ್ಲ ಕಾರ್ಯ ಚಟುವಟಿಕೆ ನಿಲ್ಲಿಸಿದ್ದು ರೋಗಿಗಳ ಜೀವಕ್ಕೆ ಸಂಚಕಾರ ತಂದೊಡ್ಡಿತ್ತು.
ಸಮಸ್ಯೆ ಏನು? ಡಯಾಲಿಸಿಸ್ ಯಂತ್ರಗಳ ನಿರ್ವಹಣೆಗೆ ನುರಿತ ಸಿಬ್ಬಂದಿ ಇಲ್ಲದಿರುವುದೇ ಸಮಸ್ಯೆಗೆ ಪ್ರಮುಖ ಕಾರಣ. ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಯಂತ್ರಗಳ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಟೆಂಡರ್ ಆಗಿತ್ತು. ಆದರೆ ಕೊವಿಡ್ ಹಿನ್ನೆಲೆಯಲ್ಲಿ ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಾದ 25 ರಿಂದ 30 ಕೋಟಿಯಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಈ ಯಂತ್ರಗಳ ನಿರ್ವಹಣೆಯನ್ನು ನಿಲ್ಲಿಸಿದ್ದಾರೆ. ಅಗತ್ಯ ತಾಂತ್ರಿಕ ಸಿಬ್ಬಂದಿಯ ಸೇವೆಯೂ ಕೂಡ ಈಗ ಬಂದ್ ಆಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಆರು ಯಂತ್ರಗಳ ಪೈಕಿ ಮೂರ್ನಾಲ್ಕು ಯಂತ್ರಗಳು ತಿಂಗಳ ಹಿಂದೆ ಕೆಟ್ಟು ನಿಂತಿದ್ದು, ಅವುಗಳನ್ನು ದುರಸ್ತಿ ಮಾಡಿಸಲಾಗಿತ್ತು. ಕಳೆದ ತಿಂಗಳಷ್ಟೇ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಇಲಾಖೆ ಒದಗಿಸಿದೆ. ಆದರೆ ಅವರಿಗೆ ಈ ಯಂತ್ರಗಳ ನಿರ್ವಹಣೆ ಬಗ್ಗೆ ಗೊತ್ತಿಲ್ಲ. ಹೀಗಾಗಿ ಪದೇ ಪದೇ ಯಂತ್ರ ಕೈಕೊಡುತ್ತಿದೆ. ಈ ಡಯಾಲಿಸಿಸ್ ಯಂತ್ರಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಪ್ರತಿ 2 ರಿಂದ 3 ತಿಂಗಳಿಗೆ ಒಮ್ಮೆ ಸರ್ವಿಸ್ ಮಾಡುವುದು ಅತ್ಯಗತ್ಯವಾಗಿದೆ. ಇವುಗಳ ದುರಸ್ತಿಗೆ ಇದೀಗ 1.83 ಲಕ್ಷ ರೂ. ಮೊತ್ತದ ಪ್ರಸ್ತಾವ ಸಹ ಸಿದ್ಧಪಡಿಸಿ ಅಧಿಕಾರಿಗಳು ಕುಳಿತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ರಾಮನಗರ ಜಿಲ್ಲಾಸ್ಪತ್ರೆಗೆ ನಿತ್ಯ ಡಯಾಲಿಸಿಸ್‌ಗೆಂದು ಬಡ ರೋಗಿಗಳು ಬರುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಈ ಸೇವೆ ಸಂಪೂರ್ಣ ಬಂದ್ ಆಗಿದ್ದು, ಸಾಮಾನ್ಯ ಜನರು ಪರದಾಡುವಂತೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಬಡರೋಗಿಗಳ ನೆರವಿಗೆ ಧಾವಿಸಬೇಕು ಎಂದು ರಾಮನಗರ ನಿವಾಸಿ ಸಿದ್ದರಾಜು ಒತ್ತಾಯಿಸಿದ್ದಾರೆ.
ರೋಗಿಗಳಿಗೆ ತೊಂದರೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ ನಿತ್ಯ ಸರಾಸರಿ 20 ರಿಂದ 25 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದಾಗಿದೆ. ಒಂದು ಯಂತ್ರದಲ್ಲಿ ಒಬ್ಬರಿಗೆ ಡಯಾಲಿಸಿಸ್ ಮಾಡಲು 4 ಗಂಟೆ ತಗುಲುತ್ತದೆ. ಈ ಲೆಕ್ಕದಲ್ಲಿ ಒಂದು ಯಂತ್ರದಲ್ಲಿ ನಿತ್ಯ ಮೂವರು ರೋಗಿಗಳಿಗೆ ಈ ಸೇವೆ ನೀಡಬಹುದಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇಂತಹ ಆರು ಯಂತ್ರಗಳಿವೆ. ಸದ್ಯ ಈ ಯಂತ್ರಗಳು ಕೆಟ್ಟಿರುವ ಕಾರಣ ಚನ್ನಪಟ್ಟಣ, ಮಾಗಡಿ ತಾಲ್ಲೂಕು ಆಸ್ಪತ್ರೆಗಳಲ್ಲಿನ ಯಂತ್ರಗಳನ್ನು ತುರ್ತು ಬಳಕೆಗೆ ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ಡಯಾಲಿಸಿಸ್ ಯಂತ್ರಗಳು; ಚಿಕಿತ್ಸೆಗಾಗಿ ರೋಗಿಗಳ ಪರದಾಟ
Published On - 3:00 pm, Wed, 17 November 21