AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್‌ಡಿಸಿವಿರ್​ ಹಂಚಿಕೆಯಲ್ಲೂ ಅಕ್ರಮ; ಔಷಧ ನಿಯಂತ್ರಕ ಕಚೇರಿಯೇ ಹಗರಣದ ರೂವಾರಿ ಎಂದ ಖಾಸಗಿ ಆಸ್ಪತ್ರೆ ವೈದ್ಯರು

ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಪೂರೈಕೆ ಮಾಡುತ್ತಿಲ್ಲ ಎಂಬ ಆಪಾದನೆಗಳು ಕೇಳಿಬಂದಿವೆ. ವಿಪರ್ಯಾಸವೆಂದರೆ ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ತಲುಪದಂತೆ ನಿಯಂತ್ರಿಸುತ್ತಿರುವುದು ಔಷಧ ನಿಯಂತ್ರಕರ ಕಚೇರಿ ಎನ್ನಲಾಗುತ್ತಿದೆ.

ರೆಮ್‌ಡಿಸಿವಿರ್​ ಹಂಚಿಕೆಯಲ್ಲೂ ಅಕ್ರಮ; ಔಷಧ ನಿಯಂತ್ರಕ ಕಚೇರಿಯೇ ಹಗರಣದ ರೂವಾರಿ ಎಂದ ಖಾಸಗಿ ಆಸ್ಪತ್ರೆ ವೈದ್ಯರು
ರೆಮ್‌ಡಿಸಿವಿರ್ ಇಂಜೆಕ್ಷನ್
Skanda
|

Updated on:May 06, 2021 | 7:16 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಆರೋಗ್ಯ ವ್ಯವಸ್ಥೆ ಕುಸಿದುಹೋಗಿದೆ. ಸಮರ್ಪಕ ಚಿಕಿತ್ಸೆ ಸಿಗದೇ, ಆಕ್ಸಿಜನ್, ರೆಮ್​ಡೆಸಿವಿರ್, ಐಸಿಯು ಲಭ್ಯವಾಗದೇ ಕೊರೊನಾ ಸೋಂಕಿತರು ಅಸಹಾಯಕತೆಯಿಂದ ಪ್ರಾಣ ಬಿಡುವ ದುಸ್ಥಿತಿ ಕಣ್ಣೆದುರಿಗೆ ಇದೆ. ಇಂತಹ ಸಂದರ್ಭದಲ್ಲೂ ಆರೋಗ್ಯ ವ್ಯವಸ್ಥೆಯಲ್ಲಿ ಎಗ್ಗಿಲ್ಲದ ಅಕ್ರಮ ನಡೆಯುತ್ತಿದ್ದು ಕೆಲ ಧನದಾಹಿಗಳು ಸೋಂಕಿತರ ಆರೋಗ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಅಕ್ರಮದ ಹೊಗೆ ಆಡಲಾರಂಭಿಸಿದೆ. ಈ ಕುರಿತು ಧ್ವನಿ ಎತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರು ಇದೀಗ ಕರ್ನಾಟಕ ಡ್ರಗ್ಸ್ ಮತ್ತು ಲಾಜಿಸ್ಟಿಕ್ ಕಂಟ್ರೋಲ್ ಬೋರ್ಡ್ ಮೇಲೆಯೇ ನೇರ ಆರೋಪ ಹೊರಿಸಿದ್ದಾರೆ. ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಮಾರಾಟವಾಗಲು ಔಷಧ ನಿಯಂತ್ರಕರ ಕಚೇರಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಂತೂ ರಾಜ್ಯದ ಅರ್ಧಪಾಲು ಸೋಂಕು ಪತ್ತೆಯಾಗುತ್ತಿರುವುದರಿಂದ ವೈದ್ಯಕೀಯ ಸೌಲಭ್ಯಗಳ ಅಗತ್ಯ ಅತೀ ಹೆಚ್ಚಿದೆ. ಆದರೆ, ರಾಜ್ಯ ರಾಜಧಾನಿಯಲ್ಲೇ ಬೆಡ್​ ಇಲ್ಲ, ಆಕ್ಸಿಜನ್ ಇಲ್ಲ, ರೆಮ್​ಡೆಸಿವಿರ್ ಇಲ್ಲ ಎಂಬ ಕೂಗು ಮೇಲಿಂದ ಮೇಲೆ ಕೇಳಿಬರುತ್ತಿದೆ. ಬಹುಮುಖ್ಯವಾಗಿ ಆಕ್ಸಿಜನ್ ಜತೆಗೆ ಕೊರೊನಾ ಸೋಂಕಿತರಿಗೆ ಜೀವ ರಕ್ಷಕ ಎಂಬಂತೆ ಬಿಂಬಿತವಾಗಿರುವ ರೆಮ್​​ಡಿಸಿವಿರ್​ ಆ್ಯಂಟಿ ವೈರಲ್ ಇಂಜೆಕ್ಷನ್​ಗೆ ಬೇಡಿಕೆ ಹೆಚ್ಚಿರುವುದರಿಂದ ಅಭಾವ ತಲೆದೋರಿದೆ. ಸದ್ಯ ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಪೂರೈಕೆ ಮಾಡುತ್ತಿಲ್ಲ ಎಂಬ ಆಪಾದನೆಗಳು ಕೇಳಿಬಂದಿವೆ. ವಿಪರ್ಯಾಸವೆಂದರೆ ಖಾಸಗಿ ಆಸ್ಪತ್ರೆಗಳಿಗೆ ರೆಮ್​ಡೆಸಿವಿರ್ ತಲುಪದಂತೆ ನಿಯಂತ್ರಿಸುತ್ತಿರುವುದು ಔಷಧ ನಿಯಂತ್ರಕರ ಕಚೇರಿ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರು, ಡ್ರಗ್ಸ್ ಕಂಟ್ರೋಲ್ ಬೋರ್ಡ್ ಈ ಸಮಸ್ಯೆಗೆ ಮುಖ್ಯ ಕಾರಣ. ಔಷಧ ನಿಯಂತ್ರಕರ ಕಚೇರಿಯಿಂದ ಸುಳ್ಳು ಲೆಕ್ಕ ಕೊಡ್ತಿದ್ದಾರೆ. ಪೂರೈಕೆ ಮಾಡದಿದ್ದರೂ ಪೂರೈಕೆ ಮಾಡಿದಂತೆ ಲೆಕ್ಕ ತೋರಿಸ್ತಾರೆ. ನಾವು 20 ಜನರಿಗೆ ರೆಮ್‌ಡಿಸಿವಿರ್ ಪೂರೈಕೆಗೆ ಮನವಿ ಮಾಡುತ್ತೇವೆ. ಆದರೆ, ಈ ಪೈಕಿ ಕೇವಲ ನಾಲ್ವರಿಗೆ ಮಾತ್ರ ರೆಮ್‌ಡಿಸಿವಿರ್ ನೀಡುತ್ತಾರೆ. ಲೆಕ್ಕ ತೋರಿಸುವಾಗ ಬೇಡಿಕೆ ಸಲ್ಲಿಸಿದವರ ಹೆಸರಿನಲ್ಲೇ 20 ರೆಮ್‌ಡಿಸಿವಿರ್ ಪೂರೈಕೆ ಆಗಿರುತ್ತದೆಯಾದರೂ ನಮಗೆ ಕೇವಲ ನಾಲ್ಕು ಕೈ ಇಂಜೆಕ್ಷನ್​ ಕೈ ಸೇರುತ್ತದೆ. ಅದರಲ್ಲಿ ಉಳಿದ 16 ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಡ್ರಗ್ಸ್ ಕಂಟ್ರೋಲ್ ಬೋರ್ಡ್ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

ಆಕ್ಸಿಜನ್​ ವ್ಯವಸ್ಥೆಗೆ ಖಾಸಗಿ ಆಸ್ಪತ್ರೆ ಪರದಾಟ ಮಡಿವಾಳದ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಉಂಟಾಗಿದ್ದ ಆಕ್ಸಿಜನ್ ಅಭಾವ ಸಮಸ್ಯೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಆಕ್ಸಿಜನ್ ಪೂರೈಸಲು ಬಿಬಿಎಂಪಿ, ಆರೋಗ್ಯ ಇಲಾಖೆ ಮೊರೆ ಇಟ್ಟರೂ ಯಾರೂ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಆಕ್ಸಿಜನ್ ಪೂರೈಕೆಗೆ ಮನವಿ ಸಲ್ಲಿಸಲು ಕೇಳುತ್ತಾರೆ. ಅದರಂತೆ ಮನವಿ ಮಾಡಿದರೂ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಾರೆ ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ 23 ಕೊರೊನಾ ಸೋಂಕಿತರಿಗೆ ಆಕ್ಸಿಜನ್​ ಕೊರತೆ ಎದುರಾಗಿತ್ತು. ರಾತ್ರಿ 12 ಗಂಟೆಗೆ ಆಕ್ಸಿಜನ್​ ಖಾಲಿಯಾಗಲಿದೆ ಎಂದು ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಆಸ್ಪತ್ರೆ ವತಿಯಿಂದಲೇ 12 ಆಕ್ಸಿಜನ್ ಸಿಲಿಂಡರ್​ ವ್ಯವಸ್ಥೆ ಮಾಡಲಾಗಿದೆ. ಸದ್ಯ ಒಂದು ದಿನಕ್ಕೆ ಆಗುವಷ್ಟು ಮೆಡಿಕಲ್ ಆಕ್ಸಿಜನ್ ವ್ಯವಸ್ಥೆ ಆಗಿದೆ ಎಂದು ವೆಂಕಟೇಶ್ವರ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ; ಕಲಬುರಗಿಯಲ್ಲಿ ಇಬ್ಬರು ಬಂಧನ 

FMR CM Siddu: ಆರೋಗ್ಯ ಸಚಿವರಿಗೇ ಫೋನ್ ಮಾಡಿದ್ದೀನಿ ಆದ್ರೂ ರೆಮ್​ಡಿಸಿವರ್ ಇಂಜೆಕ್ಷನ್ ಸಿಗಲಿಲ್ಲ

Published On - 7:15 am, Thu, 6 May 21