
ಬೆಂಗಳೂರು, (ಮಾರ್ಚ್ 07): 18ನೇ ಲೋಕಸಭಾ ಚುನಾವಣೆಗಾಗಿ (Loksabha Elections 2024) ಈಗಾಗಲೇ ಭಾರತೀಯ ಚುನಾವಣಾ ಆಯೋಗವು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆ ದಿನಾಂಕ ಯಾವಾಗ ಬೇಕಾದರೂ ಪ್ರಕಟವಾಗಬಹುದು. ಇದಕ್ಕೆ ಪೂರಕವೆಂಬತೆ ಕರ್ನಾಟಕ ಚುನಾವಣೆ ಆಯೋಗವು(karnataka election commission) ಸಹ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ತಯಾರಿರುವಂತೆ ಸೂಚಿಸಿದೆ. ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳಿಗೆ ಆಯೋಗ ಪತ್ರ ಬರೆದಿದ್ದು, ನೀತಿಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಜ್ಜಾಗಿ. ನೀತಿಸಂಹಿತೆ ಜಾರಿಯಾದ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು. ಈ ಹಿನ್ನೆಲೆಯಲ್ಲಿ ಈಗಲೇ ತಂಡ ರಚಿಸಿಕೊಳ್ಳುವಂತೆ ಹೇಳಿದೆ.
ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಭದ್ರತಾ ಪಡೆಗಳ ಅಗತ್ಯತೆ, ಗಡಿಗಳಲ್ಲಿ ಬಿಗಿಯಾದ ಕಣ್ಗಾವಲು ಹಾಗೂ ನೀತಿ ಸಂಹಿತೆ ಬಗ್ಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಚುನಾವಣೆ ಆಯೋಗವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಯನ್ನು ನಿರಾತಂಕ ಹಾಗೂ ಅಚ್ಚುಕಟ್ಟಾಗಿ ನಡೆಯಸಲು ಆಯಾ ಮತದಾರ ಕ್ಷೇತ್ರವಾರು, ಜಿಲ್ಲಾವಾರು ಸರ್ಕಾರಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ರಾಜ್ಯ ಹಾಗೂ ಜಿಲ್ಲಾವಾರು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ತಿದ್ದುಪಡಿಗೂ ಸಲಹೆ ನೀಡಲಾಗಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಗಿಂತ 4 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಒಟ್ಟು 5.37 ಕೋಟಿ ಮತದಾರರಿದ್ದಾರೆ.
ಚುನಾವಣಾ ಆಯೋಗವು ಹಲವು ರಾಜ್ಯಗಳಿಗೆ ಭೇಟಿ ನೀಡಿ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ದು, ರಾಜ್ಯ ಚುನಾವಣಾ ಆಯೋಗಗಳಿಗೆ ತಯಾರಿರುವಂತೆ ಸೂಚನೆಗಳನ್ನು ಸಹ ನೀಡಿದೆ. ಹೀಗಾಗಿ ಮಾರ್ಚ್ 10ರ ನಂತರ ಯಾವುದೇ ಸಂದರ್ಭದಲ್ಲೂ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಬಹುದು. ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲೇ ಮತದಾನ ನಡೆಯುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.