ಬೆಂಗಳೂರು, ಸೆಪ್ಟೆಂಬರ್ 25: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈನ್‌ಶಾಪ್‌ಗಳಿಗೆ ಪರವಾನಗಿ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂಬ ವಿಚಾರವಾಗಿ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಪ್ರಸ್ತಾವನೆಯಾಗಿದ್ದು, ಸರ್ಕಾರ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. ವೈನ್‌ಶಾಪ್‌ಗಳಿಗೆ (wineshops) ಪರವಾನಗಿ ನೀಡುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಟೀಕಿಸಿದ ನಂತರ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ತನ್ನ ಐದು ‘ಗ್ಯಾರಂಟಿ’ಗಳಿಗೆ ಮದ್ಯ ಮಾರಾಟ ಮಾಡುವ ಮೂಲಕ ಆದಾಯ ಕ್ರೋಢೀಕರಣ ಮಾಡಲು ಮುಂದಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು.
ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ತಿಮ್ಮಾಪುರ, ಅಕ್ರಮ ಮದ್ಯ ಮಾರಾಟ ತಪ್ಪಿಸುವ ಪ್ರಸ್ತಾವನೆ ಇದಾಗಿದೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಕೆಲವರು ಮನೆ, ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ದರ ಹೆಚ್ಚಿಸಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಆದ್ದರಿಂದ, ಅಂತಹ ಅಭ್ಯಾಸಗಳನ್ನು ತಪ್ಪಿಸುವುದು ಹೇಗೆ ಎಂಬ ಚರ್ಚೆಯ ವೇಳೆ, ಸ್ಥಳೀಯ ಮಟ್ಟದಲ್ಲಿ ಪರವಾನಗಿಗಳನ್ನು ನೀಡಲು ನಾವು ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದೇವೆ. ಇದು ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ತಿಮ್ಮಾಪುರ ಹೇಳಿದ್ದಾರೆ.
3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿಗಳಲ್ಲಿ ವೈನ್ ಶಾಪ್ ಪರವಾನಗಿ ನೀಡಲು ಅಥವಾ ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಎಂಎಸ್‌ಐಎಲ್) ಮಳಿಗೆ ತೆರೆಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಕೂಡ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಪ್ರಸ್ತಾಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿ ಕುಮಾರಸ್ವಾಮಿ ‘ಮದ್ಯ ಭಾಗ್ಯ’ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಐಟಿ-ಬಿಟಿಗೆ ಹೆಸರುವಾಸಿಯಾಗಿದೆ. ಇದು ಇಂದಿನಿಂದ ಬದಲಾಗಬಹುದು. ಕಾರಣ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ. ಚುನಾವಣೆಗೂ ಮುನ್ನ ಶಾಂತಿಯ ತೋಟ ಎಂದವರು, ಗೆದ್ದ ನಂತರ ಕರ್ನಾಟಕ ಕುಡುಕರ ತೋಟ ಎಂದು ಕರೆಯಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಉದ್ದೇಶ ಎಂದು ಕುಮಾರಸ್ವಾಮಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು ಬಂದ್; ವಿಮಾನ, ರೈಲು ನಿಲ್ದಾಣಗಳಿಗೆ ಬಂದವರು ಗಮ್ಯ ತಲುಪಲು ಏನು ವ್ಯವಸ್ಥೆ? ಇಲ್ಲಿದೆ ವಿವರ
ಮಾಜಿ ಸಿಎಂ ಮತ್ತು ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಅವರು ಈ ಪ್ರಸ್ತಾಪವನ್ನು ‘ಮದ್ಯ ಗ್ಯಾರಂಟಿ’ ಎಂದು ವ್ಯಂಗ್ಯವಾಡಿದ್ದಾರೆ.
ಒಂದೆಡೆ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಪ್ರತಿ ಮಹಿಳೆಗೆ 2000 ರೂಪಾಯಿ ನೀಡುತ್ತಿದ್ದರೆ, ಮತ್ತೊಂದೆಡೆ ವೈನ್ ಶಾಪ್‌ಗಳ ಮೂಲಕ ಅವರ ಗಂಡನಿಂದ ಹಣವನ್ನು ಕಸಿದುಕೊಳ್ಳಲು ಹೊಸ ಮಾರ್ಗವನ್ನು ಕಂಡುಕೊಂಡಿದೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ