ಬೆಂಗಳೂರು ಬಂದ್; ವಿಮಾನ, ರೈಲು ನಿಲ್ದಾಣಗಳಿಗೆ ಬಂದವರು ಗಮ್ಯ ತಲುಪಲು ಏನು ವ್ಯವಸ್ಥೆ? ಇಲ್ಲಿದೆ ವಿವರ
Bangalore Bandh: ಬಂದ್ ದಿನ ವಿವಿಧ ಊರುಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ತಲುಪುವವರು ಗಮ್ಯ ತಲುಪಲು ವಾಹನ ವ್ಯವಸ್ಥೆ ಇದೆಯೇ? ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಂದ ನಿಗದಿತ ಸ್ಥಳಗಳಿಗೆ ತೆರಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಆ ಕುರಿತ ವಿವರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 25: ಕಾವೇರಿ ನೀರು ಹಂಚಿಕೆ (Cauvery Dispute) ವಿವಾದಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ಗೆ (Bangalore Bandh) ಕರೆ ನೀಡಿವೆ. ರಾಜಕೀಯ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಸಹ ಈ ಬಂದ್ಗೆ ಬಂಬಲ ಸೂಚಿಸಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು, ಮಂಗಳವಾರದ ಬಂದ್ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ.
ಬಂದ್ ದಿನ ವಿವಿಧ ಊರುಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ತಲುಪುವವರು ಗಮ್ಯ ತಲುಪಲು ವಾಹನ ವ್ಯವಸ್ಥೆ ಇದೆಯೇ? ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಂದ ನಿಗದಿತ ಸ್ಥಳಗಳಿಗೆ ತೆರಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ವಿಮಾನ ನಿಲ್ದಾಣದಿಂದ ಕ್ಯಾಬ್ ವ್ಯವಸ್ಥೆ ಇದೆಯೇ?
ಕೆಲ ಸಂಘಟನೆಗಳು ಬಂದ್ಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿವೆ. ಓಲಾ, ಉಬರ್ ಸಂಸ್ಥೆಗಳು ಬಂದ್ಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಮಂಗಳವಾರ ಎಂದಿನಂತೆ ಆಟೋ, ಟ್ಯಾಕ್ಸಿ ಸೇವೆ ನೀಡಲಿವೆ. ಹೀಗಾಗಿ ವಿಮಾನ ನಿಲ್ದಾಣಗಳಿಂದ ಬೇರೆಡೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಆಗದು.
ರೈಲು ನಿಲ್ದಾಣಗಳಿಂದ ತೆರಳುವವರಿಗೆ ಏನು ವ್ಯವಸ್ಥೆ?
ರೈಲು ನಿಲ್ದಾಣಗಳಿಗೆ ಬಂದು ಬೇರೆಡೆ ತೆರಳಬೇಕಿರುವವರಿಗೂ ಓಲಾ, ಉಬರ್ ಆಟೋ, ಟ್ಯಾಕ್ಸಿ ಸೇವೆ ದೊರೆಯಲಿದೆ. ಆದಾಗ್ಯೂ, ಬಿಎಂಟಿಸಿ ಬಸ್ ಹಾಗೂ ಸರ್ಕಾರಿ ಬಸ್ ಸೇವೆ ಲಭ್ಯವಿರಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಬೆಂಗಳೂರು ಬಂದ್ ದಿನ ‘ನಮ್ಮ ಮೆಟ್ರೋ’ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆಯೇ ಮೆಟ್ರೋ ರೈಲು ಸಂಚಾರ ಇರಲಿದೆ. ಸಂದರ್ಭಕ್ಕೆ ತಕ್ಕಂತೆ ಮೆಟ್ರೋ ಕಾರ್ಯಚರಣೆ ಇರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ರೈಲು ನಿಲ್ದಾಣಗಳಿಂದ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ. ಆದಾಗ್ಯೂ, ಸ್ಥಿತಿಗತಿಗೆ ಅನುಗುಣವಾಗಿ ಮೆಟ್ರೋ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಂಆರ್ಸಿಎಲ್ ಹೇಳಿದೆ.
ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್: ಎಂದಿನಂತೆ ಸಂಚರಿಸಲಿದೆ ಮೆಟ್ರೋ, ಆದರೆ…
ಆಟೋ ಸೇವೆ ಸಿಗಲ್ಲ
ಆಟೋ ಅಸೋಸಿಯೇಷನ್ ಬೆಂಗಳೂರು ಬಂದ್ಗೆ ಬೆಂಬಲ ಸೂಚಿಸಿದೆ. ಮಂಗಳವಾರ ನಡೆಯಲಿರುವ ಪ್ರತಿಭಟನಾ ರ್ಯಾಲಿಯಲ್ಲಿ ಆಟೋ ಚಾಲಕರು ಭಾಗಿಯಾಗಲಿದ್ದಾರೆ ಎಂದು ಪೀಸ್ ಆಟೋ ಅಸೋಸಿಯೇಷನ್ ಅಧ್ಯಕ್ಷ ರಘು ತಿಳಿಸಿದ್ದಾರೆ. ಹೀಗಾಗಿ ರೈಲ್ವೆ ನಿಲ್ದಾಣಗಳಿಂದ ತೆರಳುವವರಿಗೆ ಸಾಮಾನ್ಯ (ಓಲಾ, ಉಬರ್ ಹೊರತುಪಡಿಸಿ) ಆಟೋ ಸೇವೆ ಸಿಗುವುದು ಅನುಮಾನ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:03 pm, Mon, 25 September 23