AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ನಕಲಿ ಔಷಧ ಪ್ರಕರಣ: ಒಂದೂವರೆ ವರ್ಷದಲ್ಲಿ ವಿತರಣೆಯಾಗಿತ್ತು 15 ಸಾವಿರ ನಕಲಿ ಆ್ಯಂಟಿಬಯೋಟಿಕ್‌ ವಯಲ್!

ಕರ್ನಾಟಕದ ನಕಲಿ ಔಷಧ ದಂಧೆ ಪ್ರಕರಣ ಸಂಬಂಧ ನಡೆಯುತ್ತಿರುವ ಎಸ್‌ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 15 ಸಾವಿರ ನಕಲಿ ಆ್ಯಂಟಿಬಯೋಟಿಕ್ ವಯಲ್‌ಗಳನ್ನು ವಿತರಿಸಿರುವುದು ಪ್ರಾಥಮಿಕವಾಗಿ ಪತ್ತೆಯಾಗಿದೆ. ಆರೋಪಿಗಳು ಅಸಲಿ ಔಷಧದ ಬದಲು ಜೆನೆರಿಕ್ ಔಷಧವನ್ನು ವಯಲ್‌ಗಳಲ್ಲಿ ತುಂಬಿ, ಫೈಜರ್ ಹೆಸರಿನ ಲೇಬಲ್ ಬಳಸಿ ವಿತರಿಸುತ್ತಿದ್ದರು ಎಂಬುದು ಗೊತ್ತಾಗಿದೆ.

ಕರ್ನಾಟಕ ನಕಲಿ ಔಷಧ ಪ್ರಕರಣ: ಒಂದೂವರೆ ವರ್ಷದಲ್ಲಿ ವಿತರಣೆಯಾಗಿತ್ತು 15 ಸಾವಿರ ನಕಲಿ ಆ್ಯಂಟಿಬಯೋಟಿಕ್‌ ವಯಲ್!
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: Oct 07, 2026 | 9:44 AM

Share

ಮುಖ್ಯಾಂಶಗಳು

  • 15 ಸಾವಿರ ನಕಲಿ ಆ್ಯಂಟಿಬಯೋಟಿಕ್‌ ವಯಲ್ ವಿತರಣೆಯಾಗಿರುವುದು ಪತ್ತೆ
  • ಫೈಜರ್ ಹೆಸರಿನ ನಕಲಿ ಲೇಬಲ್ ಬಳಸಿದ್ದ ಆರೋಪಿಗಳು
  • ಎಸ್​ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಯಲು

ಬೆಂಗಳೂರು, ಅಕ್ಟೋಬರ್ 7: ಕರ್ನಾಟಕದಲ್ಲಿ ನಕಲಿ ಔಷಧ ದಂಧೆ ಕುರಿತು ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಕಳೆದ ಒಂದೂವರೆ ವರ್ಷದಲ್ಲಿ ಎರಡು ನಕಲಿ ಆ್ಯಂಟಿಬಯೋಟಿಕ್‌ಗಳ ಸುಮಾರು 15 ಸಾವಿರ ವಯಲ್‌ಗಳನ್ನು (ಔಷಧ ತುಂಬಿರುವ ಶೀಷೆ) ವಿತರಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಜವಿಸೆಫ್ಟಾ (Zavicefta) ಮತ್ತು ಎಮ್ಬ್ಲಾವಿಯೋ (Emblaveo) ಹೆಸರಿನ ಈ ಔಷಧಿಗಳ ಮಾರಾಟ ಹಕ್ಕು ಫೈಜರ್ ಸಂಸ್ಥೆಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯಿಂದ ಮೂಲ ಲೇಬಲ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು

ಆರೋಪಿಗಳು 2025ರ ಏಪ್ರಿಲ್‌ನಿಂದ ಈ ಜಾಲವನ್ನು ನಡೆಸುತ್ತಿದ್ದರು. ಅಸಲಿ ಔಷಧದ ಬದಲು ಜೆನೆರಿಕ್ ಔಷಧವನ್ನು ವಯಲ್‌ಗಳಲ್ಲಿ ತುಂಬಿ, ಅವು ಅಸಲಿ ಔಷಧಗಳಂತೆ ಕಾಣುವಂತೆ ಫೈಜರ್ ಹೆಸರಿನ ಲೇಬಲ್‌ಗಳನ್ನು ಬಳಸುತ್ತಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿಯಲ್ಲಿರುವ ಫೈಜರ್‌ನ ಉತ್ಪಾದನಾ ಘಟಕದಿಂದ ಮೂಲ ಕಂಪನಿಯ ಲೇಬಲ್‌ಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು.

ನಕಲಿ ಔಷಧಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಪತ್ತೆಹಚ್ಚಲು ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಯಲ್‌ಗಳ ವಿತರಣಾ ಜಾಲವನ್ನೂ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಮಾರಾಟ, ಖರೀದಿ ಮತ್ತು ದಾಸ್ತಾನು ಪರಿಶೀಲನೆ

ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಔಷಧ ವಿತರಣೆಯ ಸಂಪೂರ್ಣ ಜಾಲವನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳು ಖರೀದಿಸಿದ ಔಷಧ ಪ್ರಮಾಣ, ಮಾರಾಟ ಮಾಡಿದ ಪ್ರಮಾಣ, ಪಡೆದ ಹಾಗೂ ವಿತರಿಸಿದ ದಾಸ್ತಾನು ಸೇರಿದಂತೆ ಪ್ರತಿಯೊಂದು ಹಂತದ ಮಾಹಿತಿಯನ್ನು ತಾಳೆ ಹಾಕಿ ಪರಿಶೀಲಿಸಲಾಗುತ್ತಿದೆ. sಆರೋಪಿಗಳು ಔಷಧಿಗಳನ್ನು ಕೆಲವು ಸಂಸ್ಥೆಗಳಿಗೆ ಮಾರಾಟ ಮಾಡಿದ್ದು, ಆ ಸಂಸ್ಥೆಗಳು ಮುಂದೆ ಯಾರಿಗೆ ಪೂರೈಸಿವೆ ಎಂಬುದನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿತರಣಾ ಜಾಲದ ಪ್ರತಿಯೊಂದು ಹಂತವನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ತನಿಖೆಯಲ್ಲಿ ಕ್ಯಾನ್ಸರ್ ಔಷಧಿಗಳ ನಕಲಿ ತಯಾರಿಕೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ. ಆದರೂ ಈ ಕುರಿತು ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವಯಲ್‌ಗೆ ₹5,500ರಿಂದ ₹6,500 ಬೆಲೆ

ಜವಿಸೆಫ್ಟಾ ಮತ್ತು ಎಮ್ಬ್ಲಾವಿಯೋ ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಪ್ರಿಸ್ಕ್ರಿಪ್ಷನ್ ಆ್ಯಂಟಿಬಯೋಟಿಕ್‌ಗಳಾಗಿವೆ. ಜವಿಸೆಫ್ಟಾ ಒಂದು ವಯಲ್‌ಗೆ ಸುಮಾರು ₹5,500ರಿಂದ ₹6,000 ಹಾಗೂ ಎಮ್ಬ್ಲಾವಿಯೋ ಒಂದು ವಯಲ್‌ಗೆ ₹6,000ರಿಂದ ₹6,500ರವರೆಗೆ ಬೆಲೆ ಇದೆ. ಆರೋಪಿಗಳು ಕಡಿಮೆ ವೆಚ್ಚದಲ್ಲಿ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಬ್ರ್ಯಾಂಡೆಡ್ ಔಷಧಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿ ₹10 ಕೋಟಿಗೂ ಅಧಿಕ ಲಾಭ ಗಳಿಸಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್, ಚೆನ್ನೈ, ಉತ್ತರಾಖಂಡ್ ಲಿಂಕ್

ಹೈದರಾಬಾದ್, ಚೆನ್ನೈ, ಉತ್ತರಾಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ. ಬಳಿಕ ಅವುಗಳನ್ನು ವಯಲ್‌ಗಳಲ್ಲಿ ತುಂಬಿ, ಫೈಜರ್ ಉತ್ಪನ್ನಗಳೆಂದು ಲೇಬಲ್ ಮಾಡಿ ಡಿಎಂ ಫಾರ್ಮಾ ಮೂಲಕ ವಿತರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್: ಬೆಂಗಳೂರಿನ ಹಲವೆಡೆ ದಾಳಿ

ಡಿಎಂ ಫಾರ್ಮಾ ಸಂಸ್ಥೆ ಚೆನ್ನೈನ ಬಾಲಸುಬ್ರಮಣಿ ಹಾಗೂ ಶಿವಮೊಗ್ಗ ಮೂಲದ, ಪ್ರಮುಖ ಆರೋಪಿ ಆರ್. ಪ್ರಶಾಂತ್ ಬಾಬು ಪತ್ನಿ ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ಬಾಬು ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿದ್ದ.

ಆಸ್ಪತ್ರೆಗಳಿಗೂ ನಕಲಿ ಔಷಧ ಪೂರೈಕೆ?

ಈ ಔಷಧಿಗಳನ್ನು ವೀರೇಶ್ ಕುಮಾರ್ ಜೈನ್ ಮಾಲೀಕತ್ವದ ಕೃಪಾ ಫಾರ್ಮಾಗೆ ಪೂರೈಸಲಾಗುತ್ತಿತ್ತು. ಬಳಿಕ ಕೃಪಾ ಫಾರ್ಮಾ ಇತರೆ ಔಷಧ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಅಸಲಿ ಔಷಧಿಗಳ ಜತೆಗೆ ನಕಲಿ ಔಷಧಿಗಳನ್ನೂ ಪೂರೈಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನ ಬಾರದಂತೆ ಮಾಡಲು ಈ ರೀತಿಯಲ್ಲಿ ವಿತರಿಸಲಾಗುತ್ತಿತ್ತು. ನಕಲಿ ಔಷಧ ತಯಾರಿಕೆಗಾಗಿ ಪ್ರಶಾಂತ್ ಬಿದಡಿ ಸಮೀಪದ ಫಾರ್ಮ್‌ಹೌಸ್‌ವೊಂದನ್ನು ಬಾಡಿಗೆಗೆ ಪಡೆದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಎಸ್‌ಐಟಿ ಬಂಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More