
ಬೆಂಗಳೂರು, ಆಗಸ್ಟ್ 22: ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ಮಳೆ (Karnataka Rains) ಬಿಡುವುಕೊಟ್ಟಿದೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ರಾಜ್ಯದ ಜಿಲ್ಲೆಗಳಿಗೆ 2.15 ಲಕ್ಷ ಕ್ಯೂಸೆಕ್‌ನೀರು ಹರಿದುಬರುತ್ತಿದೆ. ಬೆಳಗಾವಿಯ (Belagavi) ಸಪ್ತನದಿಗಳ ಒಳಹರಿವು ಅಪಾಯದ ಮಟ್ಟ ಮೀರಿವೆ. ಬೆಳಗಾವಿ, ಬಾಗಲಕೋಟೆ, ಯಾದಗಿರಿಯ ಹಲವು ತಾಲೂಕುಗಳಲ್ಲಿ ನದಿಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಬೆಳಗಾವಿಯ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನಲ್ಲಿ ಅಲರ್ಟ್ ಘೋಷಿಸಲಾಗಿದೆ. ದೂದಗಂಗಾ ನದಿಯಿಂದಾಗಿ ನಿಪ್ಪಾಣಿ ತಾಲೂಕಿನಲ್ಲಿರುವ ಕಾರದಗಾ ಗ್ರಾಮಕ್ಕೆ ನೀರು ನುಗ್ಗಿದ್ದು, ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಈಗಾಗಲೇ ಜನ, ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.
ನಿಪ್ಪಾಣಿಯ ಹುನ್ನರಗಿ ಗ್ರಾಮದಿಂದಲೂ 20 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಅಥಣಿ ತಾಲೂಕಿನ ಹುಲಬಗಾಳ ಗ್ರಾಮವನ್ನು ಕೃಷ್ಣಾನದಿ ಸುತ್ತುವರಿದಿದ್ದು, ಗರ್ಭಿಣಿ ಸೇರಿ 40 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ.
ಘಟಪ್ರಭಾನದಿ ಅಬ್ಬರದಿಂದ ಹಿಡಕಲ್ ಜಲಾಶಯ ತುಂಬಿದ್ದು, 33 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ.
ಇನ್ನು ಮಲಪ್ರಭಾನದಿಯಿಂದಾಗಿ ನವಿಲು ತೀರ್ಥ ಜಲಾಶಯ ಭರ್ತಿಯಾಗಿದ್ದು, 12500 ಕ್ಯೂಸೆಕ್ ನೀರು ಬಿಡುಗಡೆ ಮಡಲಾಗುತ್ತಿದೆ. ಗೋಕಾಕ್‌ನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಗೂ ಘಟಪ್ರಭಾನದಿಯಿಂದ ಜಲದಿಗ್ಬಂಧನವಾಗಿದೆ. ಗರ್ಭಗುಡಿ ಮುಳುಗುವ ಆತಂಕ ಎದುರಾಗಿದ್ದು, ಪೂಜಾಸಾಮಾಗ್ರಿಗಳನ್ನು ಸ್ಥಳಾಂತರ ಮಾಡಲಾಗಿದೆ. ಪಂಚಗಂಗಾ ನದಿಯಿಂದ ಮಹಾರಾಷ್ಟ್ರದ ಕೊಲ್ಹಾಪುರದ ಸುಪ್ರಸಿದ್ಧ ದತ್ತ ಮಂದಿರ ಮುಳುಗಡೆಯಾಗಿದೆ.
ಘಟಪ್ರಭಾನದಿ ಅಪಾಯದ ಮಟ್ಟ ಮೀರಿದ್ದು, ಬಾಗಲಕೋಟೆಯ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಾಚಕನೂರು ಐತಿಹಾಸಿಕ ಹೊಳೆಬಸವೇಶ್ವರ ದೇಗುಲ ಜಲಾವೃತವಾಗಿದೆ. ನೂರಾರು ಎಕರೆ ಕಬ್ಬಿನ ಬೆಳೆಗೂ ಕಂಟಕ ಎದುರಾಗಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಮಾಚಕನೂರು ಘಟಪ್ರಭಾ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಕ್ಕೆ ನೀರುನುಗ್ಗಿದ್ದು, 30 ಕುಟುಂಬಗಳು ಅತಂತ್ರವಾಗಿವೆ. ಕಾಳಜಿ ಕೇಂದ್ರವೇ ಗತಿಯಾಗಿದೆ.
ರಬಕವಿಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮಪ್ರವಾಹಕ್ಕೆ ತುತ್ತಾಗಿದ್ದು, ಜನಕಂಗಲಾಗಿದ್ದಾರೆ. ಕಬ್ಬು ಸೇರಿ ಹಲವು ಬೆಳೆಗಳು ಜಲಾವೃತವಾಗಿವೆ. ಮಲಪ್ರಭಾನದಿ ನೀರು ನುಗ್ಗಿ ಬಾದಾಮಿ ತಾಲೂಕಿನ ಹಾಗನೂರು ಗ್ರಾಮಕ್ಕೆ ಸಂಕಷ್ಟ ತಲೆದೋರಿದೆ. ಸೂರ್ಯಕಾಂತಿ, ಕಬ್ಬು, ಈರುಳ್ಳಿ ಬೆಳೆಗಳು ಜಲಾವೃತವಾಗಿವೆ.
ಯಾದಗಿರಿ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರ ಜಲಾಶಯದಿಂದ 2.8ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆಮುಳುಗಿದೆ. ಸಂಚಾರ ಬಂದ್ ಆಗಿದ್ದು, ಇದರಿಂದ ರಾಯಚೂರು ಜಿಲ್ಲೆಯಿಂದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.
ಕೃಷ್ಣಾನದಿ ಭೋರ್ಗರೆತದಿಂದಾಗಿ ದಕ್ಷಿಣ ಎಂದೇ ಖ್ಯಾತಿಯಾಗಿರುವ ಹುಣಸಗಿ ತಾಲೂಕಿನ ಭಗವತಿ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಮೆಟ್ಟಿಲಮೇಲೆಯ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಹಾವೇರಿಯಲ್ಲಿ ವರದಾ ನದಿ ತುಂಬಿಹರಿಯುತ್ತಿದ್ದು, ದೇವಗಿರಿ ಈಶ್ವರ ದೇವಾಲಯ ಜಲಾವೃತವಾಗಿದೆ. ನೂರಾರು ಎಕರೆ ಕೃಷಿ ಭೂಮಿ ಮುಳುಗಿದೆ.
ಇದನ್ನೂ ಓದಿ: ಚೌತಿ ನಂತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ
ಇನ್ನೊಂದೆಡೆ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಕಲಘಟಗಿಯಲ್ಲಿ ಹೆಸರು ಬೆಳೆ ಕಟಾವಿಗೂ ಮೊದಲೇ ಮೊಳಕೆಯೊಡೆಯುತ್ತಿದೆ. ನವಲಗುಂದ ತಾಲೂಕಿನಲ್ಲಿ 7 ಸಾವಿರ ಹೆಕ್ಟೇರ್ ಮೆಣಸಿನ ಕಾಯಿ ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಬಳ್ಳಾರಿ ಜಿಲ್ಲೆಯಲ್ಲೂ ಹೆಕ್ಟೇರ್ಗಟ್ಟಲೆ ಪ್ರದೇಶದಲ್ಲಿರುವ ಮೆಣಸಿನಕಾಯಿ ಬೆಳೆಗೆ ಮಳೆ ಕಂಟಕ ಎದುರಾಗಿದೆ.
Published On - 7:48 am, Fri, 22 August 25