ವೀರಪ್ಪನ್ ಓಡಾಡಿದ್ದ ಜಾಗದಲ್ಲಿ ಸಫಾರಿಗೆ ಅರಣ್ಯ ಇಲಾಖೆ ಚಿಂತನೆ: ಶೀಘ್ರದಲ್ಲೇ ಶುರುವಾಗಲಿದೆ ಹೊಗೇನಕಲ್ ಸಫಾರಿ

|

Updated on: Jan 06, 2025 | 12:13 PM

ಕರ್ನಾಟಕ ಸರ್ಕಾರವು ವೀರಪ್ಪನ್‌ನ ಹಿಂದಿನ ಅಡಗುದಾಣ ಪ್ರದೇಶಗಳೂ ಒಳಗೊಂಡಂತೆ ಹೊಗೇನಕಲ್‌ನಲ್ಲಿ ಸಫಾರಿಯನ್ನು ಆರಂಭಿಸಲು ಯೋಜಿಸಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಪುಷ್ಟಿ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. 22 ಕಿಲೋಮೀಟರ್ ವ್ಯಾಪ್ತಿಯ ಈ ಸಫಾರಿಯು ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಒಳಗೊಳ್ಳಲಿದೆ ಮತ್ತು ವಿವಿಧ ವನ್ಯಜೀವಿಗಳನ್ನು ವೀಕ್ಷಿಸಲು ಅವಕಾಶ ನೀಡಲಿದೆ.

ವೀರಪ್ಪನ್ ಓಡಾಡಿದ್ದ ಜಾಗದಲ್ಲಿ ಸಫಾರಿಗೆ ಅರಣ್ಯ ಇಲಾಖೆ ಚಿಂತನೆ: ಶೀಘ್ರದಲ್ಲೇ ಶುರುವಾಗಲಿದೆ ಹೊಗೇನಕಲ್ ಸಫಾರಿ
ಸಫಾರಿ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜನವರಿ 6: ಕಾಡುಗಳ್ಳ ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾಗಿ ಎರಡು ದಶಕಗಳೇ ಸಂದಿವೆ. ಆದರೂ ಆತನ ಹೆಸರು ಇಂದಿಗೂ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. ವರನಟ ಡಾ. ರಾಜ್​ಕುಮಾರ್ ಅಪಹರಣದಿಂದ ಕರ್ನಾಟಕದಲ್ಲಿ ಮನೆಮಾತಾಗಿದ್ದ ವೀರಪ್ಪ ಓಡಾಡಿದ್ದ ಕಾಡಿನಲ್ಲಿ ಸಫಾರಿ ಆರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇದೀಗ ರಾಜ್ಯ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲೇ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಗೇನಕಲ್ ಜಲಪಾತದಿಂದ ಸಫಾರಿ ಆರಂಭಿಸಲು ಕರ್ನಾಟಕ ಅರಣ್ಯ ಇಲಾಖೆ ಉತ್ಸುಕವಾಗಿದೆ. ವೀರಪ್ಪನ್‌ನ ಹುಟ್ಟೂರಾದ ಗೋಪಿನಾಥನ್‌ನಿಂದ ಆರಂಭಿಸಿರುವ ಸಫಾರಿಗೆ ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿ ಕರ್ನಾಟಕ ಅರಣ್ಯ ಇಲಾಖೆ ಸಹ ಹೊಗೇನಕಲ್​​ನಲ್ಲಿ ಸಫಾರಿ ಆರಂಭಿಸಲು ಮುಂದಾಗಿದೆ ಎನ್ನಲಾಗಿದೆ.

ಉದ್ದೇಶಿತ ಸಫಾರಿಯು 22 ಕಿಲೋಮೀಟರ್ ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ವಿಶೇಷವಾಗಿ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ವೀರಪ್ಪನ್ ಅಡಗುತಾಣಗಳನ್ನು ಒಳಗೊಂಡಿರಲಿವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಈ ಪ್ರದೇಶವು ಆನೆಗಳು, ಜಿಂಕೆಗಳು, ಕರಡಿಗಳು ಮತ್ತು ಇತರ ವನ್ಯಜೀವಿಗಳ ಹೆಚ್ಚಿನ ಇರುವಿಕೆಯನ್ನು ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ.

ಹೊಗೇನಕಲ್​ನಿಂದಲೇ ಸಫಾರಿ ಯಾಕೆ?

ಕಾವೇರಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ಹೊಗೇನಕಲ್​ನಿಂದಲೇ ಸಫಾರಿಯನ್ನು ಪ್ರಾರಂಭಿಸಲು ಬಯಸಿದ್ದಾರೆ. ಯಾಕೆಂದರೆ ಇದು ಗಡಿಯ ಎರಡೂ ಬದಿಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವಿಶೇಷವಾಗಿ ಕಾವೇರಿ ನದಿಯಲ್ಲಿ ದೋಣಿ ವಿಹಾರ ಮತ್ತು ಮೀನಿನ ಸಾಂಪ್ರದಾಯಿಕ ಭಕ್ಷ್ಯಗಳಿಂದ ಪ್ರಸಿದ್ಧವಾಗಿದೆ. ಹೀಗಾಗಿ ಈ ಭಾಗದಲ್ಲಿ ಆರಂಭಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ನಾಲ್ಕು ಟ್ರಿಪ್ ಹೊಗೇನಕಲ್ ಸಫಾರಿಗೆ ಚಿಂತನೆ

ಅರಣ್ಯ ಇಲಾಖೆಯು ಬೆಳಿಗ್ಗೆ ಎರಡು ಮತ್ತು ಸಂಜೆ ಎರಡರಂತೆ ನಾಲ್ಕು ಟ್ರಿಪ್‌ಗಳ ಸಫಾರಿಗೆ ಚಿಂತನೆ ನಡೆಸಿದೆ. 25 ಮಂದಿಯನ್ನು ಸಾಗಿಸುವ ಸಾಮರ್ಥ್ಯವುಳ್ಳ 2 ವಾಹನಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ದಟ್ಟಾರಣ್ಯದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ಯಬಲ್ಲ ಹೊಸ ಸಫಾರಿ ವಾಹನಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಆರ್ಡರ್ ಮಾಡಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಚಾಮರಾಜನಗರ: ಬಿಆರ್​ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ 2 ಹೊಸ ಸಫಾರಿ ಕೇಂದ್ರ ತೆರೆಯಲು ಚಿಂತನೆ

ಹೊಗೇನಕಲ್ ಜಲಪಾತಕ್ಕೆ 2024 ರ ಜನವರಿಯಲ್ಲಿ 3500 ಪ್ರವಾಸಿಗರು ಭೇಟಿ ನೀಡಿದ್ದರೆ, ಮಾರ್ಚ್‌ನಲ್ಲಿ 9,381 ಪ್ರವಾಸಿಗರು ಭೇಟಿ ನೀಡಿದ್ದರು. ಸುಮಾರು 1,400 ವಿದೇಶಿ ಪ್ರವಾಸಿಗರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಜಾಗದಲ್ಲಿ ಸಫಾರಿಯನ್ನೂ ಆರಂಭಿಸುವುದರಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ