ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಡಿಸೆಂಬರ್‌ವರೆಗೂ ನಡೆಸುವುದು ಬೇಡ ಎಂದು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವುದು, ಮೊಬೈಲ್ ಆಪ್ ಮೂಲಕ ಬೆಳೆ ಸರ್ವೆ, ಇನ್ವೆಸ್ಟ್ ಕರ್ನಾಟದ ಆಯೋಜನೆ, ರಾಜ್ಯದಲ್ಲಿ ಆಮ್ಲಜನಕದ ತಯಾರಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಯೋಜನೆಗಳಿಗೆ ಅನುಮತಿ ನೀಡಲಾಯಿತು.
ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಡಿಸೆಂಬರ್‌ವರೆಗೂ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಸಂಪುಟ ಬಂದಿದೆ. ಆದರೆ ಸಹಕಾರ ಇಲಾಖೆಯಿಂದ ಪ್ರಸ್ತಾಪಿತವಾದ ಸಹಕಾರ ಸಂಘ ಹಾಗೂ ಬ್ಯಾಂಕ್ ಚುನಾವಣೆಗೆ ಗ್ರೀನ್‌ಸಿಗ್ನಲ್ ನೀಡಲಾಗಿದೆ. ಅಲ್ಲಿನ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ಚುನಾವಣೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯಲು ಮೊದಲ ಹಂತದಲ್ಲಿ 15ಕೋಟಿ ರು., ಮೊಬೈಲ್ ಆಪ್ ಮೂಲಕ ಬೆಳೆ ಸರ್ವೆ ನಡೆಸಲು 48 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಭೆಯಲ್ಲಿ ಅನುಮೋದನೆ ದೊರಕಿದೆ. ಇನ್ವೆಸ್ಟ್ ಕರ್ನಾಟಕ-2022ನ್ನು ಫೆಬ್ರವರಿ 9, 10 ಮತ್ತು 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಸಭೆ ತೀರ್ಮಾನಿಸಿದೆ. ಹಾಗೆಯೇ ರಾಜ್ಯದಲ್ಲಿ ಆಮ್ಲಜನಕ ತಯಾರಿಕೆಯನ್ನು ಹೆಚ್ಚಿಸಲು ಮತ್ತು ಅದನ್ನು ಸಂಗ್ರಹಿಸಲು ಇನ್ಸೆಂಟಿವ್ ಸ್ಕೀಮ್ಗೆ ಸಭೆ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅನುಮೋದನೆ ನೀಡಲಾಗಿದ್ದು, ವಚನ ಬರೆಯುತ್ತಿರುವ ಮಾದರಿಯ ಪ್ರತಿಮೆಗೆ ಸಭೆಯಲ್ಲಿ ಒಲವು ವ್ಯಕ್ತವಾಗಿದೆ. ಇನ್ನು ಮುಂದೆ ಯಾವುದೇ ಸುಗ್ರೀವಾಜ್ಞೆ ತರುವ ಬದಲು ಸದನದಲ್ಲಿ ಮಸೂದೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಗೆಯೇ 139 ಸನ್ನಡತೆ ಆಧಾರದ ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಯಿತು.
ನೈಟ್ ಕರ್ಫ್ಯೂ ತೆರವು ಮತ್ತು ಅನ್ ಲಾಕ್ ೪.೦ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಭೆ ಮುಗಿಸಿ ಹೊರ ಬಂದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಐದು ವರ್ಷಗಳಲ್ಲಿ 10 ಮಿಲಿಯನ್ ಉದ್ಯೋಗ ಸೃಷ್ಟಿ ಮಾಡುತ್ತೇವೆ; ಬಿ.ಎಸ್.ಯಡಿಯೂರಪ್ಪ
(Karnataka Government Cabinet Meeting held and decides several important decisions)