ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ವಿಶೇಷ ಕಾರ್ಯಪಡೆಗೆ (ಎಸ್ಐಟಿ) ವಹಿಸಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಎಲ್ಲಿ ತಯಾರಾಗಿದೆ, ವೆಬ್ಸೈಟ್ಗಳಿಗೆ ಎಲ್ಲಿಂದ ಅಪ್ಲೋಡ್ ಆಯಿತು ಎಂಬ ಬಗ್ಗೆ ಈ ತನಿಖೆ ಬೆಳಕು ಚೆಲ್ಲಲಿದೆ. ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
‘ಸಚಿವ ರಮೇಶ್ ಜಾರಕಿಹೊಳಿ ಅವರ ವಿನಂತಿ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ಐಟಿ ರಚನೆಗೆ ಸೂಚಿಸಿರುವ ಟಿಪ್ಪಣಿಯಲ್ಲಿ ಹೇಳಿದ್ದಾರೆ.
‘ಮಾರ್ಚ್ 9ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನಗೆ ಪತ್ರಬರೆದಿದ್ದರು. ಅವರ ವಿರುದ್ಧ ಮಾರ್ಚ್ 2ರಂದು ಕಬ್ಬನ್ಪಾರ್ಕ್ ಠಾಣೆಯಲ್ಲಿ ನೀಡಿರುವ ಅರ್ಜಿಯಲ್ಲಿ ಅವರ ರಾಜಕೀಯ ತೇಜೋವಧೆ ಹಾಗೂ ಮಾಡುವ ಉದ್ದೇಶವಿದೆ ಎಂದು ಹೇಳಿದ್ದರು. ಇದರಲ್ಲಿ ಹಲವಾರು ಜನರ ಷಡ್ಯಂತ್ರವಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಲು ಒಂದು ವಿಶೇಷ ತಂಡ ರಚಿಸಲು ಹಾಗೂ ಅದರ ನೇತೃತ್ವವನ್ನು ಎಡಿಜಿಪಿ ಸೌಮೇಂದು ಮುಖರ್ಜಿ ಅವರಿಗೆ ವಹಿಸಲು ಸೂಚಿಸಲಾಗಿದೆ’ ಎಂದು ಬಸವರಾಜ ಬೊಮ್ಮಾಯಿ ಬೆಂಗಳೂರು ಪೊಲೀಸ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯೊಬ್ಬರ ಜೊತೆಗೆ ಇರುವ ಸಿಡಿಯೊಂದನ್ನು ಆಧರಿಸಿ, ಮಹಿಳೆಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಕ್ಷೇಪಾರ್ಹ ದೃಶ್ಯಗಳಿದ್ದ ಈ ಸಿಡಿ ರಾಜ್ಯ ರಾಜಕಾರಣದದಲ್ಲಿ ಸಂಚಲನ ಮೂಡಿಸಿತ್ತು. ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರದ ದಿನಗಳಲ್ಲಿ ದಿನೇಶ್ ಕಲ್ಲಹಳ್ಳಿ ತಮ್ಮ ದೂರು ಹಿಂಪಡೆದಿದ್ದರು. ಇದರ ಬೆನ್ನಿಗೇ ಪತ್ರಿಕಾಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ಸೋದರ ಬಾಲಚಂದ್ರ ಜಾರಕಿಹೊಳಿ ಇದು ನಕಲಿ ಸಿಡಿ ಎಂದು ದೂರಿದ್ದರು. ನಿನ್ನೆ (ಮಾರ್ಚ್ 9) ಪತ್ರಿಕಾಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ಈ ಷಡ್ಯಂತ್ರದ ಹಿಂದೆ ಇರುವವರನ್ನು ಜೈಲಿಗೆ ಹಾಕಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ: ದೆಹಲಿ ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ: ಮಾನನಷ್ಟ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಚಿಂತನೆ
ಇದನ್ನೂ ಓದಿ: ಮಹಾನಾಯಕನೊಬ್ಬ 3 ತಿಂಗಳ ಹಿಂದೆ ಚಾಲೆಂಜ್ ಹಾಕಿದ್ದರ ಪರಿಣಾಮ ಇದು; ಆತನನ್ನು ಈಗ ಜೈಲಿಗೆ ಹಾಕಿಸುವೆ -ರಮೇಶ್ ಜಾರಕಿಹೊಳಿ
Published On - 9:00 pm, Wed, 10 March 21