ಬೆಂಗಳೂರು: ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಸುಮಾರು ಒಂದೂಕಾಲು ಲಕ್ಷಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಇತರೆ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ಇನ್ನೂ ವಿತರಣೆಯಾಗಿಲ್ಲ. ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ತೊಡಗುವುದು ಬಹುತೇಕ ಖಚಿತ ಎಂಬುದರ ಮುನ್ಸೂಚನೆ ಪಡೆದ ಸಾರಿಗೆ ನಿಗಮಗಳು ನೌಕರರ ಸಂಬಳ ವಿತರಣೆಗೆ ತಡೆ ನೀಡಲು ತಿಳಿಸಿವೆ ಎಂದು ನೌಕರರು ಮತ್ತಷ್ಟು ಆತಂಕದ ಮಡುವಿಗೆ ಬಿದ್ದಿದ್ದಾರೆ.
ಸಾರಿಗೆ ಸಿಬ್ಬಂದಿಯ ಮುಷ್ಕರವನ್ನು ಬ್ರೇಕ್ ಹಾಕುವ ನಿಟ್ಟಿನಲ್ಲಿ ಹೇಗಾದರೂ ಮಾಡಿ ಅವರನ್ನು ಮಣಿಸಬೇಕು ಎಂಬಂತಹ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಂತೆ ಕಾಣುತ್ತಿದೆ. ಅಷ್ಟೂ ನೌಕರರಿಗೆ ಸಂಬಳ ತಡೆಹಿಡಿದರೆ ಜೀವನೋಪಾಯವಾದ ಸಂಬಳಕ್ಕೆ ಕತ್ತರಿಬಿದ್ದು, ಜೀವನ ಮತ್ತಷ್ಟು ದುಸ್ತರಗೊಳ್ಳಲಿದೆ. ಆಗ ನೌಕರರು ಮುಷ್ಕರ ನಿಲ್ಲಿಸಲಿದ್ದಾರೆ ಎಂಬುದು ಸರ್ಕಾರದ ಮುಂದಾಲೋಚನೆಯಾಗಿದೆ ಎಂದು ಕೆಎಸ್ಆರ್ಟಿಸಿ ಚಾಲಕರು ಬೆಂಗಳೂರಿನ ಮೆಜಿಸ್ಟಿಕ್ನಲ್ಲಿ ಟಿವಿ9 ಡಿಜಿಟಲ್ ಜೊತೆ ಮಾತನಾಡುತ್ತಾ ತಮ್ಮ ಆತಂಕ ಹೊರಹಾಕಿದ್ದಾರೆ.
ಈ ಆತಂಕಕ್ಕೆ ಪುಷ್ಠಿ ನೀಡುವಂತೆ ಮುಷ್ಕರಕ್ಕೆ ಮುಂದಾದ ನೌಕರರಿಗೆ ಸರ್ಕಾರ ಬಿಗ್ ಶಾಕ್ ನೀಡಲು ನಿರ್ಧರಿಸಿದ್ದು ಹೌದು ಎಂದೇ ಹೇಳಲಾಗುತ್ತಿದ್ದು. ಮಾರ್ಚ್ ತಿಂಗಳ ವೇತನ ತಡೆಯಲು ನಿರ್ಧರಿಸಿರುವುದು ಬಹುತೇಕ ಖಚಿತವಾಗಿದೆ. ಸಾರಿಗೆ ನಿಗಮಗಳಿಗೆ ಸರ್ಕಾರ ಮನವಿ ಮಾಡಿದರೂ ನೌಕರರು ಮುಷ್ಕರದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಮಾರ್ಚ್ ತಿಂಗಳ ಸಂಬಳ ತಡೆಹಿಡಿಯಲು ಸಾರಿಗೆ ನಿಗಮಗಳು ಮುಂದಾಗಿದೆ. ಯಾವಾಗಲೂ 10ನೇ ತಾರೀಖಿನ ಒಳಗೆ ವೇತನ ನೀಡುತ್ತಿದ್ದ ನಿಗಮಗಳು ಈ ಬಾರಿ ಮುಷ್ಕರ ಕೈ ಬಿಡುವವರೆಗೆ ಸಂಬಳ ಇಲ್ಲ ಎಂದು ನಿರ್ಧರಿಸಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಾರಿಗೆ ಸಿಬ್ಬಂದಿ ಮುಷ್ಕರ: ಎಲ್ಲಿದ್ದಾರೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ?