ಸಾರಿಗೆ ಸಿಬ್ಬಂದಿ ಮುಷ್ಕರ: ಎಲ್ಲಿದ್ದಾರೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ?

ಯಾರದೋ ಮಾತು ಕೇಳಿಕೊಂಡು ಹಟಮಾರಿತನದಿಂದ ಮುಷ್ಕರ ಮಾಡಿ ನೀವೇ ಕಷ್ಟ ಅನುಭವಿಸುವುದು ಸರಿಯಲ್ಲ. ಮುಷ್ಕರ ಮುಂದುವರೆದರೆ ಆದಾಯ ಕಡಿಮೆಯಾಗಿ ಮುಂದೆ ಸಂಬಳ ನೀಡುವುದು ಕಷ್ಟವಾಗುತ್ತದೆ. ನಾವು ದುಡಿಯದೇ ಇದ್ದರೆ, ಆದಾಯ ತರದೇ ಹೋದರೆ ಕಷ್ಟವಿದೆ.

  • TV9 Web Team
  • Published On - 10:34 AM, 7 Apr 2021
ಸಾರಿಗೆ ಸಿಬ್ಬಂದಿ ಮುಷ್ಕರ: ಎಲ್ಲಿದ್ದಾರೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ?
ಲಕ್ಷ್ಮಣ ಸವದಿ ಮತ್ತು ಬಿ.ಎಸ್​.ಯಡಿಯೂರಪ್ಪ

ಬೀದರ್: ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ನಡೆಯುತ್ತಿದ್ದು ಸರ್ಕಾರಿ ಬಸ್​ ಸೇವೆಯಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಿದೆ. ಮುಷ್ಕರ ಗಂಭೀರವಾಗುತ್ತಿರುವ ಹೊತ್ತಿನಲ್ಲೇ ಈ ಬಗ್ಗೆ ಬೀದರ್​ ಜಿಲ್ಲೆಯ ಹುಮ್ನಾಬಾದ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಮಗೆ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡುವುದಿಲ್ಲ ಎಂಬ ಆಶಾಭಾವನೆಯಿತ್ತು. ಸಾರಿಗೆ ನೌಕರರ ವೇತನ ಹೆಚ್ಚಿಸಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ಇದಕ್ಕೆ ಕೇಂದ್ರ ಚುನಾವಣಾ ಆಯೋಗಕ್ಕೂ ಒಪ್ಪಿಗೆ ಕೇಳಿದ್ದೇವೆ. ಆದೇಶ ಬಂದ ತಕ್ಷಣ ವೇತನ ಹೆಚ್ಚಿಸುವುದಾಗಿ ಹೇಳಿದ್ದೇವೆ. ಆದರೂ ಸಾರಿಗೆ ನೌಕರರು ಮುಷ್ಕರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೆಲವರು ಮುಷ್ಕರ ಮಾಡಿಸಲೇಬೇಕೆಂದು ಮಾಡಿಸುತ್ತಿದ್ದಾರೆ. ಅವರು ಯಾರು ಎಂಬುದು ನಿಮಗೂ ಗೊತ್ತಾಗಲಿದೆ. ಆದರೆ, ಯಾರದೋ ಮಾತು ಕೇಳಿ ಮುಷ್ಕರ ಮಾಡಿದ್ರೆ ಕಷ್ಟವಾಗುತ್ತೆ. ಇದರಿಂದ ಸಾರಿಗೆ ನೌಕರರೇ ಕಷ್ಟ ಅನುಭವಸುವಂತಾಗುತ್ತದೆ. ಮುಷ್ಕರ ಮುಂದುವರಿಸಿದರೆ ಇಲಾಖೆಗೆ ಆದಾಯ ಬರಲ್ಲ. ಇದರಿಂದ ಸಾರಿಗೆ ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಾಗುತ್ತದೆ. ವೇತನ ಹೆಚ್ಚಿಸಲು ನಾವು ಸಿದ್ಧ, ಅವರು ಕೆಲಸಕ್ಕೆ ಹಾಜರಾಗಲಿ. ಇಂದೇ ಮುಷ್ಕರ ಮುಗಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಬೇಕು. ಇಲ್ಲದೇ ಹೋದರೆ ಕೆಲಸಕ್ಕೆ ಗೈರಾದವರಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್‌ಗೆ ಅವಕಾಶ ಮಾಡಿಕೊಡಲಾಗಿದೆ. ನಮ್ಮ ಬಸ್ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ಬದಲಾಗದೇ ಇದ್ದರೆ ಇನ್ನೆರಡು ದಿನದಲ್ಲಿ ಖಾಸಗಿ ಬಸ್ ಸಂಚಾರ ಹೆಚ್ಚಿಸುತ್ತೇವೆ. ಕೆಲವು ಖಾಸಗಿ ಬಸ್​ಗಳಿಗೆ ಪರ್ಮಿಟ್ ಇಲ್ಲದಿದ್ದರೂ, ಇನ್ಸೂರೆನ್ಸ್​ ಇರುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಯಾರದೋ ಮಾತು ಕೇಳಿಕೊಂಡು ಹಟಮಾರಿತನದಿಂದ ಮುಷ್ಕರ ಮಾಡಿ ನೀವೇ ಕಷ್ಟ ಅನುಭವಿಸುವುದು ಸರಿಯಲ್ಲ. ಮುಷ್ಕರ ಮುಂದುವರೆದರೆ ಆದಾಯ ಕಡಿಮೆಯಾಗಿ ಮುಂದೆ ಸಂಬಳ ನೀಡುವುದು ಕಷ್ಟವಾಗುತ್ತದೆ. ನಾವು ದುಡಿಯದೇ ಇದ್ದರೆ, ಆದಾಯ ತರದೇ ಹೋದರೆ ಕಷ್ಟವಿದೆ. ಹೀಗಾಗಿ ಇವತ್ತೇ ಮುಷ್ಕರ ಕೊನೆಗೊಳಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡುತ್ತೇನೆಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಬಿ.ಎಸ್​.ಯಡಿಯೂರಪ್ಪ
ಇನ್ನೊಂದೆಡೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬೆಳಗಾವಿಯಲ್ಲಿ ಉಪಚುನಾವಣೆ ಹಿನ್ನೆಲೆ ನಿನ್ನೆ ತಡರಾತ್ರಿ ತನಕವೂ ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಉಮೇಶ್ ಕತ್ತಿ, ಮಾಜಿ ಸಂಸದ ರಮೇಶ್ ಕತ್ತಿ, ಶಾಸಕರಾದ ಅನಿಲ್.ಬಿ, ಅಭಯ್ ಪಾಟೀಲ್ ಮುಂತಾದವರೊಂದಿಗೆ ಸಭೆ ನಡೆಸಿದ್ದಾರೆ.

ಉಪಚುನಾವಣೆ ಮೇಲೆ ಮುಷ್ಕರ ಪರಿಣಾಮ ಬೀರಲ್ಲ: ಬಿ.ವೈ.ವಿಜಯೇಂದ್ರ
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಉಪಚುನಾವಣೆ ಉಸ್ತುವಾರಿ ವಹಿಸಿರುವ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ನವರು ಇದನ್ನೇ ಮುಂದಿಟ್ಟು ಟೀಕೆ ಮಾಡ್ತಿದ್ದಾರೆ. ಆದರೆ, ಇದರಿಂದ ಬಿಜೆಪಿಗೆ ಏನೂ ಆಗುವುದಿಲ್ಲ. ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಆದ್ದರಿಂದ ಸಾರಿಗೆ ನೌಕರರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಷ್ಕರ ಹಿಂಪಡೆಯಬೇಕು ಎಂದು ರಾಯಚೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:
Karnataka Transport Workers Strike LIVE: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ.. KSRTC, BMTC ಸಿಗಲ್ಲ, ಖಾಸಗಿ ಸೇವೆ ಲಭ್ಯ 

KSRTC BMTC Strike: ಸಾರಿಗೆ ನೌಕರರ ನೋವು, ವೇದನೆ ಬಹಳ ದಿನಗಳಿಂದ ಮಡುಗಟ್ಟಿದೆ ; ಕೋಡಿಹಳ್ಳಿ ಚಂದ್ರಶೇಖರ್​

(Where is Laxman Savadi BS Yediyurappa BY Vijayendra amid of KSRTC BMTC Strike)