Text Book Controversy: ಬರಗೂರರ ‘ಇತಿಹಾಸ’ವನ್ನು ಸರಿಯಾಗಿ ತಿದ್ದಿದ ಶಿಕ್ಷಣ ಇಲಾಖೆ

|

Updated on: Feb 20, 2021 | 6:17 PM

Bargur Ramachandrappa | S Suresh Kumar: ಆರನೇ ತರಗತಿ ಸಮಾಜ ವಿಜ್ಞಾನ ವಿಷಯದ ‘ಹೊಸ ಧರ್ಮಗಳ ಉದಯ’ (ಪುಟ 82) ಪಾಠವು ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡುವ ಅಂಶಗಳನ್ನು ಒಳಗೊಂಡಿದೆ. ಒಂದು ಸಮುದಾಯವನ್ನೇ ಅವಹೇಳನ ಮಾಡುವ ವಿಷಯವನ್ನು ಪಾಠದಲ್ಲಿ ಸೇರಿಸಿರುವುದು ಎಷ್ಟು ಸಮಂಜಸ? ಎಂದು ಪ್ರಶ್ನೆಯೆದ್ದಿತ್ತು.

Text Book Controversy: ಬರಗೂರರ ಇತಿಹಾಸವನ್ನು ಸರಿಯಾಗಿ ತಿದ್ದಿದ ಶಿಕ್ಷಣ ಇಲಾಖೆ
ಬರಗೂರು ರಾಮಚಂದ್ರಪ್ಪ
Follow us on

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯೊಂದು ವಿವಾದಕ್ಕೆ ಕಾರಣವಾಗಿದೆ. ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ಹೊಸ ಧರ್ಮಗಳ ಉದಯ’ ಎಂಬ ಪಾಠದಿಂದ ಕೆಲ ಅಂಶಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅದರ ಬೆನ್ನಲ್ಲೇ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ವಿವಾದ ಇದೇ ಹೊಸತೇನಲ್ಲ. ಕಳೆದ ಕೆಲ ವರ್ಷಗಳಿಂದಲೂ ಮಕ್ಕಳಿಗೆ ಯಾವ ಪಾಠ ನೀಡಬೇಕು? ಯಾವುದು ಅವಶ್ಯಕ? ಎಂದು ನಿರ್ಧರಿಸುವುದು ರಾಜಕೀಯದ ಒಂದು ಭಾಗವೇ ಆಗಿ ಹೋದಂತಾಗಿದೆ. ಅದರಂತೆಯೇ ಹಿಂದಿನ ಸರ್ಕಾರ ಇದ್ದಾಗ ಪಠ್ಯಕ್ಕೆ ಸೇರಿಸಲಾಗಿದ್ದ ಪಾಠದಿಂದ ಕೆಲ ಅಂಶಗಳನ್ನು ಕೈಬಿಟ್ಟಿರುವುದಕ್ಕೆ ಈಗಿರುವ ಸರ್ಕಾರದ ವಿರುದ್ಧ ಬೇಸರ ವ್ಯಕ್ತವಾಗಿದೆಯಷ್ಟೇ. ಆದರೆ, ಈ ತಿಕ್ಕಾಟದ ಹೊರತಾಗಿ ಕೆಲ ಪ್ರಶ್ನೆಗಳು ಉದ್ಭವಿಸಿದೆ.

ವಿವಾದದ ಹಿನ್ನೆಲೆ ಏನು?
ಆರನೇ ತರಗತಿ ಸಮಾಜ ವಿಜ್ಞಾನ ವಿಷಯದ ಏಳನೇ ಅಧ್ಯಾಯವಾದ ‘ಹೊಸ ಧರ್ಮಗಳ ಉದಯ’ (ಪುಟ 82) ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡುವ ಅಂಶಗಳನ್ನು ಒಳಗೊಂಡಿದೆ. ಒಂದು ಸಮುದಾಯವನ್ನೇ ಅವಹೇಳನ ಮಾಡುವ ವಿಷಯವನ್ನು ಮಕ್ಕಳ ಪಾಠದಲ್ಲಿ ಸೇರಿಸಿರುವುದು ಎಷ್ಟು ಸಮಂಜಸ? ಎಂದು ಪ್ರಶ್ನೆಯೆದ್ದಿತ್ತು. ಸ್ವತಃ ಎಸ್​.ಸುರೇಶ್ ಕುಮಾರ್​ ಅವರೇ ಹೇಳಿಕೊಂಡಿರುವಂತೆ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಹ ಸಚಿವರಿಗೆ ಕರೆ ಮಾಡಿ ಖೇದ ವ್ಯಕ್ತಪಡಿಸಿದ್ದರು. ಇದಾದ ನಂತರ ಶಿಕ್ಷಣ ಸಚಿವರು ವಿವಾದಿತ ಅಂಶಗಳತ್ತ ಗಮನಹರಿಸಿ ನಿರ್ದಿಷ್ಟ ಅಂಶಗಳನ್ನು ಕೈ ಬಿಡುವಂತೆ ಸೂಚಿಸಿದ್ದಾರೆ. ಆದರೆ, ಕೆಲ ಮಾಧ್ಯಮಗಳ ವರದಿಯಲ್ಲಿ ಇಡೀ ಪಾಠವನ್ನೇ ಕೈಬಿಡಲಾಗುತ್ತಿದೆ ಎಂಬರ್ಥದಲ್ಲಿ ವರದಿಯಾಗಿದೆ. ಜೊತೆಗೆ, ಬರಗೂರು ರಾಮಚಂದ್ರಪ್ಪ ಸಹ ಸರ್ಕಾರ ಏಕಪಕ್ಷೀಯವಾಗಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ಬಗ್ಗೆ ವಿಷಯ ತಜ್ಞರ ಜೊತೆ ಚರ್ಚಿಸಬೇಕಿತ್ತು. ಹೀಗೆ ಬ್ರಾಹ್ಮಣರ ವಿರುದ್ಧದ ಅವಹೇಳನಕಾರಿ ಅಂಶಗಳನ್ನು ತೆಗೆಯುವ ನೆಪದಲ್ಲಿ ಬೌದ್ಧ ಧರ್ಮ ಮತ್ತು ಬುದ್ಧ ಗುರುವಿನ ವಿಷಯವನ್ನು ತೆಗೆದಿರುವುದು ಸರಿಯಲ್ಲ. ಈ ವಿಷಯವನ್ನು ಬೋಧಿಸಬಾರದು ಎಂಬ ತೀರ್ಮಾನ ಬೌದ್ಧ ಧರ್ಮೀಯರಿಗೆ ನೋವುಂಟು ಮಾಡುವುದಿಲ್ಲವೇ? ಬುದ್ಧ ಗುರುವಿಗೆ ಅವಮಾನ ಮಾಡಿದಂತಾಗಲಿಲ್ಲವೇ? ಎಂದು ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ಇದ್ದಿದ್ದೇನು?
‘ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆಯು ಕುಂಠಿತವಾಯಿತು. ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ಹವಿಸ್ಸು ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು. ಇನ್ನೊಂದು ಕಡೆ ವೈದಿಕ ಆಚರಣೆಗಳಾದ ಯಾಗ, ಯಜ್ಞ, ಮೊದಲಾದ ಆಚರಣೆಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಈ ದುಬಾರಿ ಆಚರಣೆಗಳು ಜನ ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಈ ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು. ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಅದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಜನ ಸಾಮಾನ್ಯರ ಭಾಷೆಯಲ್ಲಿಯೇ ಸರಳಮಾರ್ಗಗಳ ಮೂಲಕ ಮುಕ್ತಿ ತೋರುವ ಹೊಸ ಧರ್ಮಗಳನ್ನು ಜನರು ಅಪೇಕ್ಷಿಸುತ್ತಿದ್ದರು. ಮತ್ತೊಂದು ಕಡೆ ಉತ್ತರ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಎಡೆಮಾಡಿತು. ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗವು ಹಲವು ಸವಲತ್ತುಗಳನ್ನು ಹೊಂದಿತ್ತು. ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು. ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು.

ಇವೆಲ್ಲವುಗಳ ಪರಿಣಾಮವಾಗಿ 2600 ವರ್ಷಗಳ ಹಿಂದೆ ಗಂಗಾ ಬಯಲಿನಲ್ಲಿ ಸುಮಾರು 62 ಹೊಸ ಧರ್ಮಗಳು ಉದಯಿಸಿದವು. ಅವುಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು. ಬೌದ್ಧ ಧರ್ಮ ಸ್ಥಾಪಕ ಗೌತಮ ಬುದ್ಧ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಂಕರ ವರ್ಧಮಾನ ಮಹಾವೀರ. ಈ ಇಬ್ಬರೂ ಕೂಡ ಗಣರಾಜ್ಯಗಳ ಕುಲಗಳಿಗೆ ಸೇರಿದ ಕ್ಷತ್ರಿಯರು.’

ಎಸ್​.ಸುರೇಶ್​ ಕುಮಾರ್​

ಸಚಿವ ಸುರೇಶ್ ಕುಮಾರ್ ನಿಲುವೇನು?
ಇದಾದ ನಂತರ ಸಚಿವ ಸುರೇಶ್ ಕುಮಾರ್ ತಮ್ಮ ಅಧಿಕೃತ ಫೇಸ್​ಬುಕ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದು, ಇಲಾಖೆಯ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಯಾವ ಕಾರಣಕ್ಕೂ ‘ಹೊಸ ಧರ್ಮಗಳ ಉದಯ’ ಪಾಠವನ್ನು ಕೈ ಬಿಡುವಂತೆಯಾಗಲೀ, ಬೌದ್ಧ ಧರ್ಮ, ಜೈನ ಧರ್ಮಕ್ಕೆ ಸಂಬಂಧಿಸಿದ ವಿಷಯಕ್ಕೆ ಕೊಕ್​ ನೀಡುವಂತೆಯಾಗಲೀ ಹೇಳಿಲ್ಲ ಎಂದು ತಿಳಿಸಿದ್ದಾರೆ. ಆರನೆಯ ತರಗತಿಯ ಮಕ್ಕಳಿಗೆ ಪಾಠ ನೀಡುವಾಗ ಅವರ ವಯಸ್ಸಿಗೆ ತಕ್ಕದಾಗಿ ಏನು ನೀಡಬೇಕು? ನೀಡಬಾರದು? ಎಂದು ಯೋಚಿಸಬೇಕು. ಹತ್ತು, ಹನ್ನೊಂದು ವಯಸ್ಸಿನ ಮಕ್ಕಳಿಗೆ ಯಾವುದೇ ಧರ್ಮ, ಸಮುದಾಯ, ಜನಾಂಗಗಳ ಬಗ್ಗೆ ದ್ವೇಷ ಮೂಡಿಸುವ ವಿಚಾರ ಇರಬಾರದು. ಆದರೆ, ಜೈನ, ಬೌದ್ಧ ಧರ್ಮಗಳಿಗೆ ಸಂಬಂಧಿಸಿದ ಈ ಪಾಠದಲ್ಲಿ ಅದಕ್ಕೆ ಸಂಬಂಧವೇ ಇರದ ಕೆಲ ವಿಚಾರಗಳನ್ನು ತಂದು ತೂರಿಸಲಾಗಿದೆ. ಅನಾವಶ್ಯಕವಾಗಿ ಬೇರೆ ವಿಷಯಗಳನ್ನು ಎಳೆದು ತರಲಾಗಿದೆ ಹೀಗಾಗಿ ನಾವು ಆ ನಿರ್ದಿಷ್ಟ ವಿಷಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ತಿಳಿಸಿದ್ದೇವೆ ಎಂದಿದ್ದಾರೆ. ಈ ರೀತಿ ಜಾತಿ, ಧರ್ಮ, ಜನಾಂಗದ ಬಗ್ಗೆ ದ್ವೇಷ, ಅಸಮಾಧಾನ ಹುಟ್ಟಿಸುವ ವಿಷಯಗಳನ್ನು ಆರನೇ ತರಗತಿ ಮಕ್ಕಳಿಗೆ ಬೋಧಿಸುವ ಅವಶ್ಯಕತೆ ಏನಿದೆ? ಬೇಕಿದ್ದರೆ ಇದು ಉನ್ನತ ತರಗತಿಗಳಲ್ಲಿ ಚರ್ಚೆಯಾಗಲಿ. ಈ ರೀತಿಯ ವಿಷಯಗಳನ್ನು ಚಿಕ್ಕ ಮಕ್ಕಳ ತಲೆಗೆ ತುಂಬುವುದು ಸರಿಯಲ್ಲ ಎಂದು ಶಿಕ್ಷಣ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಿಂದೆಲ್ಲಿಗೆ ಸಂಬಂಧ?
ಈ ಪಠ್ಯಭಾಗವನ್ನು ಗಮನಿಸಿದಾಗ, ಜೈನ ಮತ್ತು ಬೌದ್ಧ ಧರ್ಮಗಳ ಉಗಮಕ್ಕೆ ನೀಡಲಾಗಿರುವ ಕಾರಣ ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಮೂಲಭೂತವಾಗಿ ಕಾಡುತ್ತದೆ. ಪಾಶ್ಚಾತ್ಯ ಮೂಲದ ಅಬ್ರಾಹ್ಮಿಕ್ ಧರ್ಮಗಳು ಎಂದು ಕರೆಯಲ್ಪಡುವ ಇಸ್ಲಾಂ, ಕ್ರೈಸ್ತ ಧರ್ಮಗಳ ಹುಟ್ಟಿನ ಕಾರಣಗಳನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ಮತ್ತು ಈ ಧರ್ಮಗಳ ಹುಟ್ಟಿನ ಕಾರಣಗಳಿಗೆ ಹಲವಾರು ಸಾಕ್ಷಾಧಾರಗಳು ಸಿಗುತ್ತವೆ.  ಆದರೆ, ಅಬ್ರಾಹ್ಮಿಕ್ ಧರ್ಮಗಳು ಎಂದು ಕರೆಯಲ್ಪಡುವ ಇಸ್ಲಾಂ, ಕ್ರೈಸ್ತ ಧರ್ಮಗಳಂತೆ ಅಲ್ಲ, ನಮ್ಮ ನಾಡಿನಲ್ಲಿ ಹುಟ್ಟಿದ  ಬೌದ್ಧ ಮತ್ತು ಜೈನ ಧರ್ಮಗಳು. ಅವುಗಳ ಹುಟ್ಟಿನ ಕಾರಣ ಬೇರೆ ಇದೆ ಎಂಬುದನ್ನು ಭಾರತೀಯ ಧರ್ಮ ಮತ್ತು ತತ್ವಶಾಸ್ತ್ರ (Indologists and Religion Studies) ತಜ್ಞರು ಹೇಳುತ್ತಾರೆ. ಬರಗೂರು ರಾಮಚಂದ್ರಪ್ಪ ಸಮಿತಿ ಹೇಳಿದ ಕಾರಣಗಳಿಗಂತೂ ಈ ಧರ್ಮಗಳು ಹುಟ್ಟಿಲ್ಲ ಎನ್ನುವುದು ಸತ್ಯ. ಹೀಗಿರುವಾಗ ಬ್ರಾಹ್ಮಣ ಮತ್ತು ಕ್ಷತ್ರಿಯರ ಪ್ರಾಬಲ್ಯದ ಅಂಶವನ್ನು ಪಾಠದಲ್ಲಿ ತಂದು, ಅದರಿಂದಾದ ತಿಕ್ಕಾಟವೇ ಬೌದ್ಧ ಮತ್ತು ಜೈನ ಧರ್ಮಗಳ ಹುಟ್ಟಿಗೆ ಕಾರಣವಾಯಿತು ಎಂಬರ್ಥದಲ್ಲಿ ಪಠ್ಯ ರೂಪಿಸಿರುವುದು ಸರಿಯೇ? ಎಂಬ ಪ್ರಶ್ನೆ ಮೂಡುತ್ತದೆ.

ಅದರಲ್ಲೂ ಬರಗೂರು ರಾಮಚಂದ್ರಪ್ಪ ಅವರಂತಹ ಹಿರಿಯರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇಂತಹ ತಪ್ಪು ವ್ಯಾಖ್ಯಾನಗಳು ಹೇಗೆ ಸೇರಿಕೊಂಡವು? ಅಥವಾ ಉದ್ದೇಶಪೂರ್ವಕವಾಗಿಯೇ ಸೇರಿಸಲಾಯಿತೇ? ಎಂಬ ಸಂದೇಹಗಳೂ ಉದ್ಭವಿಸುತ್ತವೆ. ಏಕೆಂದರೆ ಈ ಹಿಂದೆಯೂ ಬರಗೂರು ರಾಮಚಂದ್ರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಠ್ಯಪುಸ್ತಕಗಳಿಗೆ ಸೇರ್ಪಡೆಯಾಗಿದ್ದ ಕೆಲ ಅಂಶ ಇದೇ ತೆರನಾದ ಧಾರ್ಮಿಕ ತಿಕ್ಕಾಟಗಳಿಗೆ ಕಾರಣವಾಗಿತ್ತು. ಇಲ್ಲಿ ಬರಗೂರು ರಾಮಚಂದ್ರಪ್ಪ ಅವರು ಒಂದು ನಿಮಿತ್ತವೇ ಇರಬಹುದು. ಆದರೆ, ಸರ್ಕಾರಗಳು ಶಿಕ್ಷಣದಲ್ಲಿ ವಾಸ್ತವತೆಗಿಂತಲೂ ತಮ್ಮ ವೈಚಾರಿಕ, ಸೈದ್ಧಾಂತಿಕ ನಿಲುವುಗಳನ್ನು ಎತ್ತಿಹಿಡಿಯುತ್ತಿವೆ ಎನ್ನುವುದು ಕಟುಸತ್ಯ. ಶಿಕ್ಷಣವನ್ನೇ ಗೊಂದಲದ ಗೂಡಾಗಿಸುವುದಾದರೆ ಅದರ ಮೂಲಭೂತ ಉದ್ದೇಶಕ್ಕೇ ಪೆಟ್ಟುಕೊಟ್ಟಂತಲ್ಲವೇ?

ಇದನ್ನೂ ಓದಿ: ಬ್ರಾಹ್ಮಣ ಜಾತಿಯ ಅವಹೇಳನ ಆರೋಪ: ಪಠ್ಯಕ್ರಮದಿಂದ ಪೀಠಿಕೆ ಕೈಬಿಡಲು ಶಿಕ್ಷಣ ಸಚಿವರ ಆದೇಶ

ಇದನ್ನೂ ಓದಿ: ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ; ನಕಲಿ ಖಾತೆದಾರರಿಂದ ಹಣಕ್ಕೆ ಬೇಡಿಕೆ