
ಬೆಂಗಳೂರು, ಜನವರಿ 29: ಸರ್ಕಾರಿ ಆಸ್ಪತ್ರೆ (government Hospital) ಅಂದರೆ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಚಿಕಿತ್ಸೆಗಿಂತ ಹೆಚ್ಚಾಗಿ ಊಟ ಸರಿ ಇರಲ್ಲ ಅನ್ನುವ ದೂರುಗಳೇ ಹೆಚ್ಚಾಗಿರುತ್ತದೆ. ಇದೀಗ ಇಂತಹ ದೂರುಗಳನ್ನು ಸರಿ ಪಡಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ಊಟದ ಮೆನು ಬದಲಾವಣೆ ಮಾಡಲಾಗಿದೆ. ಆದರೆ ಈ ಮೆನು ಬದಲಾವಣೆಯೇ ಇದೀಗ ದೊಡ್ಡ ತೊಂದರೆಗೆ ಕಾರಣವಾಗಿದೆ.
ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ವರದಾನವೆಂದು ಹೇಳಬಹುದು. ಆದರೆ ಇಂದಿಗೆ ಅದೆಷ್ಟೋ ಜನ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಹಿಂಜರಿಯುವವರು ಇದ್ದಾರೆ. ಇದಕ್ಕೆಲ್ಲಾ ಊಟ ಸರಿ ಇರಲ್ಲ ಎನ್ನುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾದರಿಯಲ್ಲಿ ಊಟ ನೀಡಲು ಮುಂದಾಗಿದೆ. ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡು ಒಳ್ಳೆಯ ರುಚಿಕರ ಊಟ ಕೊಡುತ್ತಿದೆ. ಆದರೆ ಮೊಟ್ಟೆ ಮಾತ್ರ ಊಟದಲ್ಲಿ ನೀಡುತ್ತಿಲ್ಲ. ಇದು ಈಗ ಹೊಸ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ
ನಗರದ ಕೆಸಿ ಜನರಲ್, ಜಯನಗರ ಹಾಗೂ ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಊಟದ ಮೆನು ಬದಲಾಯಿಸಲಾಗಿದೆ. ಕಳೆದ 6 ತಿಂಗಳ ಹಿಂದೆಯೇ ಈ ಮೆನು ಬದಲಾವಣೆ ಮಾಡಲಾಗಿತ್ತು. ಇದೀಗ ಇದನ್ನೇ ರಾಜ್ಯದ ಮತಷ್ಟು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಆರೋಗ್ಯ ಇಲಾಖೆ, ಆಸ್ಪತ್ರೆಗಳಿಗೆ ಇಸ್ಕಾನ್ ಮೂಲಕ ಊಟ, ತಿಂಡಿ ನೀಡಲು ಮುಂದಾಗಿದೆ. ಆದರೆ ಈಗ ಮೆನು ಬದಲಾವಣೆಯಿಂದ ಪ್ರೋಟೀನ್ ಊಟ ಬದಲಾಗಿದೆ. ನ್ಯಾಷನಲ್ ಮೊಟ್ಟೆ ಸ್ಕೀಮ್ ಅಡಿ ಆಸ್ಪತ್ರೆಗಳಲ್ಲಿ ಊಟದ ಜೊತೆ ಒಂದು ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಈಗ ಇಸ್ಕಾನ್ ದೇವಾಲಯದ ಊಟ ವಿತರಣೆ ಹಿನ್ನೆಲೆ ಮೆನುನಲ್ಲಿ ಮೊಟ್ಟೆಗೆ ಪರ್ಯಾಯವಾಗಿ ಸೋಯಾ ನೀಡಲು ಇಸ್ಕಾನ್ ಮುಂದಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ.
ಸರ್ಕಾರಿ ಆಸ್ಪತ್ರೆ ರೋಗಿಗಳ ಮೊಟ್ಟೆ ಭಾಗ್ಯಕ್ಕೆ ಬ್ರೇಕ್ ಹಾಕಿ, ಟು ಸೋಯಾ ಚಂಕ್ಸ್ ನೀಡಲಾಗುತ್ತಿದೆ. ಆ ಮೂಲಕ ರೋಗಿಗಳಿಗೆ ನೀಡಲಾಗುತ್ತಿದ್ದ ಮೊಟ್ಟೆ ಭಾಗ್ಯಕ್ಕೆ ಆರೋಗ್ಯ ಇಲಾಖೆ ಕತ್ತರಿ ಹಾಕಿದೆ. ರಾಷ್ಟ್ರೀಯ ಆಹಾರ ಪೌಷ್ಟಿಕಾಂಶದ ಸ್ಕೀಮ್ ಕೈಬಿಟ್ಟಿದೆ. ಆದರೆ ಮೊಟ್ಟೆ ನೀಡುವುದು ಅದರ ಅಡಿಯಲ್ಲೇ ಬರುವುದರಿಂದ ಆಸ್ಪತ್ರೆಗಳಿಗೆ ಗೊಂದಲ ಎದುರಾಗಿದೆ.
ಸದ್ಯ ನೀಡಲಾಗುತ್ತಿದ್ದ ಮೊಟ್ಟೆಯಷ್ಟೇ ಪ್ರತ್ಯೇಕವಾಗಿ ಬೇಯಿಸಿ ನೀಡಬೇಕಾ, ಬೇಡವಾ ಎನ್ನುವ ಗೊಂದಲಕ್ಕೆ ಆಸ್ಪತ್ರೆಗಳು ಸಿಲುಕಿವೆ. ಸದ್ಯ ಒಪ್ಪಂದ ಮಾಡಿಕೊಂಡು ನೀಡಿರುವ ಮೆನುವಿನಲ್ಲಿ ಮೊಟ್ಟೆ ಸೇರಿಸಿಲ್ಲ, ಹೀಗಾಗಿ ಆಸ್ಪತ್ರೆಗಳಲ್ಲಿ ಮೊಟ್ಟೆ ನೀಡುತ್ತಿಲ್ಲ.
ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್
ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಪ್ಪೆ ಊಟ ಮಾಡುತ್ತಿದ್ದ ರೋಗಿಗಳಿಗೆ ಸರ್ಕಾರ ಮತ್ತಷ್ಟು ಪೌಷ್ಟಿಕ ಕೊಡಲು ಮುಂದಾಗಿದೆ. ಇಸ್ಕಾನ್ನಿಂದ ಉತ್ತಮ ಊಟವು ಸಿಗುತ್ತಿದೆ. ಆದರೆ ಹೊಸ ಊಟ ನೀಡುವ ನೆಪದಲ್ಲಿ ಮೊಟ್ಟೆಯನ್ನ ಆರೋಗ್ಯ ಇಲಾಖೆ ಕಡೆಗಣಿಸಿರುವುದು ಎಷ್ಟು ಸರಿ ಎನ್ನುವ ಚರ್ಚೆ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:36 pm, Thu, 29 January 26