ಬೇಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡ ಕೈ ಶಾಸಕ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್
ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಆಚೆ ಬಂದಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ ಕೊಟ್ಟಿದೆ. ದಾಳಿ ಮಾಡಿದ್ದ ವೇಳೆ ಕೋಟ್ಯಂತರ ರೂಪಾಯಿ, ಚಿನ್ನ, ಬೆಳ್ಳಿ ಸೇರಿದಂತೆ ವಿರೇಂದ್ರ ಪಪ್ಪಿಯ ಖಜಾನೆಯನ್ನೇ ಇಡಿ ವಶಕ್ಕೆ ಪಡೆದಿತ್ತು. ವಶಕ್ಕೆ ಪಡೆದ ಆಸ್ತಿ ಮೌಲ್ಯ 150 ಕೋಟಿ ರೂಪಾಯಿ ದಾಟಿದೆ. ಇದರ ಬೆನ್ನಲ್ಲೇ ಇದೀಗ ಪಪ್ಪಿ ಆಸ್ತಿ ಜಪ್ತಿ ಮಾಡಿದೆ. ಎಷ್ಟು? ಏನೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು/ಚಿತ್ರದುರ್ಗ, (ಜನವರಿ 29): ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ (Illegal Betting Case) ಸಂಬಂಧಿಸಿದಂತೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿಗೆ (KC Veerendra Puppy )ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ದಾಳಿ ವೇಳೆ ಸಿಕ್ಕಿದ್ದ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನ, ಬೆಳ್ಳಿ ವಶಕ್ಕೆ ಪಡೆದುಕೊಂಡಿತ್ತು. ಇದೀಗ ವಿರೇಂದ್ರ ಪಪ್ಪಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿ ಇತರೆ ಒಟ್ಟು 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಜ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿದ್ದ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ ಕೊಟ್ಟಿದೆ.
ಆನ್ಲೈನ್ ಬೆಟ್ಟಿಂಗ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ವಿರೇಂದ್ರ ಪಪ್ಪಿ ಮನೆಗಳ ಮೇಲೆ ದಾಳಿ ಮಾಡಿತ್ತು. ಆಗ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಇದೀಗ ಮತ್ತೆ ಸಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ ಕೃಷಿ ಜಮೀನು, ನಿವೇಶನ ಸೇರಿ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಸುರಿ ಕಾರು, ಚಿನ್ನಾಭರಣ ಪತ್ತೆ
ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ತನಿಖೆ ವೇಳೆ ಹಗರಣದಲ್ಲಿ ಕೆ.ಸಿ.ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಎನ್ನುವುದು ಗೊತ್ತಾಗಿದೆ. ಅಲ್ಲದೇ ನೂರಾರು ಮ್ಯೂಲ್ ಅಕೌಂಟ್ ಬಳಸಿ ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ. ತನಿಖೆ ವೇಳೆ ಸಿಕ್ಕ ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಕೆ ಸಿ ವೀರೇಂದ್ರ ಆಸ್ತಿ ಜಪ್ತಿ ಮಾಡಲಾಗಿದೆ.
ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ದಾಳಿ ನಡೆಸಿದ್ದ ಇಡಿ, ಚಿನ್ನ,ನಗದು,ಬೆಳ್ಳಿ, ವಾಹನಗಳನ್ನ ವಶಪಡಿಸಿಕೊಂಡಿತ್ತು. ಒಟ್ಟಾರೆ ಪ್ರಕರಣದಲ್ಲಿ ಇಲ್ಲಿವರೆಗೂ 320 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇನ್ನು ಹಗರಣದಲ್ಲಿ 2,300 ಕೋಟಿ ರೂಪಾಯಿ ಅಧಿಕ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು, ಈ ಸಂಬಂಧ ಇಡಿ ತನಿಖೆ ಮುಂದುವರೆಸಿದೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
