ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಸುರಿ ಕಾರು, ಚಿನ್ನಾಭರಣ ಪತ್ತೆ
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಖಜಾನೆಯನ್ನು ಇಡಿ ಜಾಲಾಡಿದ್ದು, ಕಂತೆ ಕಂತೆ ಚಿನ್ನ, ಬೆಳ್ಳಿ, ಲಕ್ಸುರಿ ಕಾರುಗಳು ಪತ್ತೆಯಾಗಿವೆ. ಅಲ್ಲದೇ ತನಿಖೆಯಲ್ಲಿ ಆನ್ಲೈನ್ ಬೆಟ್ಟಿಂಗ್ ನಡೆಸಿರುವ ವೆಬ್ ಸೈಟ್ ಗಳನ್ನು ಸಹ ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಾಗಾದ್ರೆ, ಇಡಿ ತನಿಖೆಯಲ್ಲಿ ಏನೆಲ್ಲಾ ಪತ್ತೆಯಾಗಿದೆ ಎನ್ನುವ ಅಧಿಕೃತ ವಿವರ ಇಲ್ಲಿದೆ.

ಬೆಂಗಳೂರು/ಚಿತ್ರದುರ್ಗ, (ಸೆಪ್ಟೆಂಬರ್ 09): ಅಕ್ರಮ ಆನ್‌ಲೈನ್ ಬೆಟ್ಟಿಂಗ್ (Online Betting) ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ (Chitradurga) ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ (Veerendra Puppy) ಚಿನ್ನದ ಖಜಾನೆ ಪತ್ತೆಯಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ವಿರೇಂದ್ರ ಪಪ್ಪಿಗೆ ಸೇರಿದ ಎಲ್ಲಾ ಬ್ಯಾಂಕ್ ಲಾಕರ್ ಗಳನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಒಟ್ಟು 24 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಇನ್ನು King 567, Raja 567, Lion 567, Play 567, Playwin 567 ಎನ್ನುವ ಆನ್ ಲೈನ್ ಬೆಟ್ಟಿಂಗ್ ವೆಬ್ ಸೈಟ್ ನಡೆಸುತ್ತಿದ್ದನ್ನು ಸಹ ಇಡಿ ಪತ್ತೆ ಹಚ್ಚಿದೆ. ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಮೂಲಕ ದೃಢಪಡಿಸಿದ್ದು, ಕಾರು ಎಷ್ಟು, ಚಿನ್ನ, ಬೆಳ್ಳಿ ಎಷ್ಟು ಸಿಕ್ಕಿದೆ ಎನ್ನುವ ಮಾಹಿತಿಯನ್ನು ಸಹ ಬಹಿರಂಗಪಡಿಸಿದೆ.
24 ಕೋಟಿ ರೂ. ಚಿನ್ನಾಭರಣ ಪತ್ತೆ
ದಾಳಿ ಸಂಬಂಧ ಜಾರಿ ನಿರ್ದೇಶನಾಲಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಿಷೇಧಿತ ಆನ್ಲೈನ್ ಬೆಟ್ಟಿಂಗ್ ವಂಚನೆ ಆರೋಪದಡಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸೇರಿದಂತೆ ಹಲವೆಡೆ ED ದಾಳಿಯಾಗಿತ್ತು. ED ದಾಳಿಯಲ್ಲಿ 24 ಕ್ಯಾರಟ್ 21.43 ಕೆಜಿ ಚಿನ್ನದ ಬಿಸ್ಕೆಟ್ ಸಿಕ್ಕಿತ್ತು. ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ 1 ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಚಿನ್ನದ ಲೇಪಿತ 10 ಕೆಜಿ 985 ಗ್ರಾಮ್ ಬೆಳ್ಳಿ ಗಟ್ಟಿ ಸೇರಿದಂತೆ ಒಟ್ಟು 24 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ಇಡಿ ಖಚಿತಪಡಿಸಿದೆ.
ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕನ ಚಿನ್ನದ ಖಜಾನೆ ನೋಡಿ ಶಾಕ್: ಬರೋಬ್ಬರಿ 2 ಚೀಲದಲ್ಲಿ ತುಂಬಿಕೊಂಡ ಹೋದ ಇಡಿ
ಆನ್ ಲೈನ್ ಬೆಟ್ಟಿಂಗ್ ನಡೆಸಿರುವುದು ಪತ್ತೆ
ದಾಳಿಯಲ್ಲಿ ಆನ್ ಲೈನ್ ಬೆಟ್ಟಿಂಗ್ ನಡೆಸಿರುವುದು ಇಡಿ ಪತ್ತೆ ಹಚ್ಚಿದೆ. King567, Raja567, Lion567, Play567, Playwin567 ಎಂಬ ಆನ್ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಚಲಾಯಿಸುತ್ತಿದ್ದು ಕಂಡುಬಂದಿದೆ. ಈ ವೆಬ್‌ಸೈಟ್‌ಗಳ ಮೂಲಕ ಬಂದ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದನ್ನು ಸಹ ಇಡಿ ಕಂಡುಹಿಡಿದಿದೆ. ಇನ್ನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಕೋಟ್ಯಾಂತರ ರೂ. ಮೌಲ್ಯದ ಅಂತಾರಾಷ್ಟ್ರೀಯ ಪ್ರವಾಸ ಟಿಕೆಟ್‌ಗಳ ಖರೀದಿ ಹಾಗೂ ಮ್ಯೂಲ್ ಖಾತೆಗಳಿಂದ ಹಣ ಹಂಚಿಕೆ ಆಗಿದ್ದ ಬಗ್ಗೆ ಇಡಿ ಸಾಕ್ಷಿ ಕಲೆಹಾಕಿದೆ.
ಲಕ್ಸುರಿ ಕಾರ್ ಗಳು ಪತ್ತೆ
ಇನ್ನು ದಾಳಿ ವೇಳೆ ವಿರೇಂದ್ರ ಪಪ್ಪಿ ಕುಟುಂಬ ಬಳಸುತ್ತಿದ್ದ ಲಕ್ಸುರಿ ಕಾರುಗಳನ್ನು ಸಹ ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬೇರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರಿನಲ್ಲಿ ಕಾರು ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಅನಿಲ್ ಗೌಡ ಎಂಬುವರ ಹೆಸರಿನಲ್ಲಿ ಬೆಂಜ್, ಫೋನೊಫೆಸಿಯಾ ಕಂಪನಿಯ ಗುಲ್ಯಾನ್ ಖತ್ತರ್ ಹಣ ಹಾಕಿರುವ ರೇಂಜ್ ರೋವರ್ ಕಾರು ಸಹ ಸಿಕ್ಕಿದೆ. ದಾಳಿಯಲ್ಲಿ ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಮೂಲಕ ದೃಢಪಡಿಸಿದೆ.
Published On - 9:06 pm, Tue, 9 September 25




