Ranji Final: ಗಂಡು ಮೆಟ್ಟಿದ ನಾಡಿನಲ್ಲಿ ಕೆಚ್ಚೆದೆಯ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್
Mayank Agarwal's Ranji Trophy Century: ರಣಜಿ ಟ್ರೋಫಿ ಫೈನಲ್‌ನಲ್ಲಿ ಮಯಾಂಕ್ ಅಗರ್ವಾಲ್ ಹುಬ್ಬಳ್ಳಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ, ಮಯಾಂಕ್ ಏಕಾಂಗಿಯಾಗಿ ತಂಡಕ್ಕೆ ಆಸರೆಯಾದರು. ಇದು ಅವರ 21ನೇ ಪ್ರಥಮ ದರ್ಜೆ ಶತಕವಾಗಿದ್ದು, ಕರ್ನಾಟಕ ತಂಡಕ್ಕೆ ಮೇಲುಗೈ ಸಾಧಿಸಲು ಅವರ ದೊಡ್ಡ ಇನ್ನಿಂಗ್ಸ್ ಅನಿವಾರ್ಯವಾಗಿದೆ.
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸ್ಮರಣೀಯ ಶತಕ ಬಾರಿಸಿ ತಂಡದ ಪರ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. 153 ಎಸೆತಗಳಲ್ಲಿ ಮಯಾಂಕ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 21ನೇ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ತಂಡವನ್ನು ಕೂಡ 150 ರನ್ಗಳ ಗಡಿ ದಾಟಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 584 ರನ್ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 57 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಅನುಭವಿ ಕೆಎಲ್ ರಾಹುಲ್ 13 ರನ್ಗಳಿಗೆ ಔಟಾದರೆ, ನಾಯಕ ದೇವದತ್ ಪಡಿಕ್ಕಲ್ ಇನ್ನಿಂಗ್ಸ್ 11 ರನ್ಗಳಿಗೆ ಅಂತ್ಯವಾಯಿತು. ಆ ಬಳಿಕ ಬಂದ ಇಬ್ಬರು ಬ್ಯಾಟ್ಸ್ಮನ್ಗಳಾದ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.
ಈ ಹಂತದಲ್ಲಿ ಎಂದಿನಂತೆ ತಮ್ಮ ಬ್ಯಾಟಿಂಗ್ ಮುಂದುವರೆಸಿದ ಮಯಾಂಕ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಇದರಲ್ಲಿ ಶ್ರೇಯಸ್ 27 ರನ್ಗಳ ಕಾಣಿಕೆ ನೀಡಿದರೆ, ಉಳಿದ ರನ್ಗಳು ಮಯಾಂಕ್ ಬ್ಯಾಟ್ನಿಂದ ಸಿಡಿದವು. ಈ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಬೇಕೆಂದರೆ ಮಯಾಂಕ್ ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡಿಬರಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

