ಬೆಂಗಳೂರು, ಜನವರಿ 29: ಫೆಬ್ರುವರಿ 1 ರಿಂದ ಹೊಸದಾಗಿ ಕಾರು ಮತ್ತು ಬೈಕ್ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರ (Karnataka Govcernment) ಶಾಕ್ ನೀಡಲಿದೆ. ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಸೆಸ್ (Cess) ಸಂಗ್ರಹಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಹೊಸ ಕಾರು ಖರೀದಿ ಮಾಡುವವರು ಒಂದು ಸಾವಿರ ರೂಪಾಯಿ, ಹೊಸದಾಗಿ ಬೈಕ್ ಖರೀದಿ ಮಾಡುವವರು 500 ರೂಪಾಯಿಯನ್ನು ಹೆಚ್ಚುವರಿಯಾಗಿ ಸೆಸ್ ರೂಪದಲ್ಲಿ ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕು.
ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ, ಸಾರಿಗೇತರ ವಾಹನಗಳ ನೋಂದಣಿ (ರಿಜಿಸ್ಟ್ರೇಷನ್) ಸಮಯದಲ್ಲಿ ಶುಲ್ಕ ದ್ವಿಚಕ್ರ ವಾಹನಗಳಿಗೆ 500 ರೂಪಾಯಿ, ಮೋಟಾರು ಕಾರುಗಳಿಗೆ 1 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತದೆ. ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.
ಈಗಾಗಲೇ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಹೊಸ ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಲಕರ ಅಭಿವೃದ್ಧಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ರಿಜಿಸ್ಟ್ರೇಷನ್ ಚಾರ್ಜ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲು ಹೊರಟಿದೆ. ಆದರೆ ಇದಕ್ಕೆ ಜನರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 1 ರಿಂದ ಕಾರು ಖರೀದಿಸುವವರಿಗೆ ಶಾಕ್: ಬೆಲೆ ಹೆಚ್ಚಳ ಘೋಷಿಸಿದ ಮಾರುತಿ
ಹೊಸ ವರ್ಷದ ಆರಂಭದಲ್ಲಿಯೇ ಸಾರಿಗೆ ಇಲಾಖೆ ಬಸ್ ಟಿಕೆಟ್ ದರಗಳನ್ನು ಶೇಕಡಾ 15ರಷ್ಟು ಏರಿಕೆ ಮಾಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಮಾಡಿ ಜನರಿಗೆ ಶಾಕ್ ನೀಡಿದೆ. ಇದೀಗ ಕಾರು, ಬೈಕ್ ಖರೀದಿಸುವವರಿಗೂ ಶಾಕ್ ನೀಡಿದೆ.
Published On - 8:31 am, Wed, 29 January 25