ಸಂಸದರು, ಸಚಿವರ ಕಾರು ಖರೀದಿಯ ಮೊತ್ತ ಹೆಚ್ಚಿಸಿದ ಸರ್ಕಾರ
Karnataka Government: ಶಾಸಕರು ಮತ್ತು ಸಂಸದರಿಗೆ ಕಾರನ್ನು ಖರೀದಿಸಲು ₹ 1 ಲಕ್ಷ ಹಣವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಈ ಮೊದಲು ರಾಜ್ಯ ಸರ್ಕಾರವು ಶಾಸಕರು ಹಾಗೂ ಸಂಸದರ ಹೊಸ ಕಾರು ಖರೀದಿಗೆ ₹ 22 ಲಕ್ಷಗಳನ್ನು ನೀಡುತ್ತಿತ್ತು.

ಬೆಂಗಳೂರು: ಕೊರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಚಿವರು, ಸಂಸದರಿಗೆ ನೀಡುವ ಸೌಲಭ್ಯಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ. ಶಾಸಕರು ಮತ್ತು ಸಂಸದರಿಗೆ ಕಾರು ಖರೀದಿಸಲು ನೀಡುತ್ತಿದ್ದ ಹಣದ ಒಟ್ಟು ಮೊತ್ತದಲ್ಲಿ ಸರ್ಕಾರ ₹ 1 ಲಕ್ಷದಷ್ಟು ಹೆಚ್ಚಳ ಮಾಡಿದೆ. ಈ ಮೊದಲು ರಾಜ್ಯ ಸರ್ಕಾರ ಶಾಸಕರು ಹಾಗೂ ಸಂಸದರ ಹೊಸ ಕಾರು ಖರೀದಿಗೆ ₹ 22 ಲಕ್ಷ ಹಣ ನೀಡುತ್ತಿತ್ತು. ಇನ್ನು ಮುಂದೆ ₹ 23 ಲಕ್ಷ ನೀಡಲು ನಿರ್ಧರಿಸಿದೆ. ಕಾರು ಖರೀದಿಗೆ ನೀಡುತ್ತಿದ್ದ ಮೊತ್ತ ಹೆಚ್ಚಿಸಬೇಕೆಂದು ಸಚಿವರು, ಸಂಸದರು ಒತ್ತಡ ಹೇರಿದ ಕಾರಣ ರಾಜ್ಯ ಸರ್ಕಾರ ₹ 1 ಲಕ್ಷದಷ್ಟು ಹೆಚ್ಚು ಹಣ ನೀಡಲು ಹಣ ಹೆಚ್ಚಳ ಮಾಡಿದೆ ಎಂದು ತಿಳಿದುಬಂದಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಕೊರೊನಾ, ಅತಿವೃಷ್ಟಿ, ಬರಗಾಲಗಳ ಹೊಡೆತದಿಂದ ರಾಜ್ಯ ಆರ್ಥಿಕವಾಗಿ ನಲುಗಿ ಹೋಗಿದೆ. ಹೀಗಾಗಿ ನಾನು ನಿರೀಕ್ಷೆಯಂತೆ ಯಾವ ಕೆಲಸವನ್ನೂ ಮಾಡಿಲ್ಲ. ಬಜೆಟ್ನಲ್ಲಿಯೂ 40-50 ಸಾವಿರ ಕೋಟಿ ಖೋತಾ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಪ್ಪಳದ ಬಸಾಪುರದಲ್ಲಿ ಈಚೆಗೆ ರಾಜ್ಯದ ಆರ್ಥಿಕ ಸ್ಥಿತಿಗತಿಯ ವಾಸ್ತವ ಚಿತ್ರಣ ಬಿಡಿಸಿಟ್ಟಿದ್ದರು. ಆದರೆ ಇದೀಗ ಆರ್ಥಿಕ ಸಂದಿಗ್ಧ ಸ್ಥಿತಿಯಲ್ಲಿಯೇ ಸರ್ಕಾರವು ಶಾಸಕರು ಮತ್ತು ಸಂಸದರಿಗೆ ಕಾರು ಖರೀದಿಸಲು ನಿಗದಿಪಡಿಸಿದ್ದ ಹಣದ ಮೊತ್ತದಲ್ಲಿ ₹ 1 ಲಕ್ಷ ಹೆಚ್ಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಆರ್ಥಿಕ ಸ್ಥಿತಿಗತಿಯ ವಿಚಾರ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಆರ್ಥಿಕ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿ ತೋರಿಸಿದ್ದರು.
‘ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ರೈತರು ಮಾಡಿರುವ ₹ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ, ₹ 5 ಸಾವಿರ ಕೋಟಿ ಮೊತ್ತದ ರೈತ ಬಂಧು ನಿಧಿ ಸ್ಥಾಪನೆ ಮಾಡುತ್ತೇವೆ, ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ರೈತಬಂಧು ವಿದ್ಯಾರ್ಥಿ ವೇತನ ನಿಧಿ ಸ್ಥಾಪನೆ ಮಾಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಅನುದಾನ ನೀಡುತ್ತೇವೆ ಎಂದೆಲ್ಲಾ ಯಡಿಯೂರಪ್ಪ ಭರವಸೆ ನೀಡಿದ್ದರು’ ಎಂದು ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿದ್ದರು.
‘ಮಹಿಳೆಯರಿಗೆ ₹ 2 ಲಕ್ಷ ರೂಪಾಯಿವರೆಗೆ ಶೇ 1ರ ಬಡ್ಡಿದರಲ್ಲಿ ಸಾಲ, ಮದುವೆಯಾಗುವ ಹೆಣ್ಣುಮಕ್ಕಳಿಗೆ 3 ಗ್ರಾಂ ಚಿನ್ನದ ತಾಳಿ, ₹ 10 ಸಾವಿರ ಕೋಟಿ ವೆಚ್ಚದಲ್ಲಿ ಸ್ತ್ರೀ ಉನ್ನತ ನಿಧಿ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಕೊಡುವ ಯೋಜನೆಗಳನ್ನು ಯಡಿಯೂರಪ್ಪ ನಿಲ್ಲಿಸಿಬಿಟ್ಟರು’ ಎಂದು ಸಿದ್ದರಾಮಯ್ಯ ಸದನದಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದರು.
ಇದಕ್ಕೆ ಉತ್ತರಿಸಿದ್ದ ಯಡಿಯೂರಪ್ಪ, ಸಿದ್ದರಾಮಯ್ಯ ನೀಡಿರುವ ಅಂಕಿಅಂಶಗಳು ಸರಿಯಾಗಿವೆ. ಆದರೆ ಏನೂ ಕೆಲಸವಾಗಿಲ್ಲ ಎಂದು ಒಪ್ಪಿಕೊಂಡಿದ್ದರು. ರಾಜ್ಯ ಪ್ರಗತಿ ಕಂಡಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ತಿಳಿಸಿದ್ದರು.
ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರ ಟೇಕಾಫ್ ಅಲ್ಲ, ಆಫೇ ಆಗಿಬಿಟ್ಟಿದೆ! ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ
ಇದನ್ನೂ ಓದಿ: ಅನೈತಿಕ ಮೈತ್ರಿ ಸರ್ಕಾರ ಮಾಡಿದ್ದವರು ನೀವು: ಸಿದ್ದರಾಮಯ್ಯಗೆ ಯಡಿಯೂರಪ್ಪ ತಿರುಗೇಟು