ಕಾರಿನಲ್ಲಿ ಇಡಿ ರಾತ್ರಿ ಇದ್ದ ಕಂದಮ್ಮಗಳು; ಕೊನೆಗೂ ಪೋಷಕರಿಗೆ ಸಿಕ್ತು ನೆಮ್ಮದಿ, ಏನಿದು ಮಕ್ಕಳ ನಾಪತ್ತೆ ಕಥೆ?
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದ ಲಿಂಕೇಶ್ (4) ಹಾಗೂ ಜೀವನ್ (6) ಇಬ್ಬರೂ ಬಾಲಕರು ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದರು. ಆಟವಾಡಿ ಮನೆಗೆ ಮರಳುತ್ತಾರೆ ಎಂದು ಪೋಷಕರು ತಮ್ಮ ಕೆಲಸದಲ್ಲಿ ಮುಳುಗಿದ್ದರು. ಆದರೆ ಮಕ್ಕಳು ರಾತ್ರಿಯಾದರೂ ಮನೆಗೆ ಮರಳಲೇ ಇಲ್ಲ.
ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಆಟವಾಡಿಕೊಂಡಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣ ಪೋಷಕರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಈ ಸಂಬಂಧ ಪೊಲೀಸರು ತಲೆ ಕೆಡಿಸಿಕೊಂಡು ಶೋಧ ಕಾರ್ಯದಲ್ಲಿ ಕೂಡ ತೊಡಗಿದ್ದರು. ಆದರೆ ಆ ಮಕ್ಕಳು ಮಾತ್ರ ಮನೆ ಬಳಿಯೇ ನಿಂತಿದ್ದ ಕಾರಲ್ಲಿ ಪತ್ತೆ ಆಗಿದ್ದರು. ಹಾಗಿದ್ದರೆ ಮಕ್ಕಳು ಕಾರಲ್ಲಿ ಇಡೀ ರಾತ್ರಿ ಕಳೆಯುವಂತೆ ಆದದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದ ಲಿಂಕೇಶ್ (4) ಹಾಗೂ ಜೀವನ್ (6) ಇಬ್ಬರೂ ಬಾಲಕರು ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದರು. ಆಟವಾಡಿ ಮನೆಗೆ ಮರಳುತ್ತಾರೆ ಎಂದು ಪೋಷಕರು ತಮ್ಮ ಕೆಲಸದಲ್ಲಿ ಮುಳುಗಿದ್ದರು. ಆದರೆ ಗ್ರಾಮದ ಬ್ರಹ್ಮಾನಂದರೆಡ್ಡಿ ಟೀ ಅಂಗಡಿ ಬಳಿಗೆ ತೆರಳಿ ಆಟವಾಡುತ್ತಿದ್ದವರು ಸಂಜೆ ವೇಳೆಗೆ ನಾಪತ್ತೆ ಆಗಿದ್ದರು.
ಸಂಜೆಯಿಂದ ಹುಡುಕಾಟ! ಸಂಜೆ ಕತ್ತಲಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ಶುರು ಮಾಡಿದ್ದು, ಸಂಬಂಧಿಕರ ಮನೆಗಳು ಸೇರಿದಂತೆ ಊರಿಗೇ ಊರೇ ಜಾಲಾಡಿದ್ದಾರೆ. ಇನ್ನು ಸಂಜೆ ವೇಳೆ ನೋಡಿದವರು ಟೀ ಅಂಗಡಿ ಬಳಿಯೇ ಆಟವಾಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಮಕ್ಕಳು ಮಾತ್ರ ಎಲ್ಲೂ ಕಾಣದ ಕಾರಣ ಮಕ್ಕಳ ಅಪಹರಣವಾಗಿರಬಹುದು ಅಥವಾ ಯಾವುದಾದರೂ ಅಪಾಯಕ್ಕೆ ಸಿಲುಕಿರಬಹುದು ಎಂದೇ ಜನ ಭಾವಿಸಿದ್ದರು.
ಪೊಲೀಸ್ ಠಾಣೆಗೆ ದೂರು ಇಬ್ಬರು ಮಕ್ಕಳು ನಾಪತ್ತೆಯಾದ ನಂತರ ಪೋಷಕರು ಆತಂಕಕ್ಕೊಳಗಾಗಿ ಮಕ್ಕಳನ್ನು ಹುಡುಕಿಕೊಡಿ ಎಂದು ರಾಂಪುರ ಠಾಣೆಗೆ ತೆರಳಿದ್ದು, ದೂರು ದಾಖಲಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿರಬಹುದು. ದಯಮಾಡಿ ನಮ್ಮ ಮಕ್ಕಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದ ಪೋಷಕರಿಗೆ, ಪೊಲೀಸರು ಸಹ ಸಹಕರಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರು, ಮಕ್ಕಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ರಾತ್ರಿ ಕಳೆದರೂ ಪತ್ತೆಯಾಗದ ಮಕ್ಕಳು! ರಾತ್ರಿ ಪೂರ್ಣ ನಿದ್ದೆಯಿಲ್ಲದೆ ಪೋಷಕರು, ಪೊಲೀಸರು ಹುಡುಕಿದರೂ ಮಕ್ಕಳು ಮಾತ್ರ ಪತ್ತೆ ಆಗಿಲ್ಲ. ಏನೋ ಅವಘಡ ಸಂಭವಿಸಿದೆ ಎಂದೇ ಜನರು ಭಾವಿಸಿದ್ದರು. ಅಪಹರಣ ಆಗಿರಬಹುದು ಅಥವಾ ಆಟವಾಡಿಕೊಂಡು ಹೋಗಿ ಎಲ್ಲಾದರೂ ನೀರಿನ ತೊಟ್ಟಿ, ಬಾವಿಗಳಿಗೆ ಬಿದ್ದಿರಬಹುದು ಎಂದು ಹುಡುಕಾಟದಲ್ಲಿ ತೊಡಗಿದ್ದರು.
ಬೆಳಗ್ಗೆ ಏಳು ಗಂಟೆ ವೇಳೆಗೆ ಗ್ರಾಮದ ಪ್ರವೀಣ್ ಎಂಬುವರು ಕಾರೊಂದರಲ್ಲಿ ಮಕ್ಕಳ ಸೌಂಡ್ ಕೇಳಿ ತಿರುಗಿ ನೋಡಿದಾಗ ಮಕ್ಕಳಿರುವುದು ಪತ್ತೆ ಆಗಿದೆ. ನಾಪತ್ತೆಯಾದ ಮಕ್ಕಳ ಮನೆ ಬಳಿಯೇ ಮರೆಯಲ್ಲಿ ನಿಂತಿದ್ದ ಇಂಡಿಗೋ ಕಾರಲ್ಲಿ ಲಿಂಕೇಶ್ ಮತ್ತು ಜೀವನ್ ಪತ್ತೆ ಆಗಿದ್ದಾರೆ. ಆಗ ಸಂಜೆ ವೇಳೆ ಆಟವಾಡುತ್ತ ಕಾರು ಹೊಕ್ಕಿದ್ದ ಬಾಲಕರು ಹೊರಬರಲಾಗದೆ ಅಲ್ಲೇ ನಿದ್ರೆಗೆ ಜಾರಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸದ್ಯ ಸಕಾಲಕ್ಕೆ ಮಕ್ಕಳ ರಕ್ಷಣೆ ಆಗಿದೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದರು.
ಇದನ್ನೂ ಓದಿ: Chitradurga Child Talent: ಆರು ವರ್ಷದ ಬಾಲಕಿ ಚಾಣಾಕ್ಷತನಕ್ಕೆ ಶಿಕ್ಷಕರೇ ಫಿದಾ
Published On - 9:23 pm, Wed, 24 February 21