ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ ಸಿಐಡಿಗೆ ಹಸ್ತಾಂತರ

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ ಸಿಐಡಿಗೆ ಹಸ್ತಾಂತರ
ಜಿಲೆಟಿನ್ ಸ್ಫೋಟವಾದ ಸ್ಥಳ

ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಸ್ಫೋಟ ಸಂಭವಿಸಿತ್ತು. ಇದರ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿತ್ತು.

Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 24, 2021 | 9:43 PM

ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ ಆಗಿದೆ. ಸದ್ಯ, ಸ್ಫೋಟ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ ಆಗಿದೆ.

ಆರೋಗ್ಯ ಸಚಿವ ಕೆ.ಸುಧಾಕರ್ ತವರು ಕ್ಷೇತ್ರದಲ್ಲಿ ರಾತ್ರಿ 12.45ರ ಸಮಯದಲ್ಲಿ ಸ್ಫೋಟ ಸಂಭವಿಸಿತ್ತು. ಭ್ರಮರವರ್ಷಿಣಿ ಕ್ವಾರಿ ಬ್ಲಾಸ್ಟಿಂಗ್​ಗೆ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆ ಸ್ಫೋಟಕವನ್ನು ಅರಣ್ಯದಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಸ್ಫೋಟ ಸಂಭವಿಸಿತ್ತು. ಇದರ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿತ್ತು.

ಸ್ಫೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡುವಂತೆ ಗುಡಿಬಂಡೆ ಕೋರ್ಟ್​ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್​​ಪಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳಾದ ರಿಯಾಜ್, ಕ್ರಷರ್​ ಮಾಲೀಕ ರಾಘವೇಂದ್ರ ರೆಡ್ಡಿಯನ್ನು ಕೋರ್ಟ್​​ ಸಿಐಡಿ ಕಸ್ಟಡಿಗೆ ನೀಡಿದೆ.

ಕಟ್ಟುನಿಟ್ಟಿನ ಕಾನೂನು ಜಾರಿ ಭರವಸೆ ಗಣಿಗಳಿಗೆ ಜಿಲೆಟಿನ್ ಸ್ಫೋಟಕ ಪೂರೈಕೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಇದಕ್ಕಾಗಿ ಹೊಸ ಕಾನೂನನ್ನು ಜಾರಿ ಮಾಡುವ ಚಿಂತನೆಯೂ ಇದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುತ್ತೇವೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಹುಣಸೋಡು ಬಳಿಯ ಕಲ್ಲುಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡ ನಂತರ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದರು. ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬಹುದೆಂಬ ಭೀತಿಯಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ವೇಳೆ ಸ್ಫೋಟವಾಗಿದೆ. ನನಗೆ ತಿಳಿದ ಪ್ರಕಾರ ಈ ಜಿಲಟಿನ್ ಕಡ್ಡಿಗಳನ್ನು ಶಿವಮೊಗ್ಗ ಘಟನೆಗೂ ಮುನ್ನವೇ ಸಂಗ್ರಹಿಸಿಡಲಾಗಿತ್ತು. ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿರುವುದರಿಂದ ನಾನು ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: Chikkaballapura Gelatin Blast | ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್​ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!

Follow us on

Related Stories

Most Read Stories

Click on your DTH Provider to Add TV9 Kannada