ಹುಲಿ ಉಗುರು ಮರಳಿಸಲು ಜನರಿಗೆ ಮತ್ತೊಂದು ಅವಕಾಶ ನೀಡಲು ಸರ್ಕಾರ ಚಿಂತನೆ
ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರು ಹುಲಿ ಉಗುರಿನ ಸರ ಧರಿಸಿದ್ದಕ್ಕೆ ಅರೆಸ್ಟ್ ಆಗಿದ್ದರು. ಇದಾದ ಬಳಿಕ ಗಣ್ಯ ವ್ಯಕ್ತಿಗಳು ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹೀಗಾಗಿ ಹುಲಿ ಉಗುರು ಧರಿಸಿದವರಿಗೆ ಅರಣ್ಯ ಇಲಾಖೆ ಕಾನೂನು ಕ್ರಮದ ಎಚ್ಚರಿಕೆ ನೀಡಿತ್ತು. ನಂತರ ಅವುಗಳನ್ನು ಹಿಂದಿರುಗಿಸುವಂತೆ ಸೂಚಿಸಲಾಗಿತ್ತು. ಇದೀಗ ಕೊನೆಯ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು, ಡಿ.19: ಯಾರೆಲ್ಲ ಹುಲಿ ಉಗುರು (Tiger Claw Pendant) ಇದೆಯೋ ಅವುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಸಮಾಲೋಚನೆ ನಡೆಸಿದ್ದಾರೆ.
ಎಜಿ ಶಶಿಕಿರಣ್ ಶೆಟ್ಟಿ ನೇತೃತ್ವದ ಅಧಿಕಾರಿಗಳ ಜೊತೆ ಚರ್ಚಿಸಿರುವ ಸಚಿವ ಈಶ್ವರ ಖಂಡ್ರೆ, ವನ್ಯಜೀವಿಗಳ ಅಂಗಾಂಗದ ವಸ್ತು ಮರಳಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ವನ್ಯಜೀವಿಗಳ ಮುಖ ಫಲಕ ಮರಳಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಕೊನೆಯ ಅವಕಾಶ ನೀಡುವ ಕುರಿತು ರೂಪರೇಷೆ ಸಿದ್ಧಪಡಿಸಲು ಸೂಚಿಸಿದ್ದಾರೆ.
ಏನಿದು ಪ್ರಕರಣ?
ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬಂದಿದ್ದವು. ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ದಾವಣಗೆರೆ: ಹುಲಿ ಉಗುರು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ 7 ಜನ ಅರೆಸ್ಟ್
ಇನ್ನು, ಹುಲಿ ಉಗುರಿನ ಲಾಕೆಟ್ ಧರಿಸಿ ಫೋಟೋಗಳು ವೈರಲ್ ಆಗುತ್ತಿರುವ ಬಗ್ಗೆ ಡಿಸಿಎಫ್ಓ ರವೀಂದ್ರ ಅವರು ಪ್ರತಿಕ್ರಿಯಿಸಿ, ಸದ್ಯಕ್ಕೆ ನಮಗೆ ಯಾವ ದೂರು ಬಂದಿಲ್ಲ. ಬೇರೆಯವರು ಹಾಕಿದ್ದರೂ ಕಾನೂನು ಅಡಿಯಲ್ಲಿ ಅಪರಾಧ ಆಗುತ್ತದೆ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಹೇಳಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಏನು ಹೇಳುತ್ತೆ?
ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ ಮೂರು ವರ್ಷದಿಂದ ಏಳು ವರ್ಷಗಳ ವರೆಗೆ ಜೈಲು ಮತ್ತು ಕನಿಷ್ಠ 10,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ