ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಆದೇಶ ಪ್ರಕಟ
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದೆ. ಈ ನೂರು ದಿನಗಳಲ್ಲಿ ಸರ್ಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ನಡೆಸಿದೆ. ಹತ್ತು ಹಲವು ಮಹತ್ವದ ಕ್ರಮಗಳನ್ನ ಸರ್ಕಾರ ಕೈಗೊಂಡಿತ್ತು. ಕಳೆದ ತಿಂಗಳು ಭರ್ತಿ ನೂರು ದಿನಗಳ ಸಂಭ್ರಮ ಕಾರ್ಯಕ್ರಮ ಮಾಡಿದ್ರು. ಇವತ್ತು ಅದೇ ನೂರು ದಿನಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಈ ವೇಳೆ ಅಧಿಕಾರಿಗಳಿಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರು, (ಅಕ್ಟೋಬರ್ 05): ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನಾಗರಿಕ ಸೇವೆಗಳ ನೇಮಕಾತಿಯಲ್ಲಿ ಶೇಕಡಾ 2ರಷ್ಟು ಮೀಸಲಾತಿ ಕಲ್ಪಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಕಳೆದ ನಾಲ್ಕು ವರ್ಷಗಳ ಪ್ರಯತ್ನದ ಫಲವಾಗಿ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇಕಡಾ 2 ರಷ್ಟು ಮೀಸಲಾತಿ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಶೇಕಡಾ 3 ರಷ್ಟು ಮೀಸಲಾತಿ ಆದೇಶವನ್ನು ಸರ್ಕಾರ ಇಂದು (ಅಕ್ಟೋಬರ್ 05) ಪ್ರಕಟಿಸಿದೆ. ‘ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2026’ರ ಅಡಿಯಲ್ಲಿ ಈ ಮೀಸಲಾತಿ ಜಾರಿಗೆ ಬರಲಿದೆ.
ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್ ಹುದ್ದೆಗಳ ಸೇವೆಗಳಲ್ಲಿನ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡಲು ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮಗಳು, 2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಲಾಗಿತ್ತು. ಇದೀಗ ಮೀಸಲಾತಿ ಆದೇಶವನ್ನು ಸರ್ಕಾರ ಪ್ರಕಟಿಸಿದೆ. ಇದರಿಂದ ರಾಜ್ಯದ ಕ್ರೀಡಾಪಟುಗಳು ಕೆಒಎ ಕಾರ್ಯಕ್ಕೆ ಧನ್ಯವಾದ ಅರ್ಪಿಸಿ, ಹರ್ಷವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ: ಸರ್ಕಾರಿ ನೌಕರರಿಗೆ ಲಾಂಗ್ ಹಾಲಿಡೇ
ಸಾಮಾನ್ಯ ಸರ್ಕಾರಿ ಹುದ್ದೆಗಳಲ್ಲಿ ಶೇಕಡಾ 2ರಷ್ಟು ಮೀಸಲಾತಿಯ ಜೊತೆಗೆ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 3ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬಂದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಸರ್ಕಾರದ ಈ ನಿರ್ಧಾರವನ್ನು ರಾಜ್ಯಾದ್ಯಂತ ಕ್ರೀಡಾಪಟುಗಳು ಹರ್ಷದಿಂದ ಸ್ವಾಗತಿಸಿದ್ದಾರೆ. ತಮ್ಮ ಕನಸಿನ ಬೇಡಿಕೆಯನ್ನು ಈಡೇರಿಸಲು ಪ್ರಮುಖ ಪಾತ್ರ ವಹಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ, ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ FIBA ಅಧ್ಯಕ್ಷರು, ಕೆಒಎ ಅಧ್ಯಕ್ಷರು ಹಾಗೂ MLC ಆದ ಡಾ. ಕೆ. ಗೋವಿಂದರಾಜ್ ಅವರು ಕೆಒಎ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಮೀಸಲಾತಿ ಬಗ್ಗೆ ಮಾಹಿತಿ ಹಂಚಿಕೊಂಡ ಡಿಸಿಎಂ
ಇನ್ನು ಈ ಬಗ್ಗೆ ಡಿಸಿಎಂ, ಕ್ರೀಡಾ ಸಚಿವ ಪರಮೇಶ್ವರ್ ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯದ ಕೀರ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಬದುಕಿನ ನಂತರವೂ ಭದ್ರ ಭವಿಷ್ಯ ಕಲ್ಪಿಸುವುದು ಆದ್ಯತೆಯಾಗಿದೆ. ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ
ಸಿವಿಲ್ ಸೇವೆಗಳ ಎಲ್ಲಾ ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿದ್ದೇವೆ. ಸಾಮಾನ್ಯ ವರ್ಗ, ಎಸ್‌ಸಿ, ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗ ಒಳಗೊಂಡಂತೆ ಶೇ.2ರಷ್ಟು ಮೀಸಲಾತಿ ಅನ್ವಯವಾಗಲಿದೆ. ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿದ್ದು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ಅಧಿಸೂಚಿತ 34 ಕ್ರೀಡೆಗಳಲ್ಲಿನ ಸಾಧನೆಗೆ ಅನುಗುಣವಾಗಿ ಕೃಪಾಂಕದ ಸೌಲಭ್ಯವೂ ಇರಲಿದೆ. ಕ್ರೀಡಾಪಟುಗಳು ಪದಕ ಗೆಲ್ಲುವ ಕ್ಷಣದಲ್ಲಿ ಮಾತ್ರವಲ್ಲ ಕ್ರೀಡಾ ಪಯಣದ ಪ್ರತಿಯೊಂದು ಹಂತದಲ್ಲೂ ಸರ್ಕಾರ ಅವರ ಜೊತೆಗೆ ನಿಲ್ಲಲಿದೆ. ಪ್ರತಿಭೆಗೆ ಅವಕಾಶ, ಸಾಧನೆಗೆ ಗೌರವ, ಭವಿಷ್ಯಕ್ಕೆ ಭದ್ರತೆ ನೀಡುವುದು ನಮ್ಮ ಕರ್ತವ್ಯ ಎಂದು ಟ್ವೀಟ್ ಮಾಡಿದ್ದಾರೆ.




