ಬೆಂಗಳೂರು, (ಜೂನ್ 20): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ(government employees) ಬಹುನಿರೀಕ್ಷಿತ 7ನೇ ವೇತನ ಆಯೋಗದ(7th pay commission) ಶಿಫಾರಸು ಜಾರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಇಂದು (ಜೂನ್ 20) ವಿಧಾನಸೌಧದ ಸಿಎಂ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಈ ಮೂಲಕ ಏಳನೇ ವೇತನ ಆಯೋಗ ಜಾರಿ ಮಾಡಬೇಕೆಂಬ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾದಂತಾಗಿದೆ.
ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಶೇ.25ರಷ್ಟು ಹೆಚ್ಚಳಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಸಲಹೆ ನೀಡಿದ್ದಾರೆ. ಅಂತಿಮವಾಗಿ ಸಂಪುಟ ಸಭೆ ಆಯೋಗದ ಶಿಫಾರಸು ಜಾರಿ ಅಧಿಕಾರವನ್ನ ಸಿಎಂಗೆ ನೀಡಿದ್ದು, ವೇತನ ಶೇ.27ರಷ್ಟು ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ವೇತನ ಹೆಚ್ಚಳ ಪ್ರಸ್ತಾವವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸ್ವಾಗತಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ವೇತನ ಆಯೋಗ ನೀಡಿರುವ ಶಿಫಾರಸನ್ನು ಒಪ್ಪಿರುವ ಸಿಎಂ ನಡೆ ಸ್ವಾಗತಾರ್ಹವಾದುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ. ರಾಜ್ಯದ ಖಜಾನೆಗೆ ಹೆಚ್ಚಿನ ಸಂಪನ್ಮೂಲದ ಒದಗಣೆ ಮತ್ತು ಹಂಚಿಕೆ ಸರ್ಕಾರಿ ನೌಕರರಿಂದಲೇ ಆಗುತ್ತದೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು.
7ನೇ ವೇತನ ಆಯೋಗದ ಶಿಫಾರಸು ಯಥಾವತ್ತಾಗಿ ಜಾರಿಗೆ ತರಲು ಜೂನ್ ಅಂತ್ಯದವರೆಗೆ ಗಡುವು ನೀಡಲಾಗಿತ್ತು. ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಇತ್ತೀಚೆಗೆ ರಾಯಚೂರಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಕ್ಕೆ ಜೂನ್ ಗಡುವು ನೀಡಿದ್ದರು. ಒಂದು ವೇಳೆ ಸರಕಾರ ಉದಾಸೀನತೆ, ನಿರ್ಲಕ್ಷ್ಯ ತೋರಿದರೆ ಹೋರಾಟದ ರೂಪುರೇಷ ಸಿದ್ಧಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:42 pm, Thu, 20 June 24