ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2024 | 7:13 PM

ಕರ್ನಾಟಕದೆಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪೌರ ಕಾರ್ಮಿಕರಿಗೆ ವಾರಕ್ಕೆ ಒಂದು ದಿನ ಪೂರ್ತಿ ರಜೆ ನೀಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಸರ್ಕಾರ ಪೌರ ಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಆದ್ರೆ, ಸಂಪೂರ್ಣ ಒಂದು ದಿನ ರಜೆಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.

ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ
ಪೌರ ಕಾರ್ಮಿಕರು
Follow us on

ಬೆಂಗಳೂರು, (ಜುಲೈ 02): ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವಾರಕ್ಕೆ ಒಂದು ದಿನ ಪೂರ್ತಿ ರಜೆ ನೀಡಲಾಗಿದೆ. ಹೌದು… ಪೌರ ಕಾರ್ಮಿಕರಿಗೆ ವಾರಕ್ಕೆ ಒಂದು ದಿನ ಪೂರ್ತಿ ರಜೆ ನೀಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಈವರೆಗೆ ಪೌರಕಾರ್ಮಿಕರಿಗೆ ವಾರದಲ್ಲಿ ಎರಡು ಬಾರಿ ಅರ್ಧ ದಿನದ ರಜೆ ನೀಡಲಾಗುತ್ತಿತ್ತು. ಇದರಿಂದ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರದ ಒಂದು ದಿನ ಸಂಪೂರ್ಣ ರಜೆ ನೀಡಬೇಕು ಎಂದು ಪೌರ ಕಾರ್ಮಿಕರು ಮನವಿ ಮಾಡಿದ್ದರು. ಇದೀಗ ನಗರಾಭಿವೃದ್ಧಿ ಇಲಾಖೆ ಪೌರ ಕಾರ್ಮಿಕರ ಮನವಿಗೆ ಸ್ಪಂದಿಸಿದ್ದು, ನಿತ್ಯದ ಕೆಲಸಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಂಡು ಇಡೀ ದಿನದ ರಜೆ ನೀಡಲು ಆದೇಶಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಅಬ್ಬರ; ಸಿಲಿಕಾನ್ ಸಿಟಿಗೆ ಕಾದಿದ್ಯಾ ಸೆಪ್ಟೆಂಬರ್ ಗಂಡಾಂತರ..?

ಷರತ್ತುಗಳೇನು?

  • ದಿನನಿತ್ಯದ ಸ್ವಚ್ಛತಾ ಕೆಲಸ, ಕಾರ್ಯಗಳಿಗೆ ತೊಂದರೆಯಾಗದಂತೆ ಶೇ.85 ಹಾಜರಾತಿ ಖಚಿತಪಡಿಸಿಕೊಂಡು ಒಂದು ರಜೆ ನೀಡುವುದು.
  • ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಿಸಿರುವ ಸಿಬ್ಬಂದಿಗೆ ವಾರದ ರಜೆ ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಆ ಕಾರ್ಯಕ್ಕೆ ನಿಯೋಜಿಸುವ ಮೇರೆಗೆ ರಜೆಯ ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಲು ಅವಕಾಶ ಕಲ್ಪಿಸಬಹುದು.
  • ವಾರದ ರಜೆಯನ್ನು ನೌಕರರು, ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ ಒಂದು ವಾರದ ಒಂದು ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ.
  • ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ ಸಮಾರಂಭಗಳ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೂ ಈ ಸಂದರ್ಭದಲ್ಲಿ ವಾರದ ರಜೆ ನೀಡುವ ಅಧಿಕಾರ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ.
  • ರಜೆಯ ಮೇಲೆ ತೆರಳಿದ ನೌಕರ, ಪೌರ ಕಾರ್ಮಿಕರ ವ್ಯಾಪ್ತಿಗೆ ಸೇರಿದ ಪ್ರದೇಶದ ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸಕ್ಕೆ ಹಾಜರಾಗಿರುವ ಇತರೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು.
  • ಪ್ರಸ್ತುತ ಪೌರ ಕಾರ್ಮಿಕರಿಗೆ ವಾರಕ್ಕೆ ಎರಡು ಬಾರಿ ಅರ್ಧ ದಿನ ರಜೆ ನೀಡಲಾಗುತ್ತಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ನೀಡಲಾಗುತ್ತಿತ್ತು, ಇದೀಗ ವಾರದಲ್ಲಿ ಒಂದು ದಿನ ಪೂರ್ತಿ ರಜೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ