
ಬೆಂಗಳೂರು, (ಜೂನ್ 22): ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ (Electricity Connection) ಕಾಯುತ್ತಿರುವವರಿಗೆ ಕೊನೆಗೂ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಒಸಿಯಿಂದ (Occupancy Certificate (OC)) ವಿನಾಯಿತಿ ನೀಡಿ ಡಿಕೆ ಶಿವಕುಮಾರ್ (DK Shivakumar) ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಪ್ರಕರಣಗಳಿಗೆ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ, ವಿನಾಯಿತಿ ನೀಡಿ ಇಂಧನ ಇಲಾಖೆ ಆದೇಶಿಸಿದ್ದು, ಅರ್ಹರು ಅರ್ಜಿ ಸಲ್ಲಿಕೆಗೆ 15 ದಿನಗಳವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ವಿನಾಯಿತಿ 31 ಮೇ 2026ರೊಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವವರು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವವರು ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಳಿಸಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಇಂತಹ ಅರ್ಜಿದಾರರಿಗೆ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದು ಬಾರಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿದ್ಯುತ್ ಸಂಪರ್ಕಕ್ಕೆ ವಿನಾಯಿತಿ ದೊರೆಯಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮಹಾನಗರ ಪಾಲಿಕೆಗಳ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಈ ಆದೇಶ ಅನ್ವಯವಾಗಲಿದೆ. 2400 ಚದರ ಅಡಿಗಳವರೆಗಿನ ಅಳತೆಯ ನಿವೇಶನಗಳ ವಸತಿ ಕಟ್ಟಡಗಳು, ಜೊತೆಗೆ ಜಿ+3 ಅಥವಾ ಸ್ಟಿಲ್ಟ್ ಪಾರ್ಕಿಂಗ್+4 ಮಹಡಿಗಳ ವಸತಿ ಕಟ್ಟಡಗಳಿಗೆ ನಿಯಮ ಅನ್ವಯಿಸುತ್ತದೆ. ಗ್ರಾಮೀಣ ಭಾಗದ ರೈತರ ಮನೆ, ತೋಟದ ಮನೆ, ಕೃಷಿ ಉಪಕರಣದ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೂ ವಿನಾಯಿತಿ ನೀಡಲಾಗಿದ್ದು, 15 ದಿನಗಳ ಒಳಗೆ ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಭಾವಚಿತ್ರ ಮತ್ತು ಜಿಪಿಎಸ್ ದಾಖಲೆಯನ್ನು ಅರ್ಜಿ ಜೊತೆಗೆ ಸಲ್ಲಿಸಬೇಕು.
ಇನ್ನು, ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ, ರೇಷ್ಮೆ ಗೂಡಿನ ಮನೆ – ಇವುಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ, ವಿನಾಯಿತಿ ನೀಡಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲು ತೀರ್ಮಾನಿಸಲಾಗಿದೆ. ಇನ್ನು ಈ ನಿರ್ಧಾರದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆ ಸುಗಮವಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಜೂನ್ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2400 ಚದರ್ ಅಡಿಗಳವರೆಗೆ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ನಿವೇಶನಗಳಲ್ಲಿ ನಿರ್ಮಿಸಲಾದ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ವಿಶೇಷ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು.