
ಬೆಂಗಳೂರು, ಅಕ್ಟೋಬರ್ 01: ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ಗೆ (Shakti Scheme) ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಅವಾರ್ಡ್ ಗರಿ ಲಭಿಸಿದೆ. 500 ಕೋಟಿ ಮಹಿಳಾ ಉಚಿತ ಪ್ರಯಾಣ ಬೆನ್ನಲ್ಲೇ ಶಕ್ತಿ ಯೋಜನೆ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆ ಆಗಿದೆ. ಈ ಹಿನ್ನೆಲೆ ಮಹಿಳಾ ಪ್ರಯಾಣಿಕರು ಸೇರಿದಂತೆ ನಾಲ್ಕು ನಿಗಮಗಳ ಅಧಿಕಾರಿ, ಸಿಬ್ಬಂದಿ, ಕಾರ್ಮಿಕ ಮುಖಂಡರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಧನ್ಯವಾದ ತಿಳಿಸಿದ್ದಾರೆ.
ಶಕ್ತಿ ಯೋಜನೆ ವಿಶ್ವ ದಾಖಲೆಗೆ ಸೇರ್ಪಡೆಗೊಂಡ ಬಗ್ಗೆ ಕೆಎಸ್‌ಆರ್‌ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ 2023 ಜೂನ್ 11 ರಂದು ಪ್ರಾರಂಭಿಸಿದ್ದ ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಾಲ್ಕು ಸಾರಿಗೆ ಸಂಸ್ಥೆಯಲ್ಲಿ ಉಚಿತವಾಗಿ ಮಹಿಳೆಯರು 500 ಕೋಟಿಗೂ ಹೆಚ್ಚು ಪ್ರಯಾಣ ಮಾಡಿದ್ದಾರೆ.
ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ. ಶಕ್ತಿ ಯೋಜನೆ ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವುದು ಶಕ್ತಿ ಯೋಜನೆಯ ಯಶಸ್ಸು ಬಿಂಬಿಸಿದೆ. ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಈ ಹಿನ್ನೆಲೆ ನಾಲ್ಕು ನಿಗಮಗಳ ಅಧಿಕಾರಿ, ಸಿಬ್ಬಂದಿ, ಕಾರ್ಮಿಕ ಮುಖಂಡರು ಮತ್ತು ಮಹಿಳಾ ಪ್ರಯಾಣಿಕರಿಗೂ ಸಚಿವ ರಾಮಲಿಂಗಾರೆಡ್ಡಿ ಧನ್ಯವಾದ ತಿಳಿಸಿದ್ದಾರೆ.
ಶಕ್ತಿ ಯೋಜನೆ ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರ್ಪಡೆಗೊಂಡಿದೆ. ಇತ್ತೀಚೆಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ತಮ್ಮ ಸರ್ಕಾರದ ಶಕ್ತಿ ಯೋಜನೆಗೆ ದೊರೆತ ಪ್ರಮಾಣಪತ್ರವನ್ನು ಅವರಿಗೆ ತೋರಿಸಿ ಸಂಭ್ರಮ ಹಂಚಿಕೊಂಡಿದ್ದರು.
🚍 ಶಕ್ತಿ ಯೋಜನೆ = ವಿಶ್ವ ದಾಖಲೆ ✨
ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರನ್ನು ಭೇಟಿಯಾಗಿ, ನಮ್ಮ ಸರ್ಕಾರದ ಶಕ್ತಿ ಯೋಜನೆಗೆ ದೊರೆತ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಅವರಿಗೆ ತೋರಿಸಿ ಸಂಭ್ರಮ ಹಂಚಿಕೊಂಡ ಸುಂದರ ಕ್ಷಣ.
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಕರ್ಯ ಒದಗಿಸಿರುವ ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಪ್ರಯಾಣಗಳು… pic.twitter.com/D9fsrbxwbE
— Ramalinga Reddy (@RLR_BTM) September 8, 2025
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಕರ್ಯ ಒದಗಿಸಿರುವ ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಪ್ರಯಾಣಗಳು ನಡೆದಿದ್ದು, ಈ ಅಪೂರ್ವ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವ ವಿಶ್ವ ದಾಖಲೆ ಆಗಿದೆ ಎಂದು ಅವರು ಟ್ವೀಟ್ ಮಾಡಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:35 am, Wed, 1 October 25