ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮಾಜದ ಮುಖಂಡರು ಸಂಭ್ರಮಿಸುತ್ತಿದ್ದಾರೆ.
ಚಿತ್ರದುರ್ಗ: ಎಸ್ಸಿ ಮತ್ತು ಎಸ್ಟಿ ಮೀಸಲಾತಿ (SC/ST reservation) ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ (Thawar Chand Gehlot) ಅವರು ಅಂಕಿತ ಹಾಕಿದ್ದು, ರಾಜ್ಯದಾದ್ಯಂತ ಸಮುದಾಯದ ಜನರು ಸಂಭ್ರಮಿಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಎಸ್ಸಿ ಮತ್ತು ಎಸ್ಟಿ ಸಮಾಜದ ಮುಖಂಡರು ಸಂಭ್ರಮಿಸುತ್ತಿದ್ದು, ನಗರದ ಒನಕೆ ಓಬವ್ವ ವೃತ್ತದಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಇದೇ ವೇಳೆ ವಾಲ್ಮೀಕಿ ಭಾವಚಿತ್ರ ಹಿಡಿದು ಜೈಕಾರ ಘೋಷಣೆಗಳನ್ನು ಕೂಗಿದರು.
ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೀಸಲು ಹೆಚ್ಚಳ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದೇವೆ. ಸುಗ್ರೀವಾಜ್ಞೆಯನ್ನು ಉಭಯ ಸದನದಲ್ಲಿ ಮಂಡನೆ ಮಾಡುತ್ತೇವೆ. ವಿಧೇಯಕ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು. ಬಳಿಕ ಸದನದಲ್ಲಿ ಬಿಲ್ ಪಾಸ್ ಮಾಡಲಾಗುವುದು ಎಂದರು. ಪಂಚಮಸಾಲಿ ಸಮುದಾಯದಿಂದ 2ಎ ಮೀಸಲಾತಿಗೆ ಆಗ್ರಹಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಮೀಸಲಾತಿ ಬಗ್ಗೆ ಬೇರೆ ಬೇರೆ ಆಯೋಗದ ಚರ್ಚೆ ಹಂತದಲ್ಲಿದೆ. ಆಯೋಗದ ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮುಸ್ಲಿಮರ ಮೀಸಲಾತಿ ವಾಪಸ್ಗೆ ಕೆಲ ಶಾಸಕರ ಆಗ್ರಹ ವಿಚಾರವಾಗಿ ಹೇಳಿಕೆ ನೀಡಿದ ಅವರು, ಮುಸ್ಲಿಮರ ಮೀಸಲಾತಿ ವಾಪಸ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ಶಾಸಕರು ಹೇಳಿದ್ದು ವೈಯಕ್ತಿಕ ಅಭಿಪ್ರಾಯ ಅಷ್ಟೇ. ಮುಸ್ಲಿಂ ಮೀಸಲಾತಿ ಬಗ್ಗೆ ಸಂವಿಧಾನದಡಿ ಚರ್ಚೆ ನಡೆಯಲಿದೆ ಎಂದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ