ಕರ್ನಾಟಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಖಾಲಿ, ಸಿಬ್ಬಂದಿಗೂ ಕೊರತೆ

|

Updated on: Dec 30, 2024 | 9:31 AM

ಕರ್ನಾಟಕದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ತೀವ್ರ ಕೊರತೆ ಇರುವ ಬಗ್ಗೆ ವರದಿಯಾಗಿದೆ. 2010ರಿಂದ ನೇಮಕಾತಿ ನಡೆಯದಿರುವುದು ಮತ್ತು ಅತಿಥಿ ಉಪನ್ಯಾಸಕರ ಅವಲಂಬನೆಯ ಕಾರಣ ಕೇಂದ್ರದ ಅನುದಾನ ಮತ್ತು ಮಾನ್ಯತೆ ಪಡೆಯುವಲ್ಲಿ ತೊಂದರೆ ಉಂಟಾಗುತ್ತಿದೆ. ಇದು ಶೈಕ್ಷಣಿಕ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಕರ್ನಾಟಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಖಾಲಿ, ಸಿಬ್ಬಂದಿಗೂ ಕೊರತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 30: ಕರ್ನಾಟಕ ರಾಜ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅರ್ಧದಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿಯಿದೆ. ಜತೆಗೆ ಬೋಧಕೇತರ ಸಿಬ್ಬಂದಿ ಹುದ್ದೆಗಳೂ ಖಾಲಿ ಇವೆ ಎಂದು ವರದಿಯಾಗಿದೆ. ಉಪನ್ಯಾಸಕರ ಕೊರತೆ ಬೋಧನಾ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜತೆಗೆ, ಕಾಲೇಜುಗಳು ಕೇಂದ್ರದ ಅಮೂಲ್ಯವಾದ ಅನುದಾನದಿಂದ ವಂಚಿತವಾಗುವಂತೆ ಮಾಡುತ್ತದೆ ಎನ್ನಲಾಗಿದೆ.

16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಮಂಜೂರಾದ ಉಪನ್ಯಾಸಕರ ಹುದ್ದೆಗಳು 646 ಆಗಿದ್ದು, ಅದರಲ್ಲಿ 307 ಖಾಲಿ ಇವೆ ಎಂಬುದಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ಹುದ್ದೆಗಳಿಗೆ 2010ರಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿತ್ತು.

ಉಪನ್ಯಾಸಕರ ಕೊರತೆ ಇರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಆದರೆ, ಇದರಿಂದ ಕಾಲೇಜುಗಳಿಗೆ ಎರಡು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ನಿಯಮಿತ ಉಪನ್ಯಾಸಕರು ಇಲ್ಲದಿರುವುದು ಕಾಲೇಜುಗಳು ಕೇಂದ್ರದ ಏಜೆನ್ಸಿಗಳಿಂದ ಅನುದಾನ ಪಡೆಯುವುದಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇನ್ನೊಂದು ಸಮಸ್ಯೆ ಎಂದರೆ, ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (NBA) ಪ್ರಮಾಣಪತ್ರವನ್ನು ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೂರು ಸರ್ಕಾರಿ ಕಾಲೇಜುಗಳ ಪ್ರವೇಶಾತಿಯಲ್ಲಿ ಶೇ 25 ರಷ್ಟು ಕಡಿಮೆ ಮಾಡಲು ಇತ್ತೀಚೆಗೆ ಸೂಚಿಸಿತ್ತು. ಇದಕ್ಕೆ ಉಪನ್ಯಾಸಕರ ಕೊರತೆಯೇ ಕಾರಣ ಎನ್ನಲಾಗಿದೆ. ಈ ಕಾಲೇಜುಗಳು ಕೇಂದ್ರ ಯೋಜನೆಗಳಿಂದ ಯಾವುದೇ ಅನುದಾನ ಪಡೆಯುವುದನ್ನೂ ನಿರ್ಬಂಧಿಸಲಾಗಿದೆ.

2010ರ ನಂತರ ನಡೆದಿಲ್ಲ ನೇಮಕಾತಿ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2010 ರ ನಂತರ ಯಾವುದೇ ನೇಮಕಾತಿ ನಡೆದಿಲ್ಲ. ನಿವೃತ್ತಿ, ಮರಣ ಮತ್ತು ಸ್ವಯಂ ನಿವೃತ್ತಿಯಿಂದಾಗಿ ಖಾಲಿಯಾದ ಹುದ್ದೆಗಳಿಗೂ ಸಹ ನೇಮಕಾತಿ ನಡೆದಿಲ್ಲ. ಆ ಹುದ್ದೆಗಳನ್ನು ಭರ್ತಿ ಮಾಡಲು ಸಹ ನಾವು ಆರ್ಥಿಕ ಇಲಾಖೆಯ ಅನುಮೋದನೆಯನ್ನು ಪಡೆಯಬೇಕಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ಅತಿಥಿ ಉಪನ್ಯಾಸಕರಿಂದ ಬದ್ಧತೆ ನಿರೀಕ್ಷೆ ಅಸಾಧ್ಯ

ಅತಿಥಿ ಉಪನ್ಯಾಸಕರಿಂದ ನಾವು ಬದ್ಧತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರಿಗೆ ಶೈಕ್ಷಣಿಕೆ ವರ್ಷದ ಮಧ್ಯದಲ್ಲಿ ಉತ್ತಮ ಸಂಬಳದ ಉದ್ಯೋಗದ ಆಫರ್ ದೊರೆತರೆ ಅವರು ಕೆಲಸ ಬಿಡುತ್ತಾರೆ. ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿರುವುದಿಲ್ಲ. ಕಂಪ್ಯೂಟರ್ ಸೈನ್ಸ್​​ನಂತಹ ಕೆಲವು ವಿಷಯಗಳಿಗೆ, ಅತಿಥಿ ಉಪನ್ಯಾಸಕರನ್ನು ಪಡೆಯುವುದೂ ಕಷ್ಟವಾಗಿದೆ ಎಂಬ ಶಿಕ್ಷಣ ಇಲಾಖೆಯ ಅಧಿಕಾರಿಯ ಹೇಳಿಕೆಯನ್ನೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ-ಖಾಲಿ, ಸೇವೆಗಳಿಗೆ ಹೊಡೆತ

ಲೋಕಲ್ ಇನ್​​ಸ್ಪೆಕ್ಷನ್ ಕಮಿಟಿ (ಎಲ್‌ಐಸಿ) ಭೇಟಿಯ ನಂತರ ಪ್ರತಿ ವರ್ಷ ಸರ್ಕಾರಕ್ಕೆ ಉಪನ್ಯಾಸಕರ ಕೊರತೆ ಸಂಬಂಧ ವರದಿಗಳನ್ನು ಸಲ್ಲಿಸಲಾಗುತ್ತಿದೆ. ಆದರೂ ನೇಮಕಾತಿ ವಿಚಾರದಲ್ಲಿ ಏನೂ ಪ್ರಯೋಜನವಾಗಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಧಿಕಾರಿಗಳು ತಿಳಿಸಿದ್ದಾರೆ.

ಬೋಧಕೇತರ ಹುದ್ದೆಗಳೂ ಖಾಲಿ

ಉಪನ್ಯಾಸಕರ ಹುದ್ದೆ ಮಾತ್ರವಲ್ಲದೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕೇತರ ಹುದ್ದೆಗಳೂ ಕಳೆದ 14 ವರ್ಷಗಳಿಂದ ಖಾಲಿ ಇವೆ. ಅಂಕಿಅಂಶಗಳ ಪ್ರಕಾರ, 1150 ಬೋಧಕೇತರ ಹುದ್ದೆಗಳಲ್ಲಿ 1,023 ಖಾಲಿ ಇವೆ ಎಂದು ವರದಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ