ಹೊಸದಾಗಿ 579 ಮದ್ಯದಂಗಡಿಗಳ ತೆರೆಯಲು ಶೀಘ್ರ ಅನುಮತಿ? 1500 ಕೋಟಿ ರೂ. ಆದಾಯ ಕ್ರೂಢೀಕರಣಕ್ಕೆ ಸರ್ಕಾರ ಒಲವು

ರಾಜ್ಯ ಸರ್ಕಾರಕ್ಕೆ ಒಳ್ಳೆಯ ಆದಾಯ ಸಂಗ್ರಹಿಸಿ ಕೊಡುವ ಇಲಾಖೆಯಲ್ಲಿ ಅಬಕಾರಿ ಇಲಾಖೆ ಮಹತ್ವದ ಪಾತ್ರ ವಹಿಸುತ್ತದೆ. ಮದ್ಯದ ದರವನ್ನು ಆಗಿದಾಂಗ್ಗೆ ಹೆಚ್ಚಳ ಮಾಡಿದರೂ ಎಣ್ಣೆಪ್ರಿಯರ ಕೃಪಾಕಟಾಕ್ಷದಿಂದ ಸರ್ಕಾರಕ್ಕೇನು ಪೆಟ್ಟು ಬೀಳಲ್ಲ. ಆದರೆ ಆದಾಯದ ಮತ್ತಷ್ಟು ಹೆಚ್ಚಳಕ್ಕೆ ಮುಂದಾಗಿರುವ ಸರ್ಕಾರ ಹೊಸದಾಗಿ 500ಕ್ಕೂ ಹೊಸ ಮದ್ಯದಂಗಡಿಗಳನ್ನು ತೆರೆಯಲು ಅನುಮಿತಿ ನೀಡಲು ಮುಂದಾಗಿದ್ದು, ಮದ್ಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ವಿರೋಧ ಕಟ್ಟಿಕೊಂಡಿದೆ.

ಹೊಸದಾಗಿ 579 ಮದ್ಯದಂಗಡಿಗಳ ತೆರೆಯಲು ಶೀಘ್ರ ಅನುಮತಿ? 1500 ಕೋಟಿ ರೂ. ಆದಾಯ ಕ್ರೂಢೀಕರಣಕ್ಕೆ ಸರ್ಕಾರ ಒಲವು
ಸಾಂದರ್ಭಿಕ ಚಿತ್ರ

Updated on: Nov 17, 2025 | 7:34 AM

ಬೆಂಗಳೂರು, ನವೆಂಬರ್ 17: ಅಬಕಾರಿ ಇಲಾಖೆಯು 579 ಮದ್ಯದಂಗಡಿಗಳ (Liquor Stores) ಇ-ಹರಾಜು ಪ್ರಕ್ರಿಯೆಗೆ ಮುಂದಾಗಿದೆ. ಈ ಹೊತ್ತಿನಲ್ಲೇ ಇದಕ್ಕೆ ದೊಡ್ಡ ವಿಘ್ನ ಎದುರಾಗಿದೆ. ಕೂಡಲೇ ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಯನ್ನು ಕೈಬಿಡುವಂತೆ ಬೆಂಗಳೂರು (Bengaluru) ಹೋಟೆಲ್‌ಗಳ ಸಂಘ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಪತ್ರ ಬರೆದಿದೆ. ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಅಸಮಂಜಸ ಎಂದು ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ನಮ್ಮ ರಾಜ್ಯದಲ್ಲಿ 13,972 ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಈ ಸಂದರ್ಭದಲ್ಲಿ ಹೊಸದಾಗಿ 483 2ಎ ಹಾಗೂ 96 9ಎ ಸೇರಿ 579 ಮದ್ಯದಂಗಡಿಗಳಿಗೆ ಇ-ಹರಾಜು ಮುಖಾಂತರ ಲೈಸೆನ್ಸ್‌ ನೀಡಿ ಅಂದಾಜು 1,500 ಕೋಟಿ ರೂ. ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಬಾರ್​ ಮಾಲೀಕರ ಸಂಘ ಹೇಳಿದೆ. ಸಾರ್ವಜನಿಕರೂ ಕೂಡ, ಈಗಾಗಲೇ ಮದ್ಯದಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಮತ್ತಷ್ಟು ಏರಿಕೆಯಾಗುವುದು ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಐಎಸ್​ಸಿಯಲ್ಲಿ ಹೊಸ ಹಾಜರಾತಿ ನೀತಿ RFID; ಹಾಗೆಂದರೇನು ಗೊತ್ತಾ?

ಈ ಬಾರಿ ಅಬಕಾರಿ ಶುಲ್ಕವನ್ನು ಶೇ 50 ರಷ್ಟು ಏರಿಕೆ ಮಾಡಿರುವುದು ಕೂಡ ಮದ್ಯದಂಗಡಿ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇತ್ತ ವ್ಯಾಪಾರದ ಮೇಲೆಯೂ ಹೊಡೆತ ನೀಡಿದೆ. ವ್ಯಾಪಾರ ಕುಂಠಿತವಾಗಿದೆ. ಈ ಮಧ್ಯೆ ಹೊಸದಾಗಿ 579 ಹೊಸ ಮದ್ಯದಂಗಡಿಗಳನ್ನು ತೆರೆದರೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದು ಅವರ ಆತಂಕ. ಸರ್ಕಾರ ಇದನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ