ಬೆಂಗಳೂರಿನ ಐಐಎಸ್ಸಿಯಲ್ಲಿ ಹೊಸ ಹಾಜರಾತಿ ನೀತಿ RFID; ಹಾಗೆಂದರೇನು ಗೊತ್ತಾ?
ಬೆಂಗಳೂರಿನ ಐಐಎಸ್‌ಸಿ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ RFID ಹಾಜರಾತಿ ನೀತಿ ಜಾರಿಯಾಗಿದೆ. RFID ರೇಡಿಯೋ ತರಂಗಗಳ ಮೂಲಕ ಟ್ಯಾಗ್‌ಗಳನ್ನು ಓದಿ ವಸ್ತುಗಳನ್ನು ಗುರುತಿಸುವ ಒಂದು ವಿಧಾನವಾಗಿದೆ. ಇದು ಯಾವುದೇ ಭೌತಿಕ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಇದರಿಂದ ವೇಗವಾದ ಮತ್ತು ನಿಖರವಾದ ಟ್ರ್ಯಾಕಿಂಗ್ ಸಾಧ್ಯವಿದ್ದು, ಈಗಾಗಲೇ ಹಲವಾರು ಹೋಟೆಲ್ಗಳಲ್ಲಿ, ಮಾಲ್ಗಳಲ್ಲಿ ಮತ್ತು ಕಚೇರಿಗಳಲ್ಲಿ ಈ RFID ತಂತ್ರಜ್ಞಾನ ಬಳಕೆಯಲ್ಲಿದೆ.

ಬೆಂಗಳೂರು, ನವೆಂಬರ್ 16: ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC) ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಎಂಜಿನಿಯರಿಂಗ್ ವಿಭಾಗ (ESE) ಹೊಸ ಹಾಜರಾತಿ ನೀತಿ ಜಾರಿಯಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಗುರುತಿಸಲು ನವೆಂಬರ್ 1ರಿಂದ RFID ಎಂಬ ತಂತ್ರಜ್ಞಾನವನ್ನು ಬಳಸಲು ಶುರುಮಾಡಿದೆ. ಈಗಾಗಲೇ ಹಲವು ಹೋಟೆಲ್ಗಳಲ್ಲಿ, ಮಾಲ್ಗಳಲ್ಲಿ ಮತ್ತು ಕಚೇರಿಗಳಲ್ಲಿ ಈ RFID ತಂತ್ರಜ್ಞಾನ ಬಳಕೆಯಲ್ಲಿದ್ದು, ಇದೀಗ IISC ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳ ಹಾಜರಾತಿಯನ್ನು ಅಳೆಯಲು ಈ ವ್ಯವಸ್ಥೆಯನ್ನು ಬಳಸುತ್ತಿದೆ.
ಏನಿದು RFID ತಂತ್ರಜ್ಞಾನ?
RFID ಎಂದರೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (Radio Frequency Identification).ರೇಡಿಯೋ ತರಂಗಗಳ ಮೂಲಕ ವಸ್ತುಗಳನ್ನು ಗುರುತಿಸುವ ತಂತ್ರಜ್ಞಾನ ಇದಾಗಿದೆ. ಇದು ಯಾವುದೇ ಭೌತಿಕ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುವುದರಿಂದ ಸಾಮಾನ್ಯವಾಗಿ ಬಳಸುವ ಬಾರ್ಕೋಡ್‌ಗಿಂತ ವೇಗವಾಗಿಯೂ, ಸುಲಭವಾಗಿಯೂ ಹಾಜರಾತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಯುದ್ಧ ವಿಮಾನಗಳು ವೈರಿಗಳದ್ದೋ ಅಥವಾ ತಮಗೆ ಸೇರಿದ್ದೋ ಎಂಬುದನ್ನು ಕಂಡು ಹಿಡಿಯಲು ಬ್ರಿಟಿಷ್ ರಾಯಲ್ ಏರ್ಫೋರ್ಸ್ ಮೊಟ್ಟ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಿತ್ತು.ಆ ಸಮಯದಲ್ಲಿ ಬಳಸುತ್ತಿದ್ದ ತಂತ್ರಜ್ಞಾನಕ್ಕೆ IFF (ಐಡೆಂಟಿಫಿಕೇಶನ್ ಆಫ್ ಫ್ರೆಂಡ್ ಆರ್ ಫೋ) ಎಂದು ಕರೆಯಲಾಗುತ್ತಿತ್ತು. ನಂತರ 1970 ರ ಸಮಯದಲ್ಲಿ ಅಮೇರಿಕನ್ ಎಂಜಿನಿಯರ್ ಮಾರಿಯೋ W ಕಾರ್ಡುಲ್ಲೊ RFID ಟ್ಯಾಗ್‌ಗಾಗಿ ಅಮೆರಿಕದ ಮೊದಲ ಪೇಟೆಂಟ್ ಅನ್ನು ಪಡೆದರು. ಅದೇ ವರ್ಷದಲ್ಲಿ, ಕ್ಯಾಲಿಫೋರ್ನಿಯಾದ ಉದ್ಯಮಿ ಚಾರ್ಲ್ಸ್ ವಾಲ್ಟನ್, ಕೀಲಿ ರಹಿತ ಬಾಗಿಲು-ಲಾಕಿಂಗ್ ವ್ಯವಸ್ಥೆಗಾಗಿ ಪೇಟೆಂಟ್ ಪಡೆದರು.
ಇದನ್ನೂ ಓದಿ Mobile Price Hike: ಹೊಸ ಸ್ಮಾರ್ಟ್‌ಫೋನ್ ಬೇಕಿದ್ರೆ ಬೇಗ ಖರೀದಿಸಿ: ಸದ್ಯದಲ್ಲೇ ದುಬಾರಿಯಾಗಲಿವೆ ಮೊಬೈಲ್ ಬೆಲೆ
RFID ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
RFIDಯಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು ಇಲ್ಲಿ ಅಳವಡಿಸಲಾದ RFID ರೀಡರ್ ಮತ್ತು ಇನ್ನೊಂದು RFID ಟ್ಯಾಗ್.RFID ರೀಡರ್ ಅನ್ನು ಬಾಗಿಲಿಗೆ ಅಳವಡಿಸಲಾಗುತ್ತದೆ. ಟ್ಯಾಗ್ ಆಂತರಿಕವಾಗಿ ಒಂದು ಚಿಪ್ ಅನ್ನು ಹೊಂದಿರುತ್ತದೆ.ಈ ಟ್ಯಾಗ್ ಅನ್ನು ರೀಡರ್‌ನ ಹತ್ತಿರ ತಂದಾಗ, ರೀಡರ್ ವಿದ್ಯುತ್ಕಾಂತೀಯ ವಿಕಿರಣವನ್ನು ರವಾನಿಸುತ್ತದೆ. ಅದು ಚಿಪ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಚಿಪ್ ಡಿಜಿಟಲ್ ರೂಪದಲ್ಲಿ ಡೇಟಾವನ್ನು ಸಂಗ್ರಹಿಸುತ್ತದೆ. ಅದು ನಿರ್ದಿಷ್ಟ ಕೊಠಡಿಯ ನಂಬರ್‌ನ ಅನ್‌ಲಾಕ್ ಕೋಡ್‌ಗೆ ಸಂಬಂಧಿಸಿದ್ದಾಗಿರುತ್ತದೆ.
ಟ್ಯಾಗನ್ನು ರೀಡರ್ ಸಮೀಪ ತಂದಾಗ ಆ ಟ್ಯಾಗ್ ನಿರ್ದಿಷ್ಟ ಡಿಜಿಟಲ್ ಡೇಟಾವನ್ನು ರೇಡಿಯೋ ತರಂಗಗಳ ರೂಪದಲ್ಲಿ ಹಿಂತಿರುಗಿಸುತ್ತದೆ. ರೀಡರ್ ಅದನ್ನು ಓದಿ ಡೇಟಾಬೇಸ್‌ಗೆ ಕಳುಹಿಸುತ್ತದೆ. ಡೇಟಾಬೇಸ್‌ನಲ್ಲಿ ಇದು ಮಾನ್ಯವಾದ ಕೋಡ್ ಎಂದು ಕಂಡುಬಂದಾಗ, ಅದು ಬಾಗಿಲನ್ನು ಅನ್‌ಲಾಕ್ ಮಾಡುತ್ತದೆ. ಆ ಮಾಹಿತಿ ನಂತರ ಕಂಪ್ಯೂಟರ್‌ನಲ್ಲಿ ಸಂಸ್ಕರಣೆಯಾಗುತ್ತದೆ. ಬಾರ್ಕೋಡ್‌ಗಳಿಗಿಂತ ಭಿನ್ನವಾಗಿ, RFID ಗೆ ಲೈನ್-ಆಫ್-ಸೈಟ್ ಬೇಕಾಗಿಲ್ಲ. ಅದು ಒಟ್ಟಿಗೆ ಅನೇಕ ಟ್ಯಾಗ್‌ಗಳನ್ನು ಓದಬಲ್ಲದು.ಒಟ್ಟಾರೆ, RFID ತಂತ್ರಜ್ಞಾನ ಹಲವು ಕ್ಷೇತ್ರಗಳಲ್ಲಿ ಟ್ರಾಕಿಂಗ್, ಭದ್ರತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿಶಾಲಿ ಸಾಧನವಾಗಿದೆ.
ಈ ವ್ಯವಸ್ಥೆ ಯಾವೆಲ್ಲಾ ದೋಷಗಳನ್ನು ಹೊಂದಿದೆ?
RFID ತಂತ್ರಜ್ಞಾನದಲ್ಲಿ ಕೆಲ ಪ್ರಮುಖ ದೋಷಗಳೂ ಇವೆ. RFID ಟ್ಯಾಗ್‌ಗಳು ಮತ್ತು ರೀಡರ್‌ಗಳ ವೆಚ್ಚ ಸಾಮಾನ್ಯ ಬಾರ್ಕೋಡ್‌ಗಳಿಗೆ ಹೋಲಿಸಿದರೆ ಹೆಚ್ಚಾಗಿದೆ.ಅಷ್ಟೇ ಅಲ್ಲದೆ ರೇಡಿಯೋ ತರಂಗಗಳ ಹಸ್ತಕ್ಷೇಪದಿಂದಾಗಿ ಕೆಲವೊಮ್ಮೆ ಓದುವಿಕೆ ಸರಿಯಾಗಿ ನಡೆಯದೇ ತಪ್ಪು ಡೇಟಾ ಸಂಗ್ರಹಣೆಯಾಗಬಹುದು. ಅದರೊಂದಿಗೆ RFID ಟ್ಯಾಗ್ ಇರುವ ವಸ್ತುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾದ್ದರಿಂದ ಗೌಪ್ಯತೆಯ ಸಮಸ್ಯೆಗಳೂ ಎದುರಾಗಬಹುದು. ಲೋಹ ಮತ್ತು ದ್ರವಗಳ ಬಳಿಯಲ್ಲಿ RFID ಟ್ಯಾಗ್‌ಗಳ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆಯೂ ಇರಬಹುದು.
RFID ತಂತ್ರಜ್ಞಾನ ಬಳಸಲು ಮುಂದಾಗಿರುವ IISC ಇನ್ಸ್ಟಿಟ್ಯೂಷನ್
ವಿದ್ಯಾರ್ಥಿಗಳಿಗೆ ವಾರದಲ್ಲಿ 70–80 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಿರುವ ಸಂಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನೀತಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಸ್ಥೆಯ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ನೀತಿಯ ಅಡಿಯಲ್ಲಿ, ಖಾಯಂ ಮತ್ತು ಗುತ್ತಿಗೆ ಸಿಬ್ಬಂದಿ ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡಬೇಕು (ಊಟದ ಸಮಯವನ್ನು ಹೊರತುಪಡಿಸಿ). ಅದೇ ರೀತಿ, ಎಂಟೆಕ್ ಮತ್ತು ಮೊದಲ ವರ್ಷದ ಪಿಎಚ್‌ಡಿ ವಿದ್ಯಾರ್ಥಿಗಳು ವಾರಕ್ಕೆ ಕನಿಷ್ಠ 50 ಗಂಟೆಗಳ ಕಾಲವಾದರೂ ಸಂಸ್ಥೆಯಲ್ಲಿರಬೇಕು. ಹಿರಿಯ ಪಿಎಚ್‌ಡಿ ಸಂಶೋಧಕರು 70–80 ಗಂಟೆ ಲ್ಯಾಬ್‌ಗಳಲ್ಲಿ ಕಡ್ಡಾಯವಾಗಿ ಇರಬೇಕು. ಈ ಗಂಟೆಗಳ ಲೆಕ್ಕವನ್ನು RFID ಕಾರ್ಡ್‌ಗಳು ಮತ್ತು ಮುಖ ಗುರುತಿಸುವ ಯಂತ್ರಗಳ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
ವಿಭಾಗಾಧ್ಯಕ್ಷ ಪ್ರೊ. ಮಯಂಕ್ ಶ್ರೀವಾಸ್ತವ್, ವಿದ್ಯಾರ್ಥಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಮಧ್ಯಾಹ್ನ ಮತ್ತು ಸಂಜೆ ವೇಳೆ ಇನ್ಸ್ಟಿಟ್ಯೂಷನ್ನ ಲ್ಯಾಬ್‌ಗಳು ಖಾಲಿಯಾಗಿಬಿಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಈ ನೀತಿ ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದರ ಜೊತೆಗೆ ಆತ್ಮಹತ್ಯೆಗಳ ಪ್ರಮಾಣವನ್ನು ಹೆಚ್ಚಿಸಬಹುದೆಂದು ಈ ನೀತಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




