ಬೆಂಗಳೂರು: ಕೊರೊನಾ ಸೋಂಕು ಕೊಂಚ ಇಳಿಕೆಯತ್ತ ಮುಖಮಾಡಿರುವ ಹೊತ್ತಲ್ಲಿ ಲಾಕ್‌ಡೌನ್ ನಿಯಮ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋರ್ಟ್ ಕಾರ್ಯನಿರ್ವಹಣೆ ದಿನಗಳಲ್ಲಿ ವಕೀಲರು, ಪ್ಯಾರಾ ಲೀಗಲ್ ಸಿಬ್ಬಂದಿ ಸಂಚಾರಕ್ಕೆ ಅವಕಾಶ ನೀಡಿದೆ. ಐಡಿ ಕಾರ್ಡ್ ತೋರಿಸಿ ಓಡಾಡುವುದಕ್ಕೆ ಅವಕಾಶ ನೀಡಲಾಗಿದೆ.
ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೋರ್ಟ್ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಈ ಮೂಲಕ, ವಕೀಲರ ಕಚೇರಿಗಳಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಲಭ್ಯವಾಗಿದೆ. ಹಾಗೂ ಎಲ್ಲಾ ವಸ್ತುಗಳ ಹೋಮ್ ಡೆಲಿವರಿಗೆ ಕೂಡ ಅವಕಾಶ ನೀಡಲಾಗಿದೆ. ಇ-ಕಾಮರ್ಸ್ ಮೂಲಕ ಹೋಮ್ ಡೆಲಿವರಿ ಸಾಧ್ಯವಾಗಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿತ್ತು. ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಅದರಂತೆ, ಮೃತರ ಅಸ್ಥಿ ವಿಸರ್ಜನೆಗೆ ತೆರಳಲು ಅವಕಾಶ ನೀಡಲಾಗಿತ್ತು. ಅಸ್ಥಿ ವಿಸರ್ಜನೆಗೆ ತೆರಳಲು 4 ಜನರಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿತ್ತು.
ಆಯಾ ಧಾರ್ಮಿಕ ವಿಧಾನದಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶವಿದೆ. ಅಸ್ಥಿ ವಿಸರ್ಜನೆಗೆ ತೆರಳಲು 4 ಜನರಿಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ಕೆ ಅಡ್ಡಿಪಡಿಸದಂತೆ ಬಿಬಿಎಂಪಿ ಆಯುಕ್ತರು, ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳಿಗೆ ಸರ್ಕಾರ ಸೂಚನೆ ನೀಡಿತ್ತು.
ಮತ್ತೊಂದೆಡೆ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಜೂನ್ 7ರ ತನಕ ಹೇರಲಾಗಿರುವ ಲಾಕ್‌ಡೌನ್ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಲಾಕ್ಡೌನ್ಗೆ ಜನರ ಸ್ಪಂದನೆ ಇರುವುದರಿಂದ ಜೂನ್ ಮಧ್ಯದ ತನಕವೂ ಲಾಕ್‌ಡೌನ್ ವಿಸ್ತರಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂನ್ 5ರಂದು ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕೊರೊನಾ ಚೈನ್ ಲಿಂಕ್ ಕತ್ತರಿಸಲು ಅಧಿಕಾರಿಗಳು ಮತ್ತಷ್ಟು ದಿನದ ಕಾಲಾವಕಾಶ ಕೇಳಿದ್ದು, ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಧ್ಯವಾದಷ್ಟು ಲಾಕ್‌ಡೌನ್ ಈಗಲೇ ಮಾಡುವುದು ಉತ್ತಮ ಎಂದಿರುವ ತಜ್ಞರು. ಅನ್‌ಲಾಕ್ ಮಾಡಿ ಮತ್ತೆ ಸೋಂಕು ಹೆಚ್ಚಾದರೆ ತೊಂದರೆಯಾಗುತ್ತದೆ. ಹೀಗಾಗಿ, ಲಾಕ್‌ಡೌನ್ ವಿಸ್ತರಿಸಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು. ಶೇ.60 ರಷ್ಟು ಜನರಿಗೆ ಲಸಿಕೆ ತಲುಪಿಸಲು ತುರ್ತಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿತ್ತು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಲಾಕ್‌ಡೌನ್ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು
ಬೆಂಗಳೂರಿನಲ್ಲಿ ಲಾಕ್‌ಡೌನ್: ನಾನ್ ಯಾರ್ ಗೊತ್ತಾ..? ಮುಟ್ಟಬೇಡ ನನ್ನ ಅಂತಾ ಪೊಲೀಸರಿಗೆ ಅವಾಜ್ ಹಾಕಿದ ಯುವಕ
Published On - 6:21 pm, Wed, 26 May 21