ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚುತ್ತಿರುವ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜಧಾನಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಸಚಿವರು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ? ವ್ಯವಸ್ಥೆ ಹೇಗಿದೆ? ಎಷ್ಟು ಬೆಡ್ಗಳು ಖಾಲಿ ಇವೆ? ಎಂಬಿತ್ಯಾದಿ ವಿಚಾರಗಳನ್ನು ಪರಿಶೀಲಿಸಿದ್ದು ನಿಯಮಗಳನ್ನು ಪಾಲಿಸದ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ರೋಗಿಗಳಿಗೆ ಸಮರ್ಪಕವಾಗಿ ಬೆಡ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದ ಕಾರಣ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆ, ಕೋಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರ ಬಳಿ ರೋಗಿಗಳ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗಳ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕೊವಿಡ್‌ಗೆ ಹೆಚ್ಚಿನ ಬೆಡ್ ಮೀಸಲಿಡಲು ಸಿಬ್ಬಂದಿಗೆ ಸೂಚಿಸಿದ ಸುಧಾಕರ್ ನಿಯಮ ಉಲ್ಲಂಘನೆ ಮಾಡದಂತೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಬಗ್ಗೆ ಮಾತನಾಡಿದ ಅವರು, ಕೊವಿಡ್ ಅಲೆ ಹೋಗುವವರೆಗೂ ಕಾರ್ಯಾಚರಣೆ ನಡೆಸಲಾಗುತ್ತದೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಲಾಗುತ್ತೆ. ನನ್ನನ್ನು ಸೇರಿ ಇಡೀ ಆರೋಗ್ಯ ಇಲಾಖೆ ರಿಯಾಲಿಟಿ ಚೆಕ್ ನಡೆಸುತ್ತೆ. ಇದು ಟೀಕೆ ಮಾಡುವ ಸಮಯವಲ್ಲ. ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕಿದೆ ಎಂದು ಹೇಳಿದ್ದಾರೆ.
ಅಂತೆಯೇ, ಆಸ್ಟರ್ ಆಸ್ಪತ್ರೆ ಸಮೀಪದಲ್ಲಿ ಹೋಟೆಲ್ಗಳಿದ್ದು ಅವಶ್ಯವಿದ್ದಲ್ಲಿ ಅವುಗಳನ್ನ ಪಡೆದು ವ್ಯವಸ್ಥೆಗೊಳಿಸಲು ಸೂಚನೆ ನೀಡಿದ ಸುಧಾಕರ್, 500 ಬೆಡ್ಗಳ ಸಾಮರ್ಥ್ಯ ಇರುವ ಆಸ್ಪತ್ರೆ ಇದಾಗಿದ್ದು, 170ರಿಂದ200 ಕೊವಿಡ್ ಬೆಡ್ಗಳನ್ನು ಮೀಸಲಿಡುವಂತೆ ತಿಳಿಸಿದ್ದಾರೆ. ಜೊತೆಗೆ, ಒಟ್ಟು 150 ಐಸಿಯು ಸಹಿತ ಬೆಡ್ ಸ್ಥಾಪನೆಗೆ ಸೂಚನೆಯನ್ನೂ ನೀಡಿದ್ದಾರೆ. BU ನಂಬರ್ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ತಿಳಿಸಿದ ಸಚಿವರು ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಲು ಎಚ್ಚರಿಸಿದ್ದಾರೆ.
ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲೂ ಬೆಡ್ಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಸಮರ್ಪಕವಾಗಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಒಟ್ಟು 148 ಕೊವಿಡ್ ಹಾಸಿಗೆಯುಳ್ಳ ಈ ಆಸ್ಪತ್ರೆಯಲ್ಲಿ 74 ಹಾಸಿಗೆಗಳನ್ನು ಸರ್ಕಾರಕ್ಕೆ ರಿಸರ್ವ್ ಮಾಡಬೇಕಿದ್ದು, ಸದ್ಯ 51 ಬೆಡ್ ಕೊಟ್ಟು ಇನ್ನುಳಿದ ಕೆಲ ಬೆಡ್ಗಳ ಮಾಹಿತಿ ಸರಿಯಾಗಿ ನೀಡದ ಹಿನ್ನೆಲೆಯಲ್ಲಿ ಎಚ್ಚರಿಕೆ ರವಾನಿಸಿದ್ದಾರೆ. ಬ್ಯಾಪಿಸ್ಟ್ ಆಸ್ಪತ್ರೆಗೆ ಡಾ.ಕೆ.ಸುಧಾಕರ್ ಭೇಟಿ ನೀಡಿದ ಸಂದರ್ಭದಲ್ಲಿ, ಕೊವಿಡ್ ರೋಗಿಯೊಬ್ಬರ ಪತ್ನಿ ಆಸ್ಪತ್ರೆಗಳ ಕರ್ಮಕಾಂಡದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಸಚಿವರ ಬಳಿ ಮಹಿಳೆ ಅಳಲು
ಬೆಳಗಿನಿಂದ ಆರೇಳು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ ಕೊವಿಡ್ ರೋಗಿಯನ್ನು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಲಾಗುತ್ತಿದೆ. ಲಿಸ್ಟ್ ಹಿಡಿದು ಕರೆ ಮಾಡಿ, ಮಾಡಿ ಹೈರಾಣಾಗಿದ್ದೇವೆ. ಪತಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆತಂದು ದಾಖಲಿಸಲು ಮನವಿ ಮಾಡಿಕೊಂಡೆವು ಎಂದು ತಾವು ಅನುಭವಿಸಿದ ಕಷ್ಟದ ಬಗ್ಗೆ ವಿವರಿಸಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ರ‍್ಯಾಪಿಡ್ ಟೆಸ್ಟ್ ನಡೆಸಿ ರಿಪೋರ್ಟ್ ನೀಡಲು ಮೂರು ಸಾವಿರ ವಸೂಲಿ ಮಾಡಿದ ಕುರಿತೂ ದೂರಿದ್ದಾರೆ. ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದ ಆಸ್ಪತ್ರೆ ಸಿಬ್ಬಂದಿ BU ನಂಬರ್ ಜನರೇಟ್ ಆಗಿಲ್ಲವೆಂದು ಹೇಳಿದ್ದಾರೆ. ಕೊನೆಗೆ ರೋಗಿಯನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುವಂತೆ ಸುಧಾಕರ್ ಸೂಚಿಸಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ವರದಿ ಬಗ್ಗೆ ಮಾತನಾಡಿ, ಈಗಾಗಲೇ ವರದಿ ಬಂದಿದೆ. ಇಂದು ಅದನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ನಮಗಿಂತ ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳಿವೆ. ರಾಜಸ್ಥಾನದಲ್ಲಿ 35-40 ಸಾವಿರ ಟೆಸ್ಟ್ಗೆ 12 ಸಾವಿರ ಪಾಸಿಟಿವ್ ಬಂದಿದೆ. ಆದರೆ, ನಮ್ಮಲ್ಲಿ 1.30 ಲಕ್ಷ ಟೆಸ್ಟ್ಗೆ 14 ಸಾವಿರ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆ ಮೀಸಲಿಡುವಂತೆ ಕಟ್ಟುನಿಟ್ಟಿನ ಸೂಚನೆ: ಕೆ.ಸುಧಾಕರ್
(Karnataka Health minister Dr K Sudhakar visit private hospitals late night to check about facilities to control Covid 19)