ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆ ಮೀಸಲಿಡುವಂತೆ ಕಟ್ಟುನಿಟ್ಟಿನ ಸೂಚನೆ: ಕೆ.ಸುಧಾಕರ್​

ಇಂದು ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಸಚಿವ ಡಾ ಕೆ. ಸುಧಾಕರ್​, ಸರಕಾರಿ ಆಸ್ಪತ್ರೆಗಳಲ್ಲಿ ಕೊವಿಡ್​ ರೋಗಿಗಳಿಗೆ ಹಾಸಿಗೆಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಮತ್ತು ಖಾಸಗೀ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯ ಹಾಸಿಗೆಗಳನ್ನು ಸರಕಾರದ ಸುಪರ್ದಿಗೆ ನೀಡಬೇಕು ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಿಗೂ ಹಾಸಿಗೆ ಮೀಸಲಿಡುವಂತೆ ಕಟ್ಟುನಿಟ್ಟಿನ ಸೂಚನೆ: ಕೆ.ಸುಧಾಕರ್​
ಡಾ.ಕೆ. ಸುಧಾಕರ್​
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2021 | 9:54 PM

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಕೊರೊನಾಗೆ ಮೀಸಲಿಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಹಾಸಿಗೆ ಮೀಸಲಿಡದಿದ್ದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 400ಕ್ಕೂ ಹೆಚ್ಚು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ನೀಡಿದೆ. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯನ್ನು ಕೊವಿಡ್​ಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ವಿಕ್ಟೋರಿಯಾದಲ್ಲಿ 300 ಹಾಸಿಗೆ ಕೋವಿಡ್ ಮೀಸಲಿದ್ದು, ಎರಡು ದಿನದೊಳಗೆ 500 ಕ್ಕೆ ಏರಿಸಲು ಸೂಚಿಸಲಾಗಿದೆ. ಬೌರಿಂಗ್ ನಲ್ಲಿ 300 ಹಾಸಿಗೆ, ಚರಕ ಆಸ್ಪತ್ರೆಯಲ್ಲಿ ಎರಡು ದಿನದೊಳಗೆ 150 ಹಾಸಿಗೆ, ಘೋಷಾ ಆಸ್ಪತ್ರೆಯಲ್ಲಿ 100 ಹಾಸಿಗೆ, ಕೆ.ಸಿ.ಜನರಲ್ ನಲ್ಲಿ 100 ಹಾಸಿಗೆ ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ಗೆ ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ 15 ದಿನಗಳಿಂದ ಕೋರುತ್ತಿದ್ದರೂ ಕೆಲವು ಆಸ್ಪತ್ರೆಗಳು 15-20% ಹಾಸಿಗೆ ಮಾತ್ರ ನೀಡಿವೆ. ಇನ್ನು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳದಿದ್ದರೆ, ಕಳೆದ ವರ್ಷದಂತೆಯೇ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನ್ ಕೋವಿಡ್ ರೋಗಿಗಳಲ್ಲಿ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ಆದರೂ ಈಗ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಹೋಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು. ಕಾರ್ಪೊರೇಟ್ ಆಸ್ಪತ್ರೆಗಳು ಈ ವ್ಯವಸ್ಥೆ ಮಾಡಬೇಕು. ಗಂಭೀರ ರೋಗಿಗಳಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಕೋವಿಡ್ ಹೆಚ್ಚಳ ಅಂದಾಜು, ಕೈಗೊಳ್ಳಬೇಕಾದ ಕ್ರಮಗಳು ಮೊದಲಾದವುಗಳನ್ನೊಳಗೊಂಡಂತೆ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಲಿದೆ. ಇದನ್ನು ಮುಖ್ಯಮಂತ್ರಿಗಳಿಗೆ ನೀಡಿದ ಬಳಿಕ ಚರ್ಚೆಯಾಗಲಿದೆ. ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಚಿತಾಗಾರಗಳ ಸಮಸ್ಯೆ ಸಂಬಂಧ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ನಿನ್ನೆ 14-15 ಸಾವು ಸಂಭವಿಸಿದೆ. ಅದು ಕೋವಿಡ್ ಸಾವಾಗಿರುವುದರಿಂದ ಒಂದೇ ಚಿತಾಗಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗಿದೆ. ಬೇರೆ ಬೇರೆ ಕಡೆ ಕಳುಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪಿಜಿ ವ್ಯಾಸಂಗ ಮಾಡಿದವರು ಒಂದು ವರ್ಷ ಕಡ್ಡಾಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕೆಂದು ನಿಯಮ ಇದೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ಕೈಗೊಂಡಿದೆ. ನೇಮಕ ಮಾಡುವವರೆಗೂ ಬೇರೆ ಕಡೆ ಕೆಲಸ ಮಾಡಲು ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನು ಇಲಾಖೆಯಿಂದ ಕೂಡ ಸಮ್ಮತಿ ಪಡೆಯಲು ಸೂಚಿಸಲಾಗಿದೆ ಎಂದರು.

ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!

ಲಾಕ್​ಡೌನ್​ ಮಾಡಲ್ಲ.. ಇನ್ನೂ 10 ಕೊವಿಡ್​​ ಕೇರ್​ ಸೆಂಟರ್​ ಆರಂಭಿಸ್ತೇವೆ, ಮಾರುಕಟ್ಟೆಗಳ ವಿಕೇಂದ್ರೀಕರಣ ಮಾಡ್ತೇವೆ: ಗೌರವ್ ಗುಪ್ತ

(Karnataka health minister Dr K Sudhakar says stringent action be taken against pvt hospitals who do not give beds to Covid patients)