Explainer: ವಿದೇಶಿ ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲು ತುದಿಗಾಲಲ್ಲಿ ನಿಂತಿದೆ ಭಾರತ ಸರ್ಕಾರ; ಉಂಟಾ ಏನಾದರೂ ಪ್ರಯೋಜನ?

ವಿದೇಶಗಳಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಕಂಪನಿಗಳ ಕೊರೊನಾ ಲಸಿಕೆಗಳಿಗೆ ಭಾರತದಲ್ಲಿ ನೇರವಾಗಿ ಅನುಮೋದನೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೂ ಸದ್ಯಕ್ಕೆ ವಿದೇಶಿ ಕಂಪನಿಗಳ ಲಸಿಕೆಗಳು ಎಂಟ್ರಿ ಕೊಡುವ ಲಕ್ಷಣ ಕಾಣುತ್ತಿಲ್ಲ. ಆರಂಭದಲ್ಲಿ ಭಾರತ ಸರ್ಕಾರ ಮಾಡಿಕೊಂಡ ಎಡವಟ್ಟು ಇದಕ್ಕೆ ಕಾರಣ.

Explainer: ವಿದೇಶಿ ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲು ತುದಿಗಾಲಲ್ಲಿ ನಿಂತಿದೆ ಭಾರತ ಸರ್ಕಾರ; ಉಂಟಾ ಏನಾದರೂ ಪ್ರಯೋಜನ?
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Skanda

Updated on:Apr 16, 2021 | 9:39 AM

ವಿದೇಶಗಳಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಕಂಪನಿಗಳ ಕೊರೊನಾ ಲಸಿಕೆಗಳಿಗೆ ನೇರವಾಗಿ ಅನುಮೋದನೆ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಕೇವಲ ಮೂರೇ ಮೂರು ದಿನಗಳಲ್ಲಿ ವಿದೇಶಿ ಲಸಿಕೆಗಳಿಗೆ ಅನುಮೋದನೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಕೇಂದ್ರದ ಆರೋಗ್ಯ ಇಲಾಖೆ ಆದೇಶಿಸಿದೆ. ಆದರೂ ಕೂಡ ಸದ್ಯಕ್ಕೆ ಯಾವುದೇ ವಿದೇಶಿ ಕಂಪನಿಗಳ ಕೊರೊನಾ ಲಸಿಕೆಗಳು ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುವ ಲಕ್ಷಣ ಕಾಣುತ್ತಿಲ್ಲ ಎನ್ನುತ್ತಾರೆ ‘ಟಿವಿ9 ಕನ್ನಡ’ ಸುದ್ದಿವಾಹಿನಿಯ ನ್ಯಾಷನಲ್ ಕರೆಸ್ಪಾಂಡೆಂಟ್ ಎಸ್.ಚಂದ್ರಮೋಹನ್.

ಭಾರತದಲ್ಲಿ ಕೊರೊನಾದ ಪಾಸಿಟಿವ್ ಕೇಸ್​ಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೊನಾ ಹರಡುತ್ತಿರುವುದು ಅಂಕಿಅಂಶಗಳಿಂದಲೇ ದೃಢಪಟ್ಟಿದೆ. ಕೊರೊನಾದಿಂದ ಸಾವಿನ ಸಂಖ್ಯೆ ಕೂಡ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂಥ ಸ್ಥಿತಿಯಲ್ಲಿ 136 ಕೋಟಿ ಜನಸಂಖ್ಯೆಯ ಭಾರತದ ಜನರನ್ನು ರಕ್ಷಿಸಲು ಎಲ್ಲರಿಗೂ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡುವುದೊಂದೇ ಮಾರ್ಗ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೇ, ಸದ್ಯ ಭಾರತದಲ್ಲಿ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಈ ಎರಡೂ ಕಂಪನಿಗಳಿಗೂ ಭಾರತಕ್ಕೆ ಅಗತ್ಯವಿರುವಷ್ಟು ಲಸಿಕೆಯನ್ನು ಶೀಘ್ರವಾಗಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಕಳೆದ ಸೋಮವಾರ ರಷ್ಯಾದ ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೂ ಡಿಸಿಜಿಐ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಮೂರನೇ ಲಸಿಕೆಯಾಗಿ ಸ್ಪುಟ್ನಿಕ್ ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ರಷ್ಯಾದ ಸ್ಪುಟ್ನಿಕ್ ಲಸಿಕೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಭಾರತಕ್ಕೆ ಬರಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮೇ ತಿಂಗಳಲ್ಲಿ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬರಲಿದೆ ಎಂದು ರಷ್ಯಾದ ಕಂಪನಿಯೊಂದಿಗೆ ಉತ್ಪಾದನಾ ಒಪ್ಪಂದ ಮಾಡಿಕೊಂಡರಿರುವ ಹೈದರಾಬಾದ್​ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿ ಹೇಳುತ್ತಿದೆ. ಜೊತೆಗೆ ಭಾರತದಲ್ಲಿ ಉತ್ಪಾದನೆಯಾದ ಲಸಿಕೆಯ ಪೈಕಿ ಈಗಾಗಲೇ 6.5 ಕೋಟಿ ಡೋಸ್ ಲಸಿಕೆಯನ್ನು 84 ದೇಶಗಳಿಗೆ ರಫ್ತು ಕೂಡ ಮಾಡಲಾಗಿದೆ. ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಕೊರತೆ ಎದುರಾಗಿದೆ.

ಲಸಿಕೆ ಕೊರತೆ ನೀಗಿಸಲು ಎರಡು ಆಯ್ಕೆ ಲಸಿಕೆಯ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರದ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯದಾಗಿ ದೇಶದಲ್ಲಿ ಕೊರೊನಾ ಲಸಿಕೆಯ ಉತ್ಪಾದನೆಯನ್ನು ಹೆಚ್ಚಳ ಮಾಡುವುದು. ಎರಡನೇಯದಾಗಿ ವಿದೇಶಗಳಲ್ಲಿ ಒಪ್ಪಿಗೆ ಪಡೆದ ಲಸಿಕೆಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುವುದು. ಈ ಎರಡು ಆಯ್ಕೆಗಳನ್ನು ಒಟ್ಟಿಗೆ ಈಗ ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಭಾರತ್ ಬಯೋಟೆಕ್ ಕಂಪನಿಗೆ ಸೂಚಿಸಿದೆ. ಅದರಂತೆ ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಕರ್ನಾಟಕದ ಕೋಲಾರದ ಮಾಲೂರಿನಲ್ಲಿರುವ ತನ್ನ ಘಟಕದಲ್ಲಿ ಇದೇ ಜುಲೈನಿಂದ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯನ್ನು ಆರಂಭಿಸಲಿದೆ.

ಮಾಲೂರು ಘಟಕದಲ್ಲಿ ಪ್ರತಿ ತಿಂಗಳು 70 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯಾಗಲಿದೆ. ಈ ಮೂಲಕ ಕೊರೊನಾ ವೈರಸ್ ವಿರುದ್ಧದ ಲಸಿಕೆ ಉತ್ಪಾದನೆಗೆ ಕರ್ನಾಟಕ ಕೂಡ ತನ್ನ ಕೊಡುಗೆ ನೀಡಿದಂತಾಗುತ್ತೆ. ಕರ್ನಾಟಕದಲ್ಲಿ ಕೊರೊನಾ ಲಸಿಕೆಯ ಉತ್ಪಾದನೆ ಕನ್ನಡಿಗರಿಗೂ ಸಂತೋಷದ ವಿಚಾರ. ಸದ್ಯಕ್ಕೆ ಭಾರತ್ ಬಯೋಟೆಕ್ ಕಂಪನಿಯು ತನ್ನ ಹೈದರಾಬಾದ್‌ ಘಟಕದಲ್ಲಿ ಪ್ರತಿ ತಿಂಗಳು 50 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿದೆ. ಹೈದರಾಬಾದ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಜೂನ್, ಜುಲೈ ವೇಳೆಗೆ ದುಪ್ಪಟ್ಟುಗೊಳಿಸಲಿದೆ. ಅಂದರೇ, ತಿಂಗಳಿಗೆ 1 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲಿದೆ. ಇದೇ ರೀತಿ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೂಡ ಪುಣೆಯಲ್ಲೇ ತನ್ನ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ: Explainer: ಭಾರತದಲ್ಲಿ ಈಗ ಹರಡುತ್ತಿರುವ ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಸಂಪೂರ್ಣ ಭಿನ್ನ: ಏನಿದು 2ನೇ ಅಲೆ? ಏಕಿಷ್ಟು ಆತಂಕ?

Covid Vaccine

ಕೊವಿಡ್ ಲಸಿಕೆ

ವಿದೇಶದಲ್ಲಿ ಒಪ್ಪಿಗೆ ಪಡೆದ ಲಸಿಕೆಗಳಿಗೆ ನಿಯಮ ಸಡಿಲಿಕೆ ‘ಅಸಾಮಾನ್ಯ ಪರಿಸ್ಥಿತಿಯಲ್ಲಿ ಅಸಾಮಾನ್ಯ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು’ ಎನ್ನುವ ಹಾಗೆ ಭಾರತ ಸರ್ಕಾರವು ತೀರ್ಮಾನ ತೆಗೆದುಕೊಂಡಿದೆ. ಭಾರತದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ವಿದೇಶಗಳಲ್ಲಿ ಕೊರೊನಾ ವೈರಸ್ ವಿರುದ್ಧ ಬಳಕೆಗೆ ಅನುಮೋದನೆ ಪಡೆದಿರುವ ಲಸಿಕೆಗಳನ್ನು ಭಾರತದಲ್ಲಿ ತುರ್ತಾಗಿ ಬಳಕೆ ಮಾಡಲು ಒಪ್ಪಿಗೆ ನೀಡಿದೆ. ಆಮೆರಿಕಾದ ಎಫ್‌ಡಿಎ, ಇಂಗ್ಲೆಂಡ್‌ನ ಎಂಎಚ್‌ಆರ್‌, ಜಪಾನ್ ಪಿಎಂಡಿಎ, ಯೂರೋಪ್‌ನ ಇಎಂಎನಿಂದ ಅನುಮೋದನೆ ಪಡೆದ ಕೊರೊನಾ ಲಸಿಕೆಗಳನ್ನು ಭಾರತದಲ್ಲಿ ಜನರ ತುರ್ತು ಬಳಕೆಗೆ ಅನುಮೋದಿಸಲು ನಿರ್ಧರಿಸಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯಲ್ಲಿರುವ ಕೊರೊನಾ ಲಸಿಕೆಗಳನ್ನು ಭಾರತದಲ್ಲಿ ಜನರ ತುರ್ತು ಬಳಕೆಗೆ ಅನುಮೋದಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಭಾರತದಲ್ಲಿ ಕೊರೊನಾ ಲಸಿಕೆಗಳ ಲಭ್ಯತೆಯ ಪ್ರಮಾಣ ಹೆಚ್ಚಾಗಲಿದೆ. ಭಾರತದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಆದಷ್ಟು ಬೇಗ ಲಸಿಕೆ ನೀಡಲು ಸಾಧ್ಯವಾಗುತ್ತೆ. ಭಾರತವು 136 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶ. ಇದುವರೆಗೂ 11 ಕೋಟಿ ಜನರಿಗೆ ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲಾಗಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಇದುವರೆಗೂ ಶೇ 10 ರಷ್ಟು ಜನರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಈಗ ಕೊರೊನಾದ ಎರಡನೇ ಅಲೆಯಲ್ಲಿ ಬೇರೆ, ಕೊರೊನಾ ಪ್ರಕರಣಗಳು ವೇಗವಾಗಿ ಹರಡುತ್ತಿವೆ. ಕೊರೊನಾದಿಂದ 45 ವರ್ಷದೊಳಗಿನವರೇ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಕಟುಸತ್ಯ ಕೇಂದ್ರ ಸರ್ಕಾರ ಹಾಗೂ ಜನರ ಮುಂದಿದೆ. ಹೀಗಾಗಿ ದೇಶದ ಜನರ ಪ್ರಾಣವನ್ನು ಉಳಿಸಲು ಲಸಿಕೆಯ ನಿಯಮಗಳನ್ನು ಸಡಿಲಿಕೆ ಮಾಡಿ ವೇಗವಾಗಿ ವಿದೇಶಿ ಕಂಪನಿಗಳ ಲಸಿಕೆಗಳ ತುರ್ತು ಬಳಕೆಗೆ ಒಪ್ಪಿಗೆ ನೀಡುವುದು ಅನಿವಾರ್ಯವಾಗಿತ್ತು.

ಭಾರತದಲ್ಲಿ ಸಾಮಾನ್ಯವಾಗಿ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಜಿಸಿಐ) ಒಪ್ಪಿಗೆ ನೀಡಬೇಕೆಂದರೇ ಕೆಲವೊಂದು ನಿಯಮಗಳಿವೆ. ವಿದೇಶಗಳ ಡ್ರಗ್ಸ್ ಕಂಟ್ರೋಲರ್​ಗಳಿಂದ ಲಸಿಕೆಗೆ ಒಪ್ಪಿಗೆ ಸಿಕ್ಕಿದ್ದರೂ, ಭಾರತದಲ್ಲಿ ಬ್ರಿಡ್ಜ್ ಸ್ಟಡಿ ನಡೆಸಬೇಕಾಗಿತ್ತು. ಅಂದರೆ, ಭಾರತದ ಜನರ ಮೇಲೆ ವಿದೇಶಿ ಲಸಿಕೆಗಳನ್ನು ಪ್ರಯೋಗಿಸಿ, ಆ ಲಸಿಕೆಗಳು ಭಾರತದ ಜನರಿಗೆ ಸೂಕ್ತವೇ, ಜನರಿಗೆ ಏನಾದರೂ ಸೈಡ್ ಎಫೆಕ್ಟ್ ಆಗುತ್ತದೆಯೇ ಇಲ್ಲವೇ ಎಂದು ಅಧ್ಯಯನ ನಡೆಸಬೇಕಾಗಿತ್ತು. ವಿದೇಶದ ಲಸಿಕೆಗಳಿಂದ ಭಾರತದ ಹೊಸ ಪ್ರದೇಶದಲ್ಲಿ ಹೇಗೆ ಕೆಲಸ ಮಾಡ್ತಾವೆ ಎನ್ನುವ ಬ್ರಿಡ್ಜ್ ಸ್ಟಡಿ ನಡೆಸಬೇಕಾಗಿತ್ತು. ಈ ಬ್ರಿಡ್ಜ್ ಸ್ಟಡಿ ನಡೆಸದೇ, ವಿದೇಶಿ ಕಂಪನಿಯ ಲಸಿಕೆಗಳಿಗೆ ಭಾರತದಲ್ಲಿ ಜನರ ತುರ್ತು ಬಳಕೆಗೆ ಒಪ್ಪಿಗೆ ನೀಡುತ್ತಿರಲಿಲ್ಲ.

ಭಾರತದಲ್ಲಿ ಈಗಾಗಲೇ ಎರಡು ವಿದೇಶಿ ಲಸಿಕೆಗಳು ಜನರ ತುರ್ತು ಬಳಕೆಗೆ ಒಪ್ಪಿಗೆ ಪಡೆದಿವೆ. ಇಂಗ್ಲೆಂಡ್‌ನ ಆಕ್ಸ್​ಫರ್ಡ್​ ಮತ್ತು ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಲಸಿಕೆ ಹಾಗೂ ರಷ್ಯಾದ ಗಾಮಲೇಯ ವಿಶ್ವವಿದ್ಯಾಲಯದ ಸ್ಪುಟ್ನಿಕ್ ಲಸಿಕೆಗಳು ಜನರ ತುರ್ತು ಬಳಕೆಗೆ ಒಪ್ಪಿಗೆ ಪಡೆದಿವೆ. ಹೀಗೆ ಡಿಸಿಜಿಐನಿಂದ ಈ ಎರಡು ಲಸಿಕೆಗಳಿಗೆ ಒಪ್ಪಿಗೆ ನೀಡುವ ಮುನ್ನ ಈ ಎರಡು ಲಸಿಕೆಗಳ ಬಗ್ಗೆ ಭಾರತದಲ್ಲಿ ಬ್ರಿಡ್ಜ್ ಸ್ಟಡಿ ನಡೆಸಲಾಗಿತ್ತು. ಇಂಗ್ಲೆಂಡ್‌ನ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಕಂಪನಿ ಬ್ರಿಡ್ಜ್ ಸ್ಟಡಿ ನಡೆಸಿತ್ತು. ಬ್ರಿಡ್ಜ್ ಸ್ಟಡಿಯ ಅಂಕಿಅಂಶಗಳನ್ನು ಸೆರಮ್ ಇನ್ಸ್ ಟಿಟ್ಯೂಟ್ ಸಿಡಿಎಸ್‌ಸಿಓ ವಿಷಯ ತಜ್ಞರ ಸಮಿತಿಗೆ ಸಲ್ಲಿಸಿತ್ತು. ಇನ್ನೂ ರಷ್ಯಾದ ಸ್ಪುಟ್ನಿಕ್ ಲಸಿಕೆಯ ಬಗ್ಗೆ ಹೈದರಾಬಾದ್‌ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿ ಬ್ರಿಡ್ಜ್ ಸ್ಟಡಿ ನಡೆಸಿತ್ತು. ಈ ಬ್ರಿಡ್ಜ್ ಸ್ಟಡಿ ನಡೆಸಲು ಅನೇಕ ತಿಂಗಳುಗಳ ಕಾಲಾವಕಾಶ ತೆಗೆದುಕೊಂಡಿದ್ದವು. ಎರಡು ವಿದೇಶಿ ಲಸಿಕೆಗಳೂ ಭಾರತದ ಜನರಿಗೆ ನೀಡಲು ಸುರಕ್ಷಿತ ಎನ್ನುವುದು ಬ್ರಿಡ್ಜ್ ಸ್ಟಡಿಯಲ್ಲಿ ಸಾಬೀತಾದ ಬಳಿಕವಷ್ಟೇ ಡಿಸಿಜಿಐ ಜನರ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ.

ಆದರೇ, ಈಗ ಕೊರೊನಾ ಲಸಿಕೆಯ ವಿಷಯದಲ್ಲಿ ಈ ಬ್ರಿಡ್ಜ್ ಸ್ಟಡಿ ನಡೆಸುವುದರಿಂದ ವಿನಾಯಿತಿ ನೀಡಲಾಗಿದೆ. ಭಾರತದ ತಜ್ಞರ ಸಮಿತಿಯ ಸಮಗ್ರ ಪರಿಶೀಲನೆಯ ಬಳಿಕವೇ ಈ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೇ, ವಿದೇಶಿ ಲಸಿಕೆಗಳ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಿದ ಬಳಿಕ ಬ್ರಿಡ್ಜ್ ಸ್ಟಡಿ ನಡೆಸಲಾಗುತ್ತೆ. ವಿದೇಶಿ ಲಸಿಕೆಗಳನ್ನು ಪಡೆದ ಮೊದಲ 100 ಜನರನ್ನು ಏಳು ದಿನಗಳವರೆಗೂ ನಿಗಾದಲ್ಲಿರಿಸಲಾಗುತ್ತೆ. ಈ ಅವಧಿಯಲ್ಲಿ ಏನಾದರೂ ಸೈಡ್ ಎಫೆಕ್ಟ್, ಆರೋಗ್ಯ ಸಮಸ್ಯೆ ಕಂಡು ಬರುತ್ತಾವೆಯೇ ಎಂದು ಅಧ್ಯಯನ, ಪರಿಶೀಲನೆ ನಡೆಸಲಾಗುತ್ತೆ.

ಇದನ್ನೂ ಓದಿ: Explainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು? 

Johnson-&-Johnson-Vaccine

ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ (ಸಂಗ್ರಹ ಚಿತ್ರ)

ಕೇಂದ್ರ ಸರ್ಕಾರದ ನಿರ್ಧಾರದ ಪರಿಣಾಮ ಏನು? ಕೇಂದ್ರ ಸರ್ಕಾರದ ನಿರ್ಧಾರವು ದಿಟ್ಟ ಮತ್ತು ದೊಡ್ಡ ತೀರ್ಮಾನ. ಇದರಿಂದ ಈಗಾಗಲೇ ವಿದೇಶಗಳಲ್ಲಿ ಬಳಕೆಯಲ್ಲಿರುವ ಕೊರೊನಾ ವೈರಸ್ ವಿರುದ್ಧದ ಲಸಿಕೆಗಳು ಸುಲಭವಾಗಿ ಮತ್ತು ಸುಸೂತ್ರವಾಗಿ ಭಾರತಕ್ಕೆ ಎಂಟ್ರಿಯಾಗಲಿವೆ. ಇದು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಬಹುದು. ಭಾರತವು ಈಗ ವಿಶ್ವದಲ್ಲೇ ಕೊರೊನಾ ಬಾಧಿತ ಎರಡನೇ ಅತಿದೊಡ್ಡ ದೇಶ. ಆಮೆರಿಕಾದಲ್ಲಿ 3 ಕೋಟಿಗೂ ಹೆಚ್ಚು ಮಂದಿ ಕೊರೊನಾಪೀಡಿತರಾಗಿದ್ದರೇ, ಭಾರತದಲ್ಲಿ 1.4 ಕೋಟಿ ಜನರು ಕೊರೊನಾಪೀಡಿತರಾಗಿದ್ದಾರೆ. ಬ್ರೆಜಿಲ್ ದೇಶ ಈಗ ಕೊರೊನಾಪೀಡಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎರಡನೇ ಅಲೆಯಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಏಪ್ರಿಲ್‌ 15ರ ಗುರುವಾರ ಎರಡು ಲಕ್ಷದ ಗಡಿ ದಾಟಿ ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಹೀಗಾಗಿ ಹೆಚ್ಚಿನ ಕಂಪನಿಗಳ ಲಸಿಕೆಯಿಂದ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತೆ.

ಯಾವ್ಯಾವ ವಿದೇಶಿ ಲಸಿಕೆಗಳು ಭಾರತಕ್ಕೆ ಎಂಟ್ರಿ ಆಗಬಹುದು? ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿದೇಶಗಳು ಈಗಾಗಲೇ ಕೆಲವೊಂದು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿವೆ. ಇಂಗ್ಲೆಂಡ್‌ ಮೂರು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದೆ. ಇಂಗ್ಲೆಂಡ್‌ನಲ್ಲಿ ಫೈಜರ್, ಮಾಡೆರ್ನಾ ಹಾಗೂ ಆಕ್ಸ್​ಫರ್ಡ್-ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಆಮೆರಿಕಾದ ಎಫ್​ಡಿಎ ಕೂಡ ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಮತ್ತು ಮಾಡೆರ್ನಾ ಕಂಪನಿಯ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಯೂರೋಪಿನಲ್ಲಿ ಆಮೆರಿಕಾದಿಂದ ಅನುಮೋದನೆ ಪಡೆದ ಮೂರು ಲಸಿಕೆಗಳ ಜೊತೆಗೆ ಆಕ್ಸ್​ಫರ್ಡ್-ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡಲಾಗಿದೆ.

ಜಪಾನ್ ದೇಶವು ಫೈಜರ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಜಪಾನ್​ನಲ್ಲಿ ಆಕ್ಸ್​ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ, ಮಾಡೆರ್ನಾ ಲಸಿಕೆಗಳು ತುರ್ತು ಬಳಕೆಗೆ ಅನುಮೋದನೆಗೆ ಅರ್ಜಿ ಸಲ್ಲಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಫೈಜರ್, ಆಕ್ಸ್​ಫರ್ಡ್-ಅಸ್ಟ್ರಾಜೆನೆಕಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಗಳಿವೆ. ಇವುಗಳ ಪೈಕಿ ಫೈಜರ್, ಮಾಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳ ಲಸಿಕೆಗಳು ಭಾರತಕ್ಕೆ ಎಂಟ್ರಿಯಾಗುವ ಹಾದಿ ಸುಗಮವಾಗಿದೆ.

ಇದನ್ನೂ ಓದಿ: ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

covid Vaccine

ಮುಂಬೈಯಲ್ಲಿ ಕೊವಿಡ್ ಲಸಿಕೆ ವಿತರಣೆ ಕೇೆಂದ್ರ ಮುಂದೆ ನೇತು ಹಾಕಿದ ಬೋರ್ಡ್

ವಿದೇಶಿ ಲಸಿಕೆಗಳ ಬಗ್ಗೆ 3 ದಿನದಲ್ಲಿ ತೀರ್ಮಾನ

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುರುವಾರ ಮತ್ತೊಂದು ಆದೇಶವನ್ನು ಡಿಸಿಜಿಐಗೆ ನೀಡಿದೆ. ಇದರ ಪ್ರಕಾರ ವಿದೇಶಿ ಲಸಿಕಾ ಕಂಪನಿಗಳು ಭಾರತದಲ್ಲಿ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿದ್ದರೆ, ಆ ಅರ್ಜಿಯ ಬಗ್ಗೆ ಮೂರು ಕೆಲಸದ ದಿನಗಳಲ್ಲಿ ತೀರ್ಮಾನ ಕೈಗೊಳ್ಳಬೇಕು. ಸಿಡಿಎಸ್‌ಸಿಒ ವಿಷಯ ತಜ್ಞರ ಸಮಿತಿ ಹಾಗೂ ಡಿಸಿಜಿಐ ವಿದೇಶಿ ಲಸಿಕೆಯನ್ನು ಜನರ ತುರ್ತು ಬಳಕೆಗೆ ಅನುಮೋದಿಸಲು ಕೇವಲ 3 ಕೆಲಸದ ದಿನ ಮಾತ್ರ ತೆಗೆದುಕೊಳ್ಳಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಇದು ಭಾರತದಲ್ಲಿ ವಿದೇಶಿ ಲಸಿಕೆಗಳನ್ನು ಜನರ ತುರ್ತು ಬಳಕೆಗೆ ಅನುಮೋದಿಸಲು ಹಾಗೂ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಶೀಘ್ರಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವಾಗಿದೆ. ಈ ಮೊದಲು ಈ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ಯಾವುದೇ ರೋಗದ ವಿರುದ್ಧದ ಲಸಿಕೆಗೆ ಅನುಮೋದನೆ ನೀಡಲು ಭಾರತ ಹಾಗೂ ವಿಶ್ವದಲ್ಲಿ ವರ್ಷಾನುಗಟ್ಟಲೇ ಸಮಯಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಆದರೇ, ಇದು ಕೊರೊನಾದಂಥ ಸಾಂಕ್ರಮಿಕ ರೋಗದ ಸಮಯ. ಸಾಂಕ್ರಾಮಿಕ ರೋಗಗಳಿಂದ ಮಾನವ ಕುಲವನ್ನು ರಕ್ಷಿಸಲು ಇಂಥ ಶೀಘ್ರಗತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ.

ಭಾರತಕ್ಕೆ ಯಾವಾಗ ಫೈಜರ್, ಮಾಡೆರ್ನಾ ಲಸಿಕೆ ಬರುತ್ತವೆ? ಭಾರತಕ್ಕೆ ಫೈಜರ್, ಮಾಡೆರ್ನಾ ಲಸಿಕೆಗಳ ಎಂಟ್ರಿ ಹಾದಿಯೇನೋ ಸುಗಮವಾಗಿದೆ. ಆದರೇ, ಈ ಕಂಪನಿಗಳ ಕೊರೊನಾ ಲಸಿಕೆ ಭಾರತಕ್ಕೆ ಆದಷ್ಟು ಬೇಗ ಬರುವ ಲಕ್ಷಣ ಕಾಣುತ್ತಿಲ್ಲ. ಏಕೆಂದರೆ, ಫೈಜರ್ ಕಂಪನಿಯು ಜನವರಿ ತಿಂಗಳಲ್ಲೇ ಭಾರತದ ಸಿಡಿಎಸ್‌ಸಿಓ ಮುಂದೆ ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿ ಬಳಿಕ ಅರ್ಜಿಯನ್ನು ಹಿಂತೆಗೆದುಕೊಂಡಿತ್ತು. ಭಾರತದಲ್ಲಿ ಮಾಡೆರ್ನಾ, ಫೈಜರ್ ಕಂಪನಿಗಳ ಪ್ರತಿ ಡೋಸ್ ಲಸಿಕೆಯ ಬೆಲೆ ಎಷ್ಟಿರಬೇಕು ಎನ್ನುವ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ಈ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತ್ತಿದೆ. ಫೈಜರ್, ಮಾಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯ ಭಾರತದ ಬೆಲೆ ಇನ್ನೂ ನಿಗದಿಯಾಗಿಲ್ಲ. ಆಮೆರಿಕಾದಲ್ಲಿ ಈ ಲಸಿಕೆಗಳ ಬೆಲೆ ದುಬಾರಿ. ಆದರೆ, ಭಾರತ ಕೂಡ ದುಬಾರಿ ಬೆಲೆಯಲ್ಲಿ ಲಸಿಕೆ ಖರೀದಿಸಲು ಸಾಧ್ಯವಾಗಲ್ಲ. ಇನ್ನೂ ಬೆಲೆ ನಿಗದಿಯ ಮಾತುಕತೆಯೇ ಮುಗಿಯದೇ ಇರುವುದರಿಂದ ಫೈಜರ್, ಮಾಡೆರ್ನಾ ಲಸಿಕೆಗಳು ಬೇಗ ಭಾರತಕ್ಕೆ ಬರಲ್ಲ.

ಇಷ್ಟೇ ಅಲ್ಲ, ಫೈಜರ್, ಮಾಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳ ಜೊತೆಗೆ ಭಾರತ ಸರ್ಕಾರವು ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವ ಬಗ್ಗೆ ಮುಂಚೆಯೇ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು. ಆದರೇ ಕಳೆದ ವರ್ಷ ಭಾರತವು ಈ ಕಂಪನಿಗಳ ಜೊತೆಗೆ ಲಸಿಕೆ ಖರೀದಿಯ ಒಪ್ಪಂದವನ್ನೇ ಮಾಡಿಕೊಳ್ಳದೇ ಮೈ ಮರೆತಿದೆ.

ಫೈಜರ್, ಮಾಡೆರ್ನಾ ಕಂಪನಿಯ ಲಸಿಕೆಯ ಖರೀದಿಗೆ ಈಗಾಗಲೇ 12 ದೇಶಗಳು ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಲಸಿಕೆ ಪಡೆದುಕೊಳ್ಳಲು ಸರದಿಯಲ್ಲಿ ನಿಂತಿವೆ. ಆಮೆರಿಕ ದೇಶವು ಫೈಜರ್, ಮಾಡೆರ್ನಾದಿಂದ ಲಸಿಕೆಯ ಸಂಶೋಧನೆ ನಡೆಯುತ್ತಿದ್ದಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿದೆ. ಫೈಜರ್, ಮಾಡೆರ್ನಾ ಕಂಪನಿಗಳು ಮೇ ತಿಂಗಳ ಅಂತ್ಯದ ವೇಳೆಗೆ ತಲಾ 20 ಕೋಟಿ ಡೋಸ್ ಲಸಿಕೆಯನ್ನು ಆಮೆರಿಕಾಕ್ಕೆ ಪೂರೈಸಬೇಕಾಗಿದೆ. ಜುಲೈ ಅಂತ್ಯದ ವೇಳೆಗೆ ಆಮೆರಿಕಾಕ್ಕೆ ಫೈಜರ್ ಕಂಪನಿಯು 60 ಕೋಟಿ ಡೋಸ್ ಲಸಿಕೆ ಪೂರೈಸಬೇಕು. ಫೈಜರ್ ಕಂಪನಿಗೆ ಈಗಾಗಲೇ ಆಮೆರಿಕಾವು 200 ಕೋಟಿ ಡಾಲರ್ ಹಣ ನೀಡಿದೆ. ಜೊತೆಗೆ ಫೈಜರ್ ಕಂಪನಿಯು 2021ರ ಅಂತ್ಯದ ವೇಳೆಗೆ ಯೂರೋಪಿಯನ್ ಯೂನಿಯನ್​ಗೆ 50 ಕೋಟಿ ಡೋಸ್ ಲಸಿಕೆ ಪೂರೈಸಬೇಕು.

ಮಾಡೆರ್ನಾ ಕಂಪನಿಯು ಆಮೆರಿಕಾಕ್ಕೆ 30 ಕೋಟಿ ಡೋಸ್ ಲಸಿಕೆ ಪೂರೈಸಬೇಕು. ಈ ವರ್ಷದ ಅಂತ್ಯದ ವೇಳೆಗೆ ಯೂರೋಪಿಯನ್ ಯೂನಿಯನ್​ಗೆ 15 ಕೋಟಿ ಡೋಸ್ ಲಸಿಕೆ ಪೂರೈಸಬೇಕು. ಜಪಾನ್​ಗೆ 5 ಕೋಟಿ, ಕೆನಡಾ, ದಕ್ಷಿಣ ಕೋರಿಯಾಗೆ 5 ಕೋಟಿ ಡೋಸ್ ಲಸಿಕೆಯನ್ನು ಮಾಡೆರ್ನಾ ಕಂಪನಿ ಪೂರೈಸಬೇಕು. ಈ ಒಪ್ಪಂದಗಳನ್ನು ಉಲಂಘಿಸಲು ಫೈಜರ್, ಮಾಡೆರ್ನಾ ಕಂಪನಿಗಳಿಗೆ ಸಾಧ್ಯವಾಗಲ್ಲ. ಈ ಖರೀದಿ ಒಪ್ಪಂದಗಳನ್ನು ಫೈಜರ್, ಮಾಡೆರ್ನಾ ಪಾಲಿಸಲೇಬೇಕು.

ಫೈಜರ್, ಮಾಡೆರ್ನಾ ಕಂಪನಿಯ ಲಸಿಕೆಗಳನ್ನು ಮೈನಸ್ 20ರಿಂದ ಮೈನಸ್ 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂಗ್ರಹಿಸಿ, ಸಾಗಾಟ ಮಾಡಬೇಕು. ಹೀಗೆ ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಸಂಗ್ರಹಿಸಿ, ಸಾಗಾಟ ಮಾಡುವ ಫ್ರಿಡ್ಜ್, ರೆಫ್ರಿಜರೇಟರ್​ಗಳ ದೊಡ್ಡ ಮಟ್ಟದ ಮೂಲಸೌಕರ್ಯ ಭಾರತದಲ್ಲಿ ಇಲ್ಲ. ಹೀಗಾಗಿ ಭಾರತ ಸರ್ಕಾರವು ವಿದೇಶಿ ಲಸಿಕೆಗಳಿಗೆ ಬ್ರಿಡ್ಜ್ ಸ್ಟಡಿಯಿಂದ ವಿನಾಯಿತಿ ನೀಡಿದರೂ, ಕೇವಲ ಮೂರೇ ದಿನದಲ್ಲಿ ಲಸಿಕೆಗೆ ಅನುಮೋದನೆ ನೀಡಲು ಸಿದ್ದವಾಗಿದ್ದರೂ, ಈ ಲಸಿಕೆಗಳು ಬೇಗನೇ ಭಾರತಕ್ಕೆ ಬರಲ್ಲ.

ಇದನ್ನೂ ಓದಿ: Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ

SPUTNIK-V

ಸ್ಪುಟ್ನಿಕ್​-5 ಲಸಿಕೆ

ರಷ್ಯಾದ ಸ್ಪುಟ್ನಿಕ್ ಲಸಿಕೆ ಬೆಲೆ ಎಷ್ಟು? ಭಾರತದ ಡಿಸಿಜಿಐ ರಷ್ಯಾದ ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಸ್ಪುಟ್ನಿಕ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇ 91.6 ರಷ್ಟು ಪರಿಣಾಮಕಾರಿ. ಜಗತ್ತಿನಲ್ಲಿ ಕೊರೊನಾ ವೈರಸ್ ವಿರುದ್ಧ ಜನರ ಬಳಕೆಗೆ ಅನುಮೋದನೆ ಪಡೆದ ಮೊದಲ ಲಸಿಕೆಯೇ ಸ್ಪುಟ್ನಿಕ್. ಇದುವರೆಗೂ 55 ದೇಶಗಳಲ್ಲಿ ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 19 ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂಗ್ರಹಿಸಿಡಬೇಕು. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಪ್ರತಿ ಡೋಸ್ ಬೆಲೆ ಎಷ್ಟು ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಪ್ರತಿ ಡೋಸ್ ಬೆಲೆಯು 10 ಡಾಲರ್​ಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. 10 ಡಾಲರ್ ಅಂದರೇ ಭಾರತದ ರೂಪಾಯಿ ಲೆಕ್ಕದಲ್ಲಿ ₹ 750 ಆಗಲಿದೆ. ಸದ್ಯ ಭಾರತದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗಿಂತ ರಷ್ಯಾದ ಸ್ಪುಟ್ನಿಕ್ ಲಸಿಕೆಯು ದುಬಾರಿಯಾಗಲಿದೆ.

ಭಾರತವು ರಷ್ಯಾದೊಂದಿಗೆ ಉತ್ತಮ ರಾಜತಾಂತ್ರಿಕ ಭಾಂಧವ್ಯ ಹೊಂದಿದೆ. ಜೊತೆಗೆ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ದೊಡ್ಡ ದೇಶವಾಗಿರುವುದರಿಂದ ಕೋಟಿಗಟ್ಟಲೇ ಡೋಸ್​ ಖರೀದಿಸುವುದರಿಂದ ಬೆಲೆಯಲ್ಲಿ ಚೌಕಾಸಿ ನಡೆಸಲು ಅವಕಾಶ ಇದೆ. ಪ್ರಾರಂಭದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ರಷ್ಯಾದಿಂದಲೇ ಅಮದು ಮಾಡಿಕೊಳ್ಳಬೇಕಾಗಿದೆ. ಬಳಿಕ ಭಾರತದಲ್ಲೇ ಹೆಟೆರೋ ಬಯೋಫಾರ್ಮ್ ಕಂಪನಿಯು ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸಲಿದೆ. ಭಾರತದಲ್ಲೇ ಲಸಿಕೆಯ ಉತ್ಪಾದನೆ ಆರಂಭವಾದರೇ, ಬೆಲೆ ಕಡಿಮೆಯಾಗಬಹುದು. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡುವುದು ಭಾರತಕ್ಕೆ ಸವಾಲು. ಮೊದಲ ಡೋಸ್ ಸ್ಪುಟ್ನಿಕ್ ಲಸಿಕೆ ಪಡೆದ 21 ದಿನದ ಬಳಿಕ ಎರಡನೇ ಡೋಸ್ ಲಸಿಕೆ ಪಡೆಯಬೇಕು. ಭಾರತದಲ್ಲಿ ಹೈದರಾಬಾದ್‌ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿಯು 25 ಕೋಟಿ ಡೋಸ್‌ ಸ್ಪುಟ್ನಿಕ್ ಲಸಿಕೆಯ ಮಾರ್ಕೆಟಿಂಗ್ ಮತ್ತು ಹಂಚಿಕೆಯ ಹಕ್ಕುನ್ನು ಪಡೆದುಕೊಂಡಿದೆ. ಪ್ರತಿ ಡೋಸ್ ಮಾರಾಟಕ್ಕೆ ರೆಡ್ಡೀಸ್ ಲ್ಯಾಬೋರೇಟರಿಗೆ 150 ರೂಪಾಯಿ ಲಾಭ ಸಿಗಲಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಅಮದು ಆಗಬಹುದು ಎಂದು ಹೇಳಲಾಗುತ್ತಿದೆ.

(Govt of India keen to give permission for foreign vaccine companies will it solve Indias vaccine problem)

ಇದನ್ನೂ ಓದಿ: 45 ವರ್ಷದ ಒಳಗಿನವರಿಗೂ ಶೀಘ್ರ ಕೋವಿಡ್ ಲಸಿಕೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸುಳಿವು

ಇದನ್ನೂ ಓದಿ: ಮೊದಲು ದೇಶದ ಜನರಿಗೆ ಲಸಿಕೆ ಕೊಡಿ, ನಂತರ ವಿದೇಶಗಳಿಗೆ ರಫ್ತು ಮಾಡಿ: ಸೋನಿಯಾ ಗಾಂಧಿ ಆಗ್ರಹ

Published On - 6:22 am, Fri, 16 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್